ಒಳಚರಂಡಿಯಲ್ಲಿ ಬಿದ್ದಿರುವೆ.. ಉಸಿರುಗಟ್ಟುತ್ತಿದೆ.. ದಯವಿಟ್ಟು ಕಾಪಾಡಿ...

cow charandi
Published on

ಹುಬ್ಬಳ್ಳಿ: ಇಂದು ಬೆಳ್ಳಂಬೆಳಗ್ಗೆ ಮೂಕಪ್ರಾಣಿಯೊಂದು ರಸ್ತೆಪಕ್ಕದ ಒಳಚರಂಡಿಗೆ ಬಿದ್ದು, ಸಾವು-ಬದುಕಿನ ನಡುವೆ ನರಳಾಡುತ್ತ ರೋದಿಸುತ್ತಿದ್ದ ಘಟನೆ ನಗರದ ದೇಸಾಯಿ ಸರ್ಕಲ್ ಬಳಿ ಸಂಭವಿಸಿದೆ.

ಇಲ್ಲಿನ ರಸ್ತೆ ಪಕ್ಕದಲ್ಲೇ ತೆರೆದ ಒಳಚರಂಡಿಗೆ ಬೀಡಾಡಿ ದನ ಬಿದ್ದಿದೆ. ಹುಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಬೆಳಗ್ಗೆ 11 ಗಂಟೆಯಾದರೂ ಒಳಚರಂಡಿಯಲ್ಲಿದ್ದ ದನದ ರಕ್ಷಣೆ ಕಾರ್ಯ ಆರಂಭವಾಗಿರಲಿಲ್ಲ.

ರಸ್ತೆಬದಿಯ ಒಳಚರಂಡಿ ಮೇಲೆ ಮುಚ್ಚಳಿಕೆ ಇರಲಿಲ್ಲ. ಮೇಯುತ್ತ ಬಂದ ಬೀಡಾಡಿ ದನ ಈ ಚರಂಡಿಗೆ ಬಿದ್ದು, ರೋದಿಸುತ್ತಿದ್ದ ದೃಶ್ಯ ಎಂತಹವರ

ಮನಕಲಕುವಂತಿದೆ. ದನದ ಕುತ್ತಿಗೆ ವರೆಗೂ ಚರಂಡಿ ನೀರು ಆವರಿಸಿದ್ದು, ತಲೆಯನ್ನು ಮೇಲಕ್ಕೆತ್ತಿ ಗಾಬರಿಯಿಂದ ಪಿಳಿಪಿಳಿ ಕಣ್ಣು ಬಿಟ್ಟು ಜನರನ್ನು ನೋಡುತ್ತಲೇ ಇತ್ತು. ಚರಂಡಿಗೆ ಬಿದ್ದ ದನವನ್ನು ಮೇಲೆತ್ತಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದರು. ಅಷ್ಟರಲ್ಲಿ ಮಾಹಿತಿ ತಿಳಿದ ಪಾಲಿಕೆ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಒಳಚರಂಡಿಯಿಂದ ದನವನ್ನು ಮಧ್ಯಾಹ್ನ 12ರ ಸುಮಾರಿಗೆ ಮೇಲಕ್ಕೆತ್ತಿದರು. ಪ್ರಾಣಭೀತಿಯಲ್ಲಿದ್ದ ದನ ಹೊರಬರುತ್ತಿದ್ದಂತೆ ನಿಟ್ಟುಸಿರುಬಿಟ್ಟಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net