ಮಾಲೀಕನನ್ನು ಚಿರತೆ ದಾಳಿಯಿಂದ ಕಾಪಾಡಿದ ಹಸು!; ತೋಟದಲ್ಲಿ ದನ ಮೇಯಿಸುತ್ತಿದ್ದಾಗ ನಡೆದ ಘಟನೆ

Leopard
ಸಾಂದರ್ಭಿಕ ಚಿತ್ರ
Published on

ದಾವಣಗೆರೆ: ಸಾಕುಪ್ರಾಣಿಗಳನ್ನು ಮನುಷ್ಯರು ಪ್ರಾಣಾಪಾಯಗಳಿಂದ ಕಾಪಾಡಿದ ಪ್ರಕರಣಗಳು ಬಹಳಷ್ಟಿವೆ. ಆದರೆ ಇಲ್ಲೊಂದು ಕಡೆ ಸಾಕುಪ್ರಾಣಿಯೇ ಮನುಷ್ಯನ ಜೀವ ಉಳಿಸಿದೆ. ಹಸುವೊಂದು ತನ್ನ ಮಾಲೀಕನನ್ನು ಚಿರತೆ ದಾಳಿಯಿಂದ ಪಾರು ಮಾಡಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಉಬ್ರಾಣಿ ಹತ್ತಿರದ ಕೊಡಕಿನಕೆರೆ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಕೊಡಕಿನಕೆರೆ ಗ್ರಾಮದ ಕರಿಹಾಲಪ್ಪ ಚಿರತೆ ದಾಳಿಗೆ ಒಳಗಾಗಿಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕರಿಹಾಲಪ್ಪ ತೋಟದಲ್ಲಿ ಹಸು ಮೇಯಿಸಲು ತೆರಳಿದ್ದಾಗ ಚಿರತೆ ಮೈಮೇಲೆ ಎರಗಿದೆ. ಆಗ ತಕ್ಷಣ ಧಾವಿಸಿದ ಹಸು ಗೌರಿ, ಚಿರತೆಗೆ ಗುದ್ದಿದೆ. ಆಗ ಬಿಟ್ಟು ಕದಲಿದ ಚಿರತೆ ಮತ್ತೆ ತನ್ನ ಮೈಮೇಲೆರಗಲು ಮುಂದಾಗುತ್ತಿದ್ದಂತೆ ಕರಿಹಾಲಪ್ಪ ದೊಣ್ಣೆ ಹಿಡಿದುಕೊಂಡು ಬೆದರಿಸಿದ್ದಾರೆ. ಇದರಿಂದ ಬೆದರಿದ ಚಿರತೆ ಓಡಿ ಹೋಗಿದೆ.

ಚಿರತೆ ದಾಳಿಯಿಂದ ರಕ್ಷಿಸಿ ಪ್ರಾಣಾಪಾಯದಿಂದ ಪಾರು ಮಾಡಿದ ಹಸು ಬಗ್ಗೆ ಕರಿಹಾಲಪ್ಪ ಮತ್ತು ಕುಟುಂಬಸ್ಥರು ಖುಷಿಯಾಗಿದ್ದು, ಊರವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿರತೆಯ ದಾಳಿಯಿಂದ ಕೊಡಕಿನಕೆರೆ ಮತ್ತು ಸುತ್ತಮುತ್ತ ಗ್ರಾಮದಲ್ಲಿ ಆತಂಕ ಉಂಟಾಗಿದ್ದು, ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನು ಅಳವಡಿಸಿದೆ. ಅಂದಹಾಗೆ ಈ ಪ್ರಕರಣ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net