

ಅಲಹಾಬಾದ್: ಒಬ್ಬ ವ್ಯಕ್ತಿ ತನ್ನ ಮನೆಯೊಳಗೆ ಗೋ ಹತ್ಯೆ ಮಾಡಿದರೆ ಅದರಿಂದ ಕಾನೂನು ಸುವ್ಯವಸ್ಥೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದನ್ನು ಕಾನೂನು ಸುವ್ಯವಸ್ಥೆಯ ಉಲ್ಲಂಘನೆ ಎಂದು ಪರಿಗಣಿಸುವುದಕ್ಕೆ ಸಾಧ್ಯವೂ ಇಲ್ಲ ಎಂದು ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ಸರೋಜ್ ಯಾದವ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಈ ತೀರ್ಪು ನೀಡಿದ್ದು, ರಾಷ್ಟ್ರೀಯ ಭದ್ರತಾ ಕಾಯ್ದೆಯ ಸೆಕ್ಷನ್ಗಳ ಪ್ರಕಾರ ಗೋ ಹತ್ಯೆ ಸಂಬಂಧ ಬಂಧಿತರಾಗಿದ್ದ ಮೂವರನ್ನು ಬಿಡುಗಡೆಗೊಳಿಸುವಂತೆ ಸೂಚಿಸಿದೆ.
ಹಾಡುಹಗಲೇ ಮನೆಯೊಳಗೆ ಬೀಫ್ ತುಂಡು ಮಾಡುತ್ತಿದ್ದರು ಎಂಬ ಕಾರಣಕ್ಕೆ ಫಿರ್ಯಾದುದಾರರನ್ನು ಮತ್ತು ಸಹ ಆರೋಪಿಗಳನ್ನು ಬಂಧಿಸಲಾಗಿತ್ತು. ಮನೆಯೊಳಗೆ ಅಂತಹ ಕೃತ್ಯಕ್ಕೆ ಕಾರಣವೇನು ಎಂಬುದು ನಮಗೆ ಗೊತ್ತಿಲ್ಲ. ಅದು ಬಡತನವೇ, ನಿರುದ್ಯೋಗ ಸಮಸ್ಯೆ ಕಾರಣವೇ ಅಥವಾ ಹಸಿವು ಕಾರಣವಾಯಿತೇ ಎಂಬುದು ನಮಗೆ ಗೊತ್ತಿಲ್ಲ. ಸಾರ್ವಜನಿಕರ ಗಮನಸೆಳೆಯುವಂತೆ ಇಂತಹ ಕೃತ್ಯವೆಸಗಿರುವುದು ಸರಿಯಾದ ನಡತೆ ಅಲ್ಲ ಎಂಬುದೂ ಅಷ್ಟೇ ನಿಜ ಎಂದು ಪೀಠ ಅಭಿಪ್ರಾಯಪಟ್ಟಿದೆ.