

ರೋಗಕ್ಕಿಂತ ಅದರ ಕುರಿತ ಭಯವೇ ಹೆಚ್ಚು ಅಪಾಯಕಾರಿ ಎನ್ನುವುದು ಬಹುತೇಕ ಎಲ್ಲ ವ್ಯಾಧಿ ವಿಚಾರದಲ್ಲಿ ನಿಜವಾದ ಸಂಗತಿ. ಕರೊನಾ ವಿಚಾರದಲ್ಲೂ ಅದು ನಿಜವಾಗಿದೆ. ಜಗತ್ತಿನಲ್ಲಿ ಕೋಟ್ಯಂತರ ಜನರು ಕರೊನಾ ಸೋಂಕಿತರಾಗಿದ್ದಾರೆ. ಲಕ್ಷಾಂತರ ಜನ ಮೃತಪಟ್ಟಿದ್ದಾರೆ. ಭಾರತದಲ್ಲಿಯೂ ಲಕ್ಷಗಟ್ಟಲೆ ಜನರು ಕೋವಿಡ್-19 ಪೀಡಿತರಾಗಿದ್ದಾರೆ. ಸಾವಿರಾರು ಜನರು ಬಲಿಯಾಗಿದ್ದಾರೆ. ಕರ್ನಾಟಕವೂ ಇದರಿಂದ ಹೊರತಲ್ಲ. ಸೋಂಕು ಪೀಡಿತರ ಹಾಗೂ ಸಾವಿನ ಸಂಖ್ಯೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರೋಣ.
ಸಾಂಕ್ರಾಮಿಕತೆ ಪ್ರತಿಯೊಬ್ಬರಿಗೂ ಅಪಾಯಕಾರಿಯಾದುದೇ. ವೈರಸ್ ಯಾರ ಮೇಲಾದರೂ ಆಕ್ರಮಣ ಮಾಡಬಹುದು. ಯಾರೂ ಅದನ್ನು ಹರಡಬಹುದಾಗಿದೆ. ಕರೊನಾ ಅದೃಶ್ಯವಾದುದು. ಅದರ ಬಗ್ಗೆ ತಿಳಿಯದ ಎಷ್ಟೋ ವಿಚಾರಗಳಿವೆ. ಕಣ್ಣಿಗೆ ಕಾಣದ ಹಾಗೂ ತಿಳಿಯದ ವಿಷಯದ ಬಗ್ಗೆ ಭಯವೆನ್ನುವುದು ಇದ್ದೇ ಇರುತ್ತದೆ. ಅದು ಸರ್ವೆಸಾಮಾನ್ಯ. ಆದರೆ, ಸೋಂಕು ಎಂಬುದೊಂದು ‘ಕಳಂಕ’ ಎಂಬ ಜನರಲ್ಲಿನ ಮನೋಭಾವ ಸಮಸ್ಯೆಯ ಇನ್ನೊಂದು ಗಂಭೀರ ಆಯಾಮವಾಗಿದೆ.
ರೋಗವನ್ನು ಕಳಂಕವೆಂದು ಹೇಳಿ ಹೀಯಾಳಿಸಿದರೆ, ಪೀಡಿತರು ತಮ್ಮ ರೋಗಲಕ್ಷಣಗಳನ್ನು ಅಥವಾ ಅನಾರೋಗ್ಯವನ್ನೇ ಮುಚ್ಚಿಡಬಹುದು. ತಕ್ಷಣವೇ ಆರೋಗ್ಯಸೇವೆ ಪಡೆಯುವುದ ರಿಂದ ದೂರವುಳಿಯಬಹುದು. ವ್ಯಕ್ತಿಗಳು ಆರೋಗ್ಯಕರ ಅಭ್ಯಾಸ ಅಳವಡಿಸಿ ಕೊಳ್ಳದಂತೆ ಮಾಡಲೂಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಳಂಕದ ನಿಂದೆಯಿಂದಾಗಿ ರೋಗ ವ್ಯಾಪಿಸುವುದನ್ನು ನಿಯಂತ್ರಿಸುವುದು ಕಷ್ಟವಾಗಬಹುದು.
ಹೆಚ್ಚುತ್ತಿರುವ ಸಾಮಾಜಿಕ ಕಳಂಕವನ್ನು ನಿರ್ವಹಿಸುವುದೇ ಈಗ ಸಮಾಜ ಎದುರಿಸುತ್ತಿರುವ ಮಹತ್ವದ ಸವಾಲಾಗಿದೆ. ಕೋವಿಡ್ ಸೋಂಕಿತರನ್ನು ಸಾಮಾಜಿಕವಾಗಿ ಬಹಿಷ್ಕರಿಸುವ ಆತಂಕಕಾರಿ ವಿದ್ಯಮಾನಗಳು ದೇಶದೆಲ್ಲೆಡೆಯಿಂದ ವರದಿಯಾಗುತ್ತಿವೆ. ನಗರ ಪ್ರದೇಶಗಳಿಂದ ಗ್ರಾಮೀಣ ಭಾರತಕ್ಕೂ ಸೋಂಕು ಹರಡುತ್ತಿರುವುದರಿಂದ ಇಂಥ ಪ್ರಕರಣಗಳು ಹೆಚ್ಚುವ ಅಪಾಯವಿದೆ. ಯಾಕೆಂದರೆ, ಪರೀಕ್ಷೆಯಲ್ಲಿ ಕರೊನಾ ಪಾಸಿಟಿವ್ ಇರುವುದು ದೃಢಪಟ್ಟವರಿಗೆ ಅದೊಂದು ‘ಡೆತ್ ವಾರಂಟ್’ ಅನ್ನುವ ಮಟ್ಟಕ್ಕೆ ಭಯ ಹುಟ್ಟಿಸಲಾಗುತ್ತಿದೆ.
ನಮ್ಮ ತಪ್ಪಲ್ಲ: ವೈರಸ್ ವಿರುದ್ಧ ನಾವು ಹೋರಾಡುತ್ತಿದ್ದೇವೆ. ವೈರಸ್ ವಿರುದ್ಧ ಹೋರಾಡಲು ಜನರನ್ನು ಸದೃಢಗೊಳಿಸಲು, ಅದನ್ನೆದುರಿಸಲು ಸಿದ್ಧವಾಗುವಂತೆ ಹಾಗೂ ಯೋಗ್ಯವಾಗುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಕರೊನಾ ಸೋಂಕು ತಗಲಿದರೆ ಅದು ನಿಮ್ಮ ತಪ್ಪಲ್ಲ. ಸೋಂಕಿತರಾದರೆ ಅದು ನಿಮ್ಮ ನೈತಿಕ ವೈಫಲ್ಯವಲ್ಲ ಹಾಗೂ ಆ ಕುರಿತು ನೀವು ನಾಚಿಕೆಪಡಬೇಕಿಲ್ಲ. ಯಾವುದೇ ಸೋಂಕಿನ ಸಾಂಕ್ರಾಮಿಕತೆ-ಅದು ವೈರಸ್ ಇರಲಿ, ಬ್ಯಾಕ್ಟೀರಿಯಾವೇ ಇರಲಿ- ಉಲ್ಬಣಗೊಳ್ಳುವುದನ್ನು ತಡೆಯುವುದು ಸಮಾಜ ಮತ್ತು ಸರ್ಕಾರದ ಕರ್ತವ್ಯವಾಗಿದೆ. ನೀವು ಯಾವುದೇ ರೀತಿಯಲ್ಲಿ ಅದಕ್ಕೆ ಹೊಣೆಗಾರರಲ್ಲ. ಯಾವ ಕಾರಣಕ್ಕೂ ಯಾವತ್ತೂ ಅಪರಾಧಿ ಪ್ರಜ್ಞೆಯಿಂದ ಬಳಲಬೇಡಿ. ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರೂ ನಿಮ್ಮೊಂದಿಗಿದ್ದಾರೆಂಬ ಭರವಸೆ ಇರಲಿ.
ಸ್ವಯಂ ಆರೈಕೆಗೆ ಇದು ಸಕಾಲ. ನಮ್ಮ ಪ್ರಾಣ ಅಮೂಲ್ಯವಾಗಿ ಇರುವುದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ. ಧ್ಯಾನ ಮತ್ತು ಯೋಗ ಇದಕ್ಕೆ ಸಹಕಾರಿ. ಇವೆರಡೂ ಮನಸ್ಸು ಮತ್ತು ದೇಹಕ್ಕೆ ಉಲ್ಲಾಸ ಹಾಗೂ ಕ್ಷಮತೆ ಒದಗಿಸುತ್ತವೆ. ಪ್ರಸ್ತುತ ಸಾಂಕ್ರಾಮಿಕತೆ ಆತಂಕ ಸೃಷ್ಟಿಸುತ್ತಿದೆಯಾದ್ದರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳಲು ತಜ್ಞರನ್ನು ಸಂರ್ಪಸಲು ಹಿಂಜರಿಯಬೇಡಿ. ಆತಂಕಿತರಾಗದೆ ಉಲ್ಲಸಿತರಾಗಿರುವುದೇ ದೊಡ್ಡ ಪರಿಹಾರ. ಸೋಂಕಿತರಿಗೆ ಸಹಾನುಭೂತಿಯ ನುಡಿ ಹಾಗೂ ನೈತಿಕ ಬೆಂಬಲ ನೀಡಿದರೆ ಅದು ವ್ಯಾಧಿ ಗುಣಪಡಿಸುವಲ್ಲಿ ದೊಡ್ಡ ಕೊಡುಗೆ ನೀಡುತ್ತದೆ.
ಯಾವುದು ಹೊಣೆ?: ಕರೊನಾ ಮಹಾಮಾರಿ ಜಗತ್ತನ್ನು ಪೀಡಿಸುತ್ತಿದೆ. ವಾಸ್ತವವಾಗಿ ನಾವು ಕೇಳಬೇಕಾದ ಪ್ರಶ್ನೆ: ಇದಕ್ಕೆ ಯಾರು ಹೊಣೆ ಎಂಬುದಲ್ಲ, ಯಾವುದು ಹೊಣೆ ಎಂದು. ವೈರಸ್ ಹೊಣೆ ಎಂಬುದು ಸುಸ್ಪಷ್ಟ ಉತ್ತರ. ವೈರಸ್ನ್ನು ನಮ್ಮಿಂದ ಪ್ರತ್ಯೇಕಗೊಳಿಸಿ ಅದರ ವಿರುದ್ಧ ಹೋರಾಡಬೇಕಾದುದು ಸಮಾಜದ ಕರ್ತವ್ಯ. ಸೋಂಕಿತರದ್ದು ಯಾವುದೇ ತಪ್ಪಿಲ್ಲ ಎಂದು ಎಷ್ಟೇ ಹೇಳಿದರೂ ಅವರಿಗೆ ‘ಕಳಂಕದ ಹಣೆಪಟ್ಟಿ’ ಕಟ್ಟುವ ಪ್ರವೃತ್ತಿ ಮಾತ್ರ ಇನ್ನೂ ಹೋಗಿಲ್ಲ.
ಕಳಂಕವು ವೈರಸ್ಗಿಂತ ಹೆಚ್ಚು ಅಪಾಯಕಾರಿಯಾದುದು. ವೈರಸ್ ವಿರುದ್ಧ ಹೋರಾಡುವಷ್ಟೇ ದೃಢತೆಯಿಂದ ಈ ಕಳಂಕದ ಪಿಡುಗಿನ ವಿರುದ್ಧ ಹೋರಾಡಬೇಕಿದೆ. ಕರೊನಾ ವೈರಸ್ ಕೂಡ ಇತರ ಯಾವುದೇ ಒಂದು ರೋಗದಂತೆಯೇ ಒಂದು ವ್ಯಾಧಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ರೋಗದ ಕುರಿತ ತಪು್ಪಕಲ್ಪನೆಗಳನ್ನು ಹೋಗಲಾಡಿಸುವುದು ಅಗತ್ಯ. ಆಶಾವಾದ ಮತ್ತು ಘನತೆಯೇ ಈ ಸಾಂಕ್ರಾಮಿಕತೆಯಿಂದ ಪಾರಾಗಲು ಇರುವ ಔಷಧಗಳಾಗಿವೆ. ಸೋಂಕು ಹರಡುವ ಕುರಿತ ವಾಸ್ತವ, ರೋಗಲಕ್ಷಣ ಮತ್ತು ಚಿಕಿತ್ಸೆ ಕುರಿತು ಜನರು ಸರಿಯಾಗಿ ಅರ್ಥ ಮಾಡಿಕೊಂಡಾಗ ರೋಗದ ಕುರಿತ ಮಿಥ್ಯೆಗಳು ತನ್ನಿಂತಾನೇ ಕಡಿಮೆಯಾಗುತ್ತವೆ. ನಂಬಲರ್ಹ ವೈಜ್ಞಾನಿಕ ಮೂಲಗಳನ್ನು ಮಾತ್ರ ನೆಚ್ಚಬೇಕು. ವ್ಯಕ್ತಿ ಮತ್ತು ರೋಗವನ್ನು ಪ್ರತ್ಯೇಕಿಸಬೇಕು. ರೋಗಗಳು ಬರುತ್ತವೆ-ಹೋಗುತ್ತವೆ. ಕರೊನಾ ಕೂಡ ಅದೇ ರೀತಿ ಹೋಗುತ್ತದೆ. ರೋಗದ ಕುರಿತ ಭೀತಿ ಮತ್ತು ಗಾಳಿ ಸುದ್ದಿಗಳನ್ನು ನಂಬದೆ ವಾಸ್ತವಾಂಶಗಳನ್ನು ಅವಲಂಬಿಸಿ ಸೂಕ್ತ ಕ್ರಮಗಳನ್ನು ಕೈಗೊಂಡರೆ ಈ ಸಾಂಕ್ರಾಮಿಕತೆ ಆದಷ್ಟು ಬೇಗ ದೂರವಾಗುತ್ತದೆ.
(ಲೇಖಕರು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕರು ಮತ್ತು ಕರ್ನಾಟಕ ಆರೋಗ್ಯ ಆಯೋಗದ ಮಾಜಿ ಅಧ್ಯಕ್ಷರು)