ಅಪ್ಪನ ವಿರುದ್ಧ ಮಗಳು ಮಾತನಾಡದಂತೆ ಸ್ಟೇ ತಂದ CP Yogeshwara​ ಪತ್ನಿ

Nisha Yogeshwar
Published on

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪೈಕಿ ಚನ್ನಪಟ್ಟಣ (Channapatna) ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್​ ಕಣವಾಗಿ ಮಾರ್ಪಟ್ಟಿದ್ದು, ಒಂದಿಲ್ಲೊಂದು ಕಾರಣಕ್ಕೆ ಜನರ ಗಮನ ಸೆಳೆಯುತ್ತಿದೆ. ಇನ್ನೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ (CP Yogeshwara) ವಿರುದ್ಧ ಪುತ್ರಿ ನಿಶಾ ನಿರಂತರವಾಗಿ ಹೇಳಿಕೆಗಳನ್ನು ಕೊಡುತ್ತಿದ್ದು, ಯೋಗೇಶ್ವರ್​ಗೆ ಇದು ಮುಳುವಾಗುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಯೋಗೇಶ್ವರ್​ ಅವರ ಪತ್ನಿ ಕೋರ್ಟ್​ನಿಂದ ಸ್ಟೇ ತಂದಿದ್ದಾರೆ.

ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ (CP Yogeshwara) ಅವರ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಾ ಬಂದಿರುವ ಅವರ ಮಗಳು ನಿಶಾ (Nisha) ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಉಪಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ವಿಡಿಯೋ ಉಪಚುನಾವಣೆಯ ಮೇಲೆ ಪರಿಣಾಮ ಬೀರಬಹುದೆಂದು ಅರಿತ ಯೋಗೇಶ್ವರ್​ ಅವರ ಎರಡನೇ ಪತ್ನಿ ಶೀಲಾ (Sheela) ಹೈಕೋರ್ಟ್​ ಮೆಟ್ಟಿಲೇರಿದ್ದು, ಸ್ಟೇ ತಂದಿದ್ದಾರೆ.

ಯೋಗೇಶ್ವರ್ ವಿರುದ್ಧ ಮಗಳು ನಿಶಾ ಮಾತನಾಡದಂತೆ ಮಲತಾಯಿ (ಯೋಗೇಶ್ವರ್ ಅವರ 2ನೇ ಹೆಂಡತಿ) ಕೋರ್ಟ್‌ನಿಂದ ತಡೆಯಾಜ್ಞೆಯನ್ನು ತಂದಿದ್ದಾರೆ. ಯೋಗೇಶ್ವರ್ ವಿರುದ್ಧ ಅವರ ಮೊದಲ ಪತ್ನಿಯ ಮಗಳು ಯಾವುದೇ ಹೇಳಿಕೆ ನೀಡದಂತೆ ತಡೆಯಾಜ್ಞೆ ನೀಡುವಂತೆ ಹೈಕೋರ್ಟ್​ಗೆ ಮನವಿ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

Sheela Yogeshwar

ನನ್ನ ಪತಿ ಸಿ.ಪಿ.ಯೋಗೇಶ್ವರ್ (CP Yogeshwara) ಚುನಾವಣೆಗೆ ಸ್ಪರ್ಧಿಸಿರುವ ಬೆನ್ನಲ್ಲೇ ನಮ್ಮ ಮಲಮಗಳಾದ ನಿಶಾ ಯೋಗೇಶ್ವರ್‌ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ, ಮಾನಹಾನಿಕಾರಕ, ಆಧಾರರಹಿತ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ.

ಯೋಗೇಶ್ವರ್ (CP Yogeshwara)​ ಎರಡನೇ ಪತ್ನಿ ಶೀಲಾ ಸಲ್ಲಿಸಿದ್ದ ಮಧ್ಯಂತರ ಮನವಿಯನ್ನು ಪರಿಗಣಿಸಿರುವ ಹೈಕೋರ್ಟ್, ಪ್ರತಿವಾದಿಗಳಾದ ಇನ್‌ಸ್ಟಾಗ್ರಾಂ, ಎಕ್ಸ್‌ ಕಾರ್ಪ್‌ (ಟ್ವಿಟರ್‌), ಗೂಗಲ್‌ ಮತ್ತು ಯೂಟ್ಯೂಬ್‌ ಜಾಲತಾಣಗಳಲ್ಲಿ ನಿಶಾ ಯೋಗೇಶ್ ಅವರ ನಿಂದನಾತ್ಮಕ ಹೇಳಿಕೆಗಳನ್ನು ಅಪ್‌ಲೋಡ್‌ ಮಾಡಬಾರದು ಮತ್ತು ಈಗಾಗಲೇ ಪ್ರಸಾರ ಮಾಡಲಾಗಿರುವ ತುಣಕುಗಳನ್ನು ತಡೆಹಿಡಿಯಬೇಕು ಎಂದು ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net