

ಬೆಂಗಳೂರು: ತೀವ್ರ ಉಸಿರಾಟ ತೊಂದರೆಗೆ ಒಳಗಾಗಿದ್ದ ಮೂವರು ಪೌರ ಕಾರ್ವಿುಕರು ಸೇರಿ, ಒಟ್ಟು ಐವರು ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಬಿಟ್ಟಿದ್ದಾರೆ. ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ವಿಶ್ವನಾಥ ನಾಗೇನಹಳ್ಳಿ ವಾರ್ಡ್ನ ಪೌರಕಾರ್ವಿುಕ ಮಹಿಳೆ ಶಿಲ್ಪಾ (28) ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.
ಒಂದು ವಾರದಿಂದ ಸೋಂಕಿನ ಲಕ್ಷಣಗಳಿದ್ದರೂ ಚಿಕಿತ್ಸೆಗೆ ತೆರಳಲು ರಜೆ ನೀಡದೆ ಅವರಿಂದ ಕೆಲಸ ಮಾಡಿಸಲಾಗಿದೆ. ಬುಧವಾರ ಲ್ಯಾಬ್ ವರದಿ ಬಂದಿದ್ದು, ಕರೊನಾ ದೃಢಪಟ್ಟಿದೆ. ಆಗ ವಿಕ್ಟೋರಿಯಾ, ಎಂ.ಎಸ್. ರಾಮಯ್ಯ, ಮಣಿಪಾಲ್, ವಿಕ್ರಂ ಆಸ್ಪತ್ರೆಗಳಿಗೆ ದಾಖಲಾಗಲು ತೆರಳಿದಾಗ ಹಾಸಿಗೆ ಲಭ್ಯವಿಲ್ಲ ಎಂದು ಉತ್ತರಿಸಿದ್ದಾರೆ.
ಆಯುಕ್ತರ ಪಿಎಗೆ ಸೋಂಕು: ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಆಪ್ತ ಸಹಾಯಕನಿಗೂ ಕರೊನಾ ಪಾಸಿಟಿವ್ ಕಂಡುಬಂದಿದೆ. ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರವಿಕುಮಾರ್ ಸುರಪುರ ಅವರ ವಾಹನ ಚಾಲಕನಿಗೆ ಸೋಂಕು ದೃಢಪಟ್ಟಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ.
ಕೊನೆಗೆ, ಗಲಾಟೆ ಮಾಡಿ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಯಿತು. ಆದರೆ, ಅಲ್ಲಿ ವೆಂಟಿಲೇಟರ್ ಸೌಲಭ್ಯವಿಲ್ಲದ ಕಾರಣ ಗುರುವಾರ ಬೆಳಗ್ಗೆ ಮಹಿಳೆ ನಿಧನ ಹೊಂದಿದ್ದಾರೆ. ದೀಪಾಂಜಲಿ ನಗರದ ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಚಾಲಕ ನಟರಾಜ್ ಕರೊನಾ ಚಿಕಿತ್ಸೆ ಪಡೆಯುವ ವೇಳೆ ತೀವ್ರ ಸಮಸ್ಯೆಯಿಂದ ಸಾವಿಗೀಡಾಗಿದ್ದಾರೆ. ಕೃ.ರಾ. ಮಾರುಕಟ್ಟೆ ಜಪ್ತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ವಿುಕ ವೆಂಕಟೇಶ್ ಸೋಂಕಿನಿಂದ ಚೇತರಿಸಿಕೊಳ್ಳದೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ದಾರ್ಶನಿಕ ಪ್ರವಾದಿ ಶ್ರೀಶಂಕರರ ವಿಶ್ವಪ್ರಜ್ಞೆ
ರಾಜಾಜಿನಗರದ ಮಂಜುನಾಥನಗರ ನಿವಾಸಿ ಚಂದ್ರಶೇಖರ್ (51) ತೀವ್ರ ಉಸಿರಾಟ ತೊಂದರೆಯಿಂದ ಕಳೆದ ನಾಲ್ಕು ದಿನಗಳಿಂದ 10ಕ್ಕೂ ಅಧಿಕ ಆಸ್ಪತ್ರೆಗಳಿಗೆ ಅಲೆದಾಡಿ ಚಿಕಿತ್ಸೆ ಸಿಗದೆ ಗುರುವಾರ ಬೆಳಗಿನ ಜಾವ ಮೃತರಾಗಿದ್ದಾರೆ. ಎಲ್ಲಿಯೂ ಚಿಕಿತ್ಸೆ ಸಿಗದೆ ಬುಧವಾರ ರಾತ್ರಿ ಮನೆಗೆ ವಾಪಸಾಗಿದ್ದಾರೆ. ನಂತರ ಅನಾರೋಗ್ಯ ಉಲ್ಬಣಗೊಂಡು ಮೃತಪಟ್ಟಿದ್ದಾರೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಾವಳ್ಳಿ ನಿವಾಸಿ ಲಕ್ಷ್ಮೀನಾರಾಯಣ (72) ಸೌತ್ ಸಿಟಿ ಆಸ್ಪತ್ರೆ, ಮೆಡಿಕಲ್ ಆಸ್ಪತ್ರೆ, ಗಿರಿನಗರದ ಪಲ್ಸ್ ಆಸ್ಪತ್ರೆ, ಕೋಣನಕುಂಟೆಯ ಆಸ್ಟ್ರಾ ಆಸ್ಪತ್ರೆ ಸೇರಿ ವಿವಿಧೆಡೆ ಚಿಕಿತ್ಸೆಗಾಗಿ ಸುತ್ತಾಡಿದ್ದರು. ಈ ಅಲೆದಾಟದ ಮಧ್ಯೆ ತೀವ್ರ ಅಸ್ವಸ್ಥರಾಗಿ ರಾತ್ರಿ 11 ಗಂಟೆಗೆ ತಲಘಟ್ಟಪುರದ ಶಂಕರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ದಾಖಲಾದ ಒಂದೇ ತಾಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಲಡಾಖ್ಗೆ ಹೊರಟ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್
ಹಿರಿಯ ಅಧಿಕಾರಿಗಳೇ ಕಾರಣ: ಕರೊನಾ ವಾರಿಯರ್ಗಳಾಗಿ ಅರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಸೇರಿ ವಿವಿಧ ಇಲಾಖೆ ನೌಕರರು ಮತ್ತು ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ವಿವಿಧ ಆಸ್ಪತ್ರೆಗಳ ಸಿಬ್ಬಂದಿ ಹಾಗೂ ಪೌರಕಾರ್ವಿುಕರು ಸೇರಿ ಎಲ್ಲ ವಿಭಾಗದ ನೌಕರರಿಗೆ ಸೋಂಕಿನ ಲಕ್ಷಣಗಳಿದ್ದರೂ ಆಸ್ಪತ್ರೆಗೆ ದಾಖಲಾಗಲು ರಜೆ ಸಿಗುತ್ತಿಲ್ಲ. ಹೀಗಾಗಿ ಕೆಲ ಅಧಿಕಾರಿಗಳು ಸೋಂಕಿನ ಲಕ್ಷಣಗಳಿದ್ದರೂ ಕೆಲಸ ಮಾಡಿ ಗಂಭೀರ ಸ್ವರೂಪ ತಲುಪಿ ಸಾವಿಗೀಡಾಗಿದ್ದಾರೆ. ಕರೊನಾ ವಾರಿಯರ್ಸ್ಗೆ ಸೋಂಕಿನ ಲಕ್ಷಣಗಳಿದ್ದರೂ ಅವರಿಂದ ಕೆಲಸ ಮಾಡಿಸುತ್ತಿದ್ದಾರೆ. ಅವರ ಸಾವಿಗೆ ಹಿರಿಯ ಅಧಿಕಾರಿಗಳೇ ಕಾರಣ ಎಂದು ಕಾರ್ವಿುಕರು ಮತ್ತು ಇತರ ಇಲಾಖೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು ಉಸಿರಾಟದ ತೊಂದರೆ ಇರುವವರನ್ನು ಕೋವಿಡ್ ವರದಿ ಇಲ್ಲದಿದ್ದರೂ ಚಿಕಿತ್ಸೆಗೆ ದಾಖಲಿಸಿಕೊಳ್ಳಬೇಕು ಎಂದು ಆಸ್ಪತ್ರೆಗಳಿಗೆ ಸರ್ಕಾರ ತಿಳಿಸಿದೆ. ಆದರೆ, ನಗರದ ಸರ್ಕಾರಿ ಸೇರಿ ಎಲ್ಲ ಆಸ್ಪತ್ರೆಗಳು ತೀವ್ರ ಉಸಿರಾಟ ತೊಂದರೆಗೆ ಚಿಕಿತ್ಸೆ ನೀಡಲು ಹಾಸಿಗೆ ಕೊರತೆಯಿದೆ ಎಂದು ನೆಪವೊಡ್ಡಿ ರೋಗಿಗಳನ್ನು ಸಾಗಹಾಕುತ್ತಿದ್ದಾರೆ. ಇದರಿಂದ ರೋಗಿಗಳು ಹಲವು ಆಸ್ಪತ್ರೆಗಳಿಗೆ ಅಲೆದಾಡಿ ಎಲ್ಲಿಯೂ ಚಿಕಿತ್ಸೆ ಸಿಗದೆ ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.