

ನವದೆಹಲಿ: ಗುಜರಾತ್ನ ರಾಜಕೋಟ್ನಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಐವರು ರೋಗಿಗಳು ಸಾವನ್ನಪ್ಪಿದ್ದಾರೆ. 28 ಮಂದಿಯನ್ನು ರಕ್ಷಿಸಲಾಗಿದೆ. ಗುಜರಾತ್ನಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಕರೊನಾ ಆಸ್ಪತ್ರೆಯಲ್ಲಿ ಸಂಭವಿಸಿದ ಎರಡನೇ ಅಗ್ನಿ ದುರಂತವಾಗಿದೆ.
ಮಾವಾಡಿ ಪ್ರದೇಶದಲ್ಲಿರುವ ಉದಯ್ ಶಿವಾನಂದ್ ಆಸ್ಪತ್ರೆಯಲ್ಲಿ 33 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. 7 ಮಂದಿ ಸೋಂಕಿತರಿದ್ದ ಐಸಿಯು ವಾರ್ಡ್ನಲ್ಲಿ ಶುಕ್ರವಾರ ನಸುಕಿನ 1 ಗಂಟೆ ಸುಮಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ 28 ಸೋಂಕಿತರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ತೀವ್ರತೆಯಿಂದಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಿಬ್ಬರು ಆಸ್ಪತ್ರೆಗೆ ಸ್ಥಳಾಂತರಿಸುವಾಗ ಸಾವನ್ನಪ್ಪಿದ್ದಾರೆ. ಇವರೆಲ್ಲ 60 ರಿಂದ 70 ವರ್ಷ ವಯಸ್ಸಿನವರು ಎಂದು ತಿಳಿದುಬಂದಿದೆ. 6 ಮಂದಿಗೆ ಸುಟ್ಟ ಗಾಯಗಳಾಗಿವೆ. ಕೆಲವೇ ತಾಸಿನಲ್ಲಿ ಬೆಂಕಿಯನ್ನು ತಹಬದಿಗೆ ತರಲಾಗಿದ್ದು, ರಕ್ಷಿಸಲಾದ ರೋಗಿಗಳನ್ನೆಲ್ಲ ಮತ್ತೊಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ರಾಷ್ಟ್ರಪತಿ, ಪ್ರಧಾನಮಂತ್ರಿ ಸಂತಾಪ: ರಾಜ್ಕೋಟ್ ಆಸ್ಪತ್ರೆಯ ಅಗ್ನಿ ದುರಂತದಲ್ಲಿ ಮರಣಿಸಿದವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಬೆಂಕಿಯಿಂದಾಗಿ ಕರೊನಾ ಸೋಂಕಿತರು ಜೀವ ಕಳೆದುಕೊಂಡಿರುವ ಘಟನೆ ತೀವ್ರ ನೋವುಂಟು ಮಾಡಿದೆ. ಕುಟುಂಬಸ್ಥರನ್ನು ಕಳೆದುಕೊಂಡವರ ಜತೆಗೆ ನಾವಿದ್ದೇವೆ. ಗಾಯಾಳುಗಳು ಮತ್ತು ರೋಗಿಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ. ಸಂತ್ರಸ್ತರಿಗೆ ಎಲ್ಲ ರೀತಿಯ ಸಹಾಯವನ್ನು ನೀಡಲಾಗುತ್ತದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ವರದಿ ಕೇಳಿದ ಸುಪ್ರೀಂಕೋರ್ಟ್: ರಾಜ್ಕೋಟ್ ಆಸ್ಪತ್ರೆಯ ದುರ್ಘಟನೆ ಕುರಿತು ಸ್ವಯಂಪ್ರೇರಿತ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಘಟನೆ ಕುರಿತು ಗುಜರಾತ್ ಸರ್ಕಾರದಿಂದ ವರದಿ ಕೋರಿದೆ. ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಕೋಟ್ ಘಟನೆ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಶನಿವಾರದೊಳಗೆ ಸಭೆ ಕರೆಯಲಿದ್ದು, ಆಸ್ಪತ್ರೆಗಳಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಪರಿಸ್ಥಿತಿ ಎದುರಿಸಲು ಕೇಂದ್ರಕ್ಕೆ ಸೂಚನೆ: ಹಬ್ಬಗಳ ಬಳಿಕ ದೇಶದಲ್ಲಿ ಕರೊನಾ ಪ್ರಕರಣಗಳು ಮತ್ತೆ ಉಲ್ಬಣ ಗೊಳ್ಳುತ್ತಿದ್ದು, ಸಾಮಾನ್ಯ ಮಾರ್ಗಸೂಚಿಗಳು ಇದನ್ನು ತಡೆಯಲು ಸಾಕಾಗುವುದಿಲ್ಲ. ಹೀಗಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಗೊಳಿಸುವ ಮೂಲಕ ಪರಿಸ್ಥಿತಿಯನ್ನು ಮುನ್ನಡೆಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಶೇ.80ರಷ್ಟು ಜನರು ಮಾಸ್ಕ್ಗಳನ್ನು ಧರಿಸುತ್ತಿಲ್ಲ. ಉಳಿದವರು ಅದನ್ನು ಕೆನ್ನೆ ನೇತುಹಾಕಿಕೊಂಡಿರುತ್ತಾರೆ. ಹೀಗಾಗಿ ಗಂಭೀರ ಪ್ರಯತ್ನಗಳನ್ನು ಕೈಗೊಳ್ಳಬೇಕು ಹಾಗೂ ಸಭೆ, ಸಮಾರಂಭಗಳನ್ನು ನಿರ್ಬಂಧಿಸಬೇಕು. ಜನರಿಗೆ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಸರಿಯಾದ ಮಾಹಿತಿಯನ್ನು ನೀಡಬೇಕು ಎಂದು ಸುಪ್ರೀಂ ಹೇಳಿದೆ.
ಗುಜರಾತ್ನ ಅಹಮದಾಬಾದ್ನಲ್ಲಿರುವ ನವರಂಗ್ಪುರ ಪ್ರದೇಶದಲ್ಲಿನ ಖಾಸಗಿ ಆಸ್ಪತ್ರೆಯೊಂದರ ಐಸಿಯು ವಾರ್ಡ್ನಲ್ಲಿ ಕಳೆದ ಆಗಸ್ಟ್ 6ರಂದು ಅಗ್ನಿ ದುರಂತ ಸಂಭವಿಸಿ ಮೂವರು ಮಹಿಳೆಯರು ಸೇರಿ 8 ಮಂದಿ ಸೋಂಕಿತರು ಸಾವನ್ನಪ್ಪಿದ್ದರು. ಶಾರ್ಟ್ ಸರ್ಕ್ಯೂಟ್ನಿಂದಾಗಿ ರಾತ್ರಿ 2.30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಆಂಧ್ರಪ್ರದೇಶದ ವಿಜಯವಾಡದಲ್ಲಿ ತಾತ್ಕಾಲಿಕವಾಗಿ ಕರೊನಾ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಲಾಗಿದ್ದ ಖಾಸಗಿ ಹೋಟೆಲ್ನಲ್ಲಿ ಆಗಸ್ಟ್ 9ರಂದು ಅಗ್ನಿ ದುರಂತ ಸಂಭವಿಸಿತು. 10 ಸೋಂಕಿತರು ಸಾವನ್ನಪ್ಪಿದ್ದರು. ಸುಮಾರು 20 ಮಂದಿಗೆ ಸುಟ್ಟ ಗಾಯಗಳಾಗಿದ್ದವು. ಈ ಕೇಂದ್ರವನ್ನು ರಮೇಶ್ ಆಸ್ಪತ್ರೆ ನಿರ್ವಹಿಸುತ್ತಿತ್ತು.
ಆಸ್ಟ್ರಾಜೆನೆಕಾ ಸಂಸ್ಥೆ ತಮ್ಮ ಲಸಿಕೆಯ ಮೇಲಿರುವ ಆರೋಪಗಳನ್ನು ನಿವಾರಿಸಲು ಜಾಗತಿಕವಾಗಿ ಲಸಿಕೆಯ ಹೆಚ್ಚುವರಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಲಸಿಕೆಯು ಶೇಕಡ 90 ಪರಿಣಾಮಕಾರಿಯಾಗಿದೆ ಎಂಬುದನ್ನು ವಿಶ್ವಕ್ಕೆ ದೃಢಪಡಿಸಲು ಆಸ್ಟ್ರಾಜೆನೆಕಾ ಬಯಸಿದೆ ಎಂದು ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ಯಾಸ್ಕಲ್ ಸೊರಿಯೊಟ್ ಹೇಳಿದ್ದಾರೆ. ಉತ್ಪಾದನಾ ವ್ಯತ್ಯಾಸದಿಂದಾಗಿ ಕಡಿಮೆ ಡೋಸೇಜ್ ಪಡೆದವರಲ್ಲಿನ ಫಲಿತಾಂಶ ಹೆಚ್ಚು ವರದಿಯಾಗಿದೆ ಎಂಬ ಅಂಶವನ್ನು ಕಂಪನಿ ಒಪ್ಪಿಕೊಂಡ ಬಳಿಕ ವಿಶ್ವದ ಅನೇಕ ತಜ್ಞರು ಲಸಿಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಲಸಿಕೆಯಲ್ಲಿನ ದೋಷದ ಬಗ್ಗೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲಾಗಿಲ್ಲ ಎಂಬ ಆರೋಪವನ್ನು ಆಸ್ಟ್ರಾಜೆನೆಕಾ ಎದುರಿಸುತ್ತಿದೆ.
ದೇಶದ ವಿವಿಧೆಡೆ ನಡೆಯುತ್ತಿರುವ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯನ್ನು ಪರೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಗೆ ಶನಿವಾರ ಭೇಟಿ ನೀಡಲಿದ್ದಾರೆ. ಹೈದರಾಬಾದ್ನಲ್ಲಿ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಯನ್ನು ಮೋದಿ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಅಹಮದಾಬಾದ್ನಲ್ಲಿನ ಜೈಡುಸ್ ಕ್ಯಾಡಿಲಾದ ಜೈಕೋವಿ-ಡ್ ಲಸಿಕೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಬಳಿಕ ಪುಣೆಯ ಸೆರಂ ಇನ್ಸ್ಟಿಟ್ಯೂಟ್ಗೆ ಭೇಟಿ ನೀಡಿ ಆಸ್ಟ್ರಾಜೆನಿಕಾದ ಲಸಿಕೆಯ ಪ್ರಯೋಗಗಳು ಹಾಗೂ ಉತ್ಪಾದನೆಯನ್ನು ಪರಿಶೀಲಿಸಲಿದ್ದಾರೆ.