

ಮುಂಬೈ: ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಭಾನುವಾರ ಸಂಜೆ ಮುಸುಕುಧಾರಿಗಳು ನಡೆಸಿದ ದಾಳಿ ದೇಶಾದ್ಯಂತ ಚರ್ಚೆಯಲ್ಲಿದೆ.
ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳ ನಾಯಕರು, ಗಣ್ಯರು, ಬಾಲಿವುಡ್ ಮಂದಿ ಇದನ್ನು ವಿರೋಧಿಸಿದ್ದಾರೆ.
ಹಾಗೆ ನಟ ಅಕ್ಷಯ್ ಕುಮಾರ್ ಪತ್ನಿ, ನಟಿ, ಲೇಖಕಿ ಟ್ವಿಂಕಲ್ ಖನ್ನಾ ಕೂಡ ಜೆಎನ್ಯು ಘಟನೆ ಬಗ್ಗೆ ಟ್ವೀಟ್ ಮಾಡಿ ದೇಶದ ಆಡಳಿತದ ಜವಾಬ್ದಾರಿ ಹೊತ್ತಿರುವವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಭಾರತದಲ್ಲಿ ವಿದ್ಯಾರ್ಥಿಗಳಿಗಿಂತ ಹಸುಗಳೇ ಹೆಚ್ಚು ಸುರಕ್ಷಿತ. ಯಾಕೆಂದರೆ ಹಸುಗಳಿಗೆ ನೀಡುವಷ್ಟು ರಕ್ಷಣೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿಲ್ಲ. ಹಿಂಸೆಯಿಂದ ಜನರನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಹಾಗೇನಾದರೂ ಮಾಡಲು ಯತ್ನಿಸಿದರೆ ಮತ್ತಷ್ಟು ಪ್ರತಿಭಟನೆ, ಹೋರಾಟವನ್ನು ಎದುರಿಸಬೇಕಾಗುತ್ತದೆ. ಇನ್ನೂ ಅನೇಕ ಜನರು ರಸ್ತೆಗಿಳಿಯುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಪತ್ರಿಕೆಯೊಂದು ಜೆಎನ್ಯು ಹಿಂಸಾಚಾರದ ಬಗ್ಗೆ ಮಾಡಿರುವ ವರದಿಯ ಕ್ಲಿಪ್ನ್ನು ಶೇರ್ ಮಾಡಿರುವ ಟ್ವಿಂಕಲ್ ಖನ್ನಾ, ಪತ್ರಿಕೆಯಲ್ಲಿರುವ ಶೀರ್ಷಿಕೆಯೇ ಎಲ್ಲವನ್ನೂ ತಿಳಿಸುತ್ತಿದೆ ಎಂದಿದ್ದಾರೆ.
ಟ್ವಿಂಕಲ್ ಖನ್ನಾ ಸಿನಿಮಾಗಳಿಂದ ದೂರವೇ ಉಳಿದಿದ್ದರೂ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸಕ್ರಿಯರಾಗಿಯೇ ಇರುತ್ತಾರೆ. ಈ ಹಿಂದೆ ಕೂಡ ಹಲವು ಬಾರಿ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಕೆಲವು ಟ್ವೀಟ್ಗಳನ್ನು ಮಾಡಿ ತಮ್ಮದೇ ಧಾಟಿಯಲ್ಲಿ ಟೀಕಿಸಿದ್ದರು.