ಕೋವಿಶೀಲ್ಡ್ ಲಸಿಕೆ ಅಡ್ಡಪರಿಣಾಮ, ತಜ್ಞರ ತಂಡ ನಿಗಾ

vaccine1
Published on

ನವದೆಹಲಿ: ಜಗತ್ತಿನ ಅತಿ ದೊಡ್ಡ ಕರೊನಾ ತಡೆ ಲಸಿಕೆ ಅಭಿಯಾನ ನಡೆಯುತ್ತಿರುವ ಭಾರತದಲ್ಲಿ ಕೋವಿಶೀಲ್ಡ್ ಅಡ್ಡಪರಿಣಾಮದ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ರಕ್ತ ಹೆಪು್ಪಗಟ್ಟುವಿಕೆ (ಬ್ಲಡ್ ಕ್ಲಾಟ್) ಕಂಡು ಬಂದಿರುವುದರಿಂದ ಸುಮಾರು 10 ದೇಶಗಳು ಈ ಲಸಿಕೆ ಬಳಕೆಯನ್ನು ನಿಲ್ಲಿಸಿವೆ. ಹೀಗಾಗಿ ಔಷಧದ ಅಡ್ಡಪರಿಣಾಮದ ಬಗ್ಗೆ ಸಂಬಂಧಿತ ಸಮಿತಿಗಳು ಸತತವಾಗಿ ಇಗಾ ಇರಿಸಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಜ್ಞರ ತಂಡ ಹೇಳಿದೆ.

‘ಈ ಕ್ಷಣದಲ್ಲಿ ಯಾವುದೇ ನಿರ್ದಿಷ್ಟ ಲಸಿಕೆಯ ಬಗ್ಗೆ ಹೇಳುತ್ತಿಲ್ಲ. ಲಸಿಕೆಗಳ ವಿಶ್ಲೇಷಣೆ ಲಭ್ಯವಾದ ನಂತರ ಕಳವಳಕ್ಕೆ ಕಾರಣ ತಿಳಿಯಲಿದೆ’ ಎಂದು ಐಸಿಎಂಆರ್ ರಚಿಸಿರುವ ರಾಷ್ಟ್ರೀಯ ಕಾರ್ಯ ಪಡೆಯ ಸದಸ್ಯ ಡಾ. ಎನ್.ಕೆ. ಅರೋರಾ ಹೇಳಿದ್ದಾರೆ.

ಭಾರತದಲ್ಲಿ ಇದುವರೆಗೆ ಯಾವುದೇ ಗಂಭೀರ ಎಇಎಫ್​ಐ ಪ್ರಕರಣಗಳು ವರದಿಯಾಗಿಲ್ಲ. ಜಗತ್ತಿನ ಇತರ ಭಾಗಗಳಲ್ಲಿ ಒಟ್ಟು 30 ಪ್ರಕರಣಗಳು ದಾಖಲಾಗಿವೆ. ಆ ಬಗ್ಗೆ ಹೆಚ್ಚಿನ ವಿವರಗಳೂ ಲಭ್ಯವಿಲ್ಲ. ಸದ್ಯಕ್ಕೆ ಕಳವಳ ಪಡುವಂಥದ್ದಿಲ್ಲ ಎಂದು ಲೇಡಿ ಹಾರ್ಡಿಂಜ್ ಕಾಲೇಜ್​ನ ನ್ಯೂರಾಲಜಿ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ ಕೆ ಧಮಿಜಾ ಹೇಳಿದ್ದಾರೆ.

ಡಬ್ಲ್ಯುಎಚ್​ಒ ಅಭಯ: ಕೋವಿಶೀಲ್ಡ್ ಬಳಕೆ ಬಗ್ಗೆ ಕಳವಳ ಅನಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಹೇಳಿದೆ. ಅಸ್ಟ್ರಾಜೆನಿಕಾ ಕೂಡ ಅತ್ಯುತ್ತಮ ಲಸಿಕೆಯಾಗಿದೆ ಎಂದು ಹೇಳಿದೆ.

ಮಾಸ್ಕ್ ಧರಿಸದಿದ್ದರೆ ವಿಮಾನದಿಂದ ಹೊರಕ್ಕೆ: ವಿಮಾನದೊಳಗೆ ಮಾಸ್ಕ್ ಧರಿಸದ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಗುವುದೆಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಶನಿವಾರ ಕಟ್ಟೆಚ್ಚರಿಕೆ ನೀಡಿದೆ. ಕೋವಿಡ್​ಗೆ ಸಂಬಂದ ಮಾರ್ಗಸೂಚಿಯನ್ನು ಮತ್ತೊಮ್ಮೆ ಬಿಡುಗಡೆ ಮಾಡಿದ್ದು, ಪ್ರಯಾಣಿಕರು ಸರಿಯಾಗಿ ಅನುಸರಿಸಬೇಕೆಂದು ಅದು ಸೂಚಿಸಿದೆ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ.

ಪದೆ ಪದೇ ಮನವಿ ಮಾಡಿದರೂ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದಿರುವ ಡಿಜಿಸಿಎ, ಇನ್ನು ಮುಂದೆ ಅಂಥ ಪ್ರಯಾಣಿಕರನ್ನು ‘ಬೇಜವಾಬ್ದಾರಿ ಪ್ರಯಾಣಿಕರು’ ಎಂದು ಪರಿಗಣಿಸುವುದಾಗಿ ಸ್ಪಷ್ಟಪಡಿಸಿದೆ. ಅಂಥವರನ್ನು ವಿಮಾನ ಹೊರಡುವ ಮುನ್ನ ಕೆಳಗಿಳಿಸಲಾಗುತ್ತದೆ ಎಂದು ಖಡಕ್ಕಾಗಿ ಹೇಳಿದೆ. ಉಸಿರಾಟದ ತೊಂದರೆ ಇರುವ ಪ್ರಯಾಣಿಕರು ಮಾತ್ರ ಮುಖಗವಸನ್ನು ಮೂಗಿನಿಂದ ತೆಗೆಯಲು ಅವಕಾಶ ನೀಡಲಾಗುತ್ತದೆ ಎಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net