

ಬೆಂಗಳೂರು: ಗೋವನ್ನು ರಾಷ್ಟ್ರದ ಮಾತೆ ಎಂದು ಘೋಷಿಸಬೇಕು ಎಂದು ಜ್ಯೋತಿಶ್ ಪೀಠಾಧೀಶ್ವರ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಜಿ ಅವರು ಗೌ ಧ್ವಜ ಸ್ಥಾಪನಾ ಭಾರತ ಯಾತ್ರೆ ಕೈಗೊಂಡಿದ್ದು, ಅಕ್ಟೋಬರ್ 14 ರಂದು ಬೆಂಗಳೂರಿನಲ್ಲಿ ಗೌ ಧ್ವಜವನ್ನು ನೆರವೇರಿಸಲಿದ್ದಾರೆ
ಎಂದು ಭಾರತ ಯಾತ್ರೆ ಸಹ ಸಂಚಾಲಕ ಅಖಿಲೇಶ್ ಬ್ರಹ್ಮಚಾರಿ ಹೇಳಿದರು.
ಸ್ವಾತಂತ್ರ್ಯದ ನಂತರ, ಗೋವುಗಳನ್ನು ರಕ್ಷಿಸಲು ಮತ್ತು ಗೌರವಿಸಲು ನಿರಂತರ ಪ್ರಯತ್ನಗಳು ನಡೆದಿವೆ. ಈ ಆಂದೋಲನಕ್ಕೆ ನಾಲ್ಕು ಪೀಠಗಳ ಜಗದ್ಗುರು ಶಂಕರಾಚಾರ್ಯರು ಆಶೀರ್ವದಿಸಿದ್ದು, ರಾಷ್ಟ್ರ ಮಾತೆಯ ಸ್ಥಾನಮಾನ ಮತ್ತು ಗೋಹತ್ಯೆ ವಿರುದ್ಧ ಕಾನೂನು ಜಾರಿಗೆ ಒತ್ತಾಯಿಸಿ ಗೋಸಂಸದ್ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 42 ಅಂಶಗಳ ಧರ್ಮದೇಶದೊಂದಿಗೆ ರಾಮ ಗೌ ಪ್ರತಿಷ್ಠಾ ಸಂಹಿತಾ ವಿಧೇಯಕವನ್ನು ಅಂಗೀಕರಿಸಲಾಗಿದ್ದು, ಮುಂದಿನ ಭಾಗವಾಗಿ ಭಾರತ ಯಾತ್ರೆ ಕೈಗೋಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಆಂದೋಲನದ ವೇಗ ಹೆಚ್ಚಿಸಲು ಜ್ಯೋತಿರ್ಮಠದ ಜಗದ್ಗುರು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಜಿ ಮಹಾರಾಜ್ ಅವರು ಹಸುವಿನ ತುಪ್ಪದ ಪವಿತ್ರ ಜ್ವಾಲೆಯನ್ನು ಬೆಳಗಿಸಿ ಈ ವರ್ಷವನ್ನು ಗೋವಿನ ವರ್ಷ ಎಂದು ಘೋಷಿಸಿದರು. ಮಾರ್ಚ್ 14 ರಿಂದ ಮಾರ್ಚ್ 28 ರ ವರೆಗೆ ಗೋವರ್ಧನದಿಂದ ದೆಹಲಿಯವರೆಗೆ ಬರಿಗಾಲಿನಲ್ಲಿ ಯಾತ್ರೆ ಕೈಗೊಂಡಿದ್ದರು. ಈ ಆಂದೋಲನದ ಭಾಗವಾಗಿ, ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 26 ರವರೆಗೆ ಗೌಧ್ವಜ ಸ್ಥಾಪನಾ ಭಾರತ ಯಾತ್ರೆ ನಡೆಯಲಿದೆ. ಎಂದು ತಿಳಿಸಿದರು.
ಈ ಯಾತ್ರೆ ಭಾರತದ ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಉತ್ತರದಾದ್ಯಂತ ಸಂಚರಿಸಲಿದ್ದು, 36 ರಾಜ್ಯಗಳ ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ರಾಜಧಾನಿಗಳಿಗೆ ಭೇಟಿ ನೀಡಿ ಅಲ್ಲಿ ಪವಿತ್ರವಾದ ಗೌಧ್ವಜವನ್ನು ಸ್ಥಾಪಿಸಲಾಗುವುದು. ಈ ವೇಳೆ ಜಗದ್ಗುರು ಶಂಕರಾಚಾರ್ಯ ಜಿ ಅವರು ದೇಶಾದ್ಯಂತದ ಪ್ರತಿಷ್ಠಿತ ಗೋಭಕ್ತರನ್ನು ಗೌರವಿಸಲಿದ್ದಾರೆ ಎಂದರು.
ಅವಿಮುಕ್ತೇಶ್ವರಾನಂದ ಜೀ ಅವರು ಅಕ್ಟೋಬರ್ 14 ರಂದು ಬೆಂಗಳೂರಿಗೆ ಆಗಮಿಸಲಿದ್ದು, ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಅವರು ಗೌಧ್ವಜ ಸ್ಥಾಪನೆಯಗಲಿದೆ. ಬಳಿಕ ಗೋವಾ ಕಡೆಗೆ ಪ್ರಯಾಣ ಮುಂದುವರಿಸಲಿದ್ದಾರೆ. ನಮ್ಮ ಧ್ಯೇಯವಾಕ್ಯವು ಗೌ ಮಾತಾ, ರಾಷ್ಟ್ರ ಮಾತಾ - ರಾಷ್ಟ್ರ ಮಾತಾ, ಭಾರತ ಮಾತಾ. ಎಂಬುದಾಗಿದೆ. ಈ ಯಾತ್ರೆಯ ನಂತರ, ನವೆಂಬರ್ 7, 8 ಮತ್ತು 9 ರಂದು ದೆಹಲಿಯಲ್ಲಿ ಗೋಪಾಷ್ಟಮಿಯ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ಗೌ ಪ್ರತಿಷ್ಠಾ ಮಹಾಸಮ್ಮೇಳನ ನಡೆಯಲಿದೆ, ಇದು ಗೋಹತ್ಯೆಯ ಶಾಪವನ್ನು ಕೊನೆಗೊಳಿಸಲು ಮತ್ತು ಗೋವನ್ನು ಗೌರವಿಸುವಂತೆ ಭಾರತ ಸರ್ಕಾರಕ್ಕೆ ನಿರ್ಣಾಯಕವಾಗಿ ಮನವಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ರಾಜ್ಯ ಸಂಚಾಲಕ ಪ್ರವೀಣ್ ಜೈನ್ ಮಾತನಾಡಿ ಇದೊಂದು ಅತ್ಯಂತ ಮಹತ್ವದ ಆಂದೋಲನವಾಗಿದೆ. ಗೋವು ಪ್ರಾಣಿಯಲ್ಲ, ತಾಯಿ - ಇದು ಸನಾತನ ಹಿಂದೂಗಳ ಪವಿತ್ರ ನಂಬಿಕೆಯಾಗಿದೆ. ಈ ಆಳವಾದ ಶ್ರದ್ಧೆಯೊಂದಿಗೆ, ಗೋಸಂರಕ್ಷಣೆಯನ್ನು ರಾಜ್ಯ ಪಟ್ಟಿಯಿಂದ ಸಂವಿಧಾನದ ಕೇಂದ್ರ ಪಟ್ಟಿಗೆ ವರ್ಗಾಯಿಸುವ ಮೂಲಕ ಗೋವನ್ನು ’ರಾಷ್ಟ್ರ ಮಾತೆಯ’ ಸ್ಥಾನಕ್ಕೆ ಏರಿಸಲು ಮತ್ತು ಗೋಹತ್ಯೆ ಮುಕ್ತ ಭಾರತವನ್ನು ನಿರ್ಮಿಸಲು ರಾಷ್ಟ್ರವ್ಯಾಪಿ ಗೋ ಪ್ರತಿಷ್ಠಾ ಆಂದೋಲನವನ್ನು ನಡೆಸಲಾಗುತ್ತಿದೆ ಎಂದರು.