

ಬೆಂಗಳೂರು: ರಾಜ್ಯದ ಪ್ರಸ್ತುತ ಶೈಕ್ಷಣಿಕ ಸ್ಥಿತಿಗೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲವೇನೋ...?
ಜನರಿಗೆ ಆದಾಯವಿಲ್ಲ, ಸಂಬಳ ಕಡಿತವಾಗುತ್ತಿದೆ, ಮನೆ ಸಾಲದ ಕಂತು ಕಟ್ಟೋಕಾಗುತ್ತಿಲ್ಲ... ಮನೆ ಮಾರಾಟ ಮಾಡದೇ ಬೇರೆ ದಾರಿಯಿಲ್ಲ... ಆದರೆ, ಆರ್ಥಿಕ ಸ್ಥಿತಿ ಎಲ್ಲಿಯತನಕ ಹದಗೆಟ್ಟಿದೆ ಎಂದರೆ ಶಾಲೆಗಳನ್ನೇ ಮಾರಾಟ ಮಾಡುವ ಸ್ಥಿತಿ ಎದುರಾಗಿದೆ.
ಕಳೆದ ಮಾರ್ಚ್ನಿಂದ ಶಾಲೆಗಳು ಮುಚ್ಚಿವೆ. ಇಂದಲ್ಲ, ನಾಳೆ ಈಗಿರುವ ಮಕ್ಕಳಾದರೂ ಮುಂದಿನ ತರಗತಿಗೆ ಪ್ರವೇಶ ಪಡೆಯುತ್ತಾರೆ ಎಂಬ ವಿಶ್ವಾಸ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳದ್ದು. ಹಾಗೆಯೇ ಪಿಯು ಹಾಗೂ ಪದವಿ ಕಾಲೇಜುಗಳು ವಿಳಂಬವಾಗಿಯಾದರೂ ಶುರುವಾಗಲಿವೆ.
ಆದರೆ, ನರ್ಸರಿ ಶಾಲೆಗಳ ಸ್ಥಿತಿ ಅಯೋಮಯವಾಗಿದೆ. ಈ ವೇಳೆಗಾಗಲೇ 'ನೋ ಸೀಟ್' ಎಂದು ಬೋರ್ಡ್ ಹಾಕಿರಬೇಕಿದ್ದ ಶಾಲೆಗಳಲ್ಲಿ ಒಬ್ಬರೂ ದಾಖಲಾಗಿಲ್ಲ. ಬಾಡಿಗೆ, ಸಿಬ್ಬಂದಿ ವೇತನ ನೀಡಬೇಕಿದ್ದ ನರ್ಸರಿ ಶಾಲೆಗಳು ಆದಾಯವಿಲ್ಲದೇ ಬಾಗಿಲು ಹಾಕುವಂತಾಗಿದೆ. ಬೆಂಗಳೂರೊಂದರಲ್ಲೇ 185ಕ್ಕೂ ಅಧಿಕ ನರ್ಸರಿ ಶಾಲೆಗಳು ಮಾರಾಟಕ್ಕಿವೆ. ಜುಲೈ ವೇಳೆಗೆ ಇವುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಕಳೆದೆರಡು ತಿಂಗಳಲ್ಲಿ ಮಾರಾಟಕ್ಕಿರುವ ನರ್ಸರಿ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 185ಕ್ಕೂ ಅಧಿಕ ಶಾಲೆಗಳು ಖರೀದಿದಾರರ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎಂದು ಸ್ಕೂಲ್ ವೆಂಚರ್ಸ್ನ ಪ್ರಸನ್ನಕುಮಾರ್ ಹೇಳುತ್ತಾರೆ.
ಸಣ್ಣ ಹಾಗೂ ಸ್ವತಂತ್ರವಾಗಿ ನರ್ಸರಿ ಶಾಲೆಗಳನ್ನು ನಡೆಸುತ್ತಿರುವವರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಕರ್ನಾಟಕ ಪ್ರಿ ಸ್ಕೂಲ್ ಕೌನ್ಸಿಲ್ 2000ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ನರ್ಸರಿ ಶಾಲೆಗಳ ಆರಂಭದ ಬಗ್ಗೆ ಅನಿಶ್ಚಿತತೆ ಮನೆ ಮಾಡಿರುವ ಕಾರಣ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ನರ್ಸರಿ ಶಾಲೆಗಳು ಮಕ್ಕಳಿಗೆ ಅತ್ಯಂತ ಸುರಕ್ಷಿತವಾಗಿವೆ. ಸುತ್ತಲಿನ ಪ್ರದೇಶದ ಮಕ್ಕಳಷ್ಟೇ ನಮ್ಮಲ್ಲಿಗೆ ಬರುತ್ತಾರೆ. ಆಗಾಗ ಸ್ಯಾನಿಟೈಸ್ ಮಾಡುತ್ತ, ಅತ್ಯಂತ ಶುಭ್ರ ಪರಿಸರದಲ್ಲಿ ಮಕ್ಕಳನ್ನು ಇರಿಸಲಾಗುತ್ತದೆ. ಅಲ್ಲದೇ ಉದ್ಯೋಗಸ್ಥ ದಂಪತಿ ಹಾಗೂ ಮಹಿಳೆಯರಿಗೆ ನರ್ಸರಿ ಹಾಗೂ ಡೇ ಕೇರ್ ಸೆಂಟರ್ಗಳು ಅತ್ಯಂತ ಅಗತ್ಯವಾಗಿವೆ. ಈ ಕಾರಣಕ್ಕಾಗಿ ನರ್ಸರಿ ಶಾಲೆಗಳನ್ನು ಆರಂಭಿಸಲು ಅವಕಾಶ ನೀಡಬೇಕು ಎಂಬುದು ಇವರ ವಾದವಾಗಿದೆ.
ಬಹಳಷ್ಟು ನರ್ಸರಿ ಶಾಲೆಗಳನ್ನು ಮಹಿಳೆಯರೇ ನಡೆಸುತ್ತಿದ್ದಾರೆ. ಶಾಲೆಗಳು ಬಂದ್ ಆದರೆ ಅವರ ಕುಟುಂಬಕ್ಕೆ ಬರುತ್ತಿದ್ದ ಆದಾಯವೂ ನಿಂತು ಹೋಗುತ್ತದೆ. ಜತೆಗೆ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕೂಡ ನಿರುದ್ಯೋಗಿಗಳಾಗಲಿದ್ದಾರೆ ಎಂಬ ಆತಂಕ ಇವರದ್ದು.