ಕೋವಿಡ್ ಲಘುಸ್ಫೋಟ: ದೇಶಾದ್ಯಂತ ಹೊಸ ಪ್ರಕರಣ ಹೆಚ್ಚಳ, ಕೇರಳದಲ್ಲಿ ಕೇಸ್ 3 ಪಟ್ಟು ಅಧಿಕ

Front
Published on

ನವದೆಹಲಿ: ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೇ ದೇಶದಲ್ಲಿ ಕರೊನಾ ಸೋಂಕು ಪ್ರಕರಣಗಳಲ್ಲಿ ಏರಿಕೆ ಮುಂದುವರಿದಿದೆ. ಗುರುವಾರ ಬೆಳಗ್ಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 46,164 ಹೊಸ ಪ್ರಕರಣ ದೃಢಪಟ್ಟಿದ್ದು ಬುಧವಾರಕ್ಕೆ ಹೋಲಿಸಿದಲ್ಲಿ ಶೇ.22.7ಏರಿಕೆಯಾಗಿದೆ. ಇನ್ನು ಕೇರಳದಲ್ಲಿ ಸತತ 2ನೇ ದಿನ ಕರೊನಾ ಪ್ರಕರಣಗಳ ಸಂಖ್ಯೆ 30 ಸಾವಿರ ದಾಟಿರುವುದು ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಿಗೆ ಗಂಭೀರ ಎಚ್ಚರಿಕೆಯನ್ನು ರವಾನಿಸಿದೆ. ಗುರುವಾರದ ಅಂತ್ಯಕ್ಕೆ ದೇಶದಲ್ಲಿ ಕರೊನಾ ಕೇಸ್​ಗಳ ಒಟ್ಟು ಸಂಖ್ಯೆ 3,25,58,530ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 607 ಮಂದಿ ಮೃತಪಟ್ಟಿದ್ದು ಒಟ್ಟು 4,36,365 ಜನರು ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಒಟ್ಟು 3,17,88,440 ಮಂದಿ ಗುಣಮುಖರಾಗಿದ್ದು ಚೇತರಿಕೆ ಪ್ರಮಾಣ ಶೇಕಡ 97.63 ಆಗಿದೆ. ದೇಶದಲ್ಲಿ 3,33,725 ಸಕ್ರಿಯ ಪ್ರಕರಣಗಳಿವೆ.

ಕೇರಳದಲ್ಲಿ 3 ಪಟ್ಟು ಅಧಿಕ: ಕೇರಳದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಅಧಿಕೃತವಾಗಿ ಪ್ರಕಟಿಸಿರುವುದಕ್ಕಿಂತ ಮೂರು ಪಟ್ಟು ಹೆಚ್ಚಾಗಿರುವುದಾಗಿ ತಜ್ಞರು ಅನುಮಾನಿಸಿದ್ದಾರೆ. ಬುಧವಾರ 31,445 ಪ್ರಕರಣಗಳು ದೃಢಪಟ್ಟು ಟೆಸ್ಟಿಂಗ್ ಪಾಸಿಟಿವ್ ದರ (ಟಿಪಿಆರ್) ಶೇ. 19.3 ಆಗಿದ್ದು ಭಾರಿ ಕಳವಳಕ್ಕೆ ಕಾರಣವಾಗಿತ್ತು. ಕೇರಳದ ಪ್ರಕರಣದಿಂದಾಗಿ ಇಡೀ ದೇಶದಲ್ಲಿ ವ್ಯಾಧಿಯ ಕೇಸ್​ನಲ್ಲಿ ಏರಿಕೆ ಕಂಡುಬಂದಿತ್ತು. ಕೇರಳದಲ್ಲಿ ಗುರುವಾರ 30,007 ಹೊಸ ಪ್ರಕರಣ ವರದಿಯಾಗಿವೆ. ಈ ಅವಧಿಯಲ್ಲಿ 162 ಸೋಂಕಿತರು ಮೃತಪಟ್ಟಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ.

ಎರಡು ಕೋಟಿ ಲಸಿಕೆ ರವಾನೆ: ದೇಶಾದ್ಯಂತ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಆದ್ಯತೆ ಮೇಲೆ ಲಸಿಕೆ ನೀಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ. ಈಗಾಗಲೇ ಕೇಂದ್ರ ಆರೋಗ್ಯ ಸಚಿವರು ಘೋಷಿಸಿದಂತೆ ಆಗಸ್ಟ್ 27ರಿಂದ 31ರವರೆಗೆ ಐದು ದಿನದಲ್ಲಿ ಎಲ್ಲ ರಾಜ್ಯಗಳಿಗೂ 2 ಕೋಟಿ ಲಸಿಕೆ ವಿತರಿಸಲಾಗುತ್ತದೆ. ಜಿಲ್ಲಾವಾರು ಶಿಕ್ಷಣ ಏಕೀಕೃತ ಮಾಹಿತಿ(ಯುಡಿಐಎಸ್​ಇ) ದತ್ತಾಂಶ ಬಳಕೆ ಮಾಡಿಕೊಂಡು ರಾಜ್ಯ ಶಿಕ್ಷಣ ಇಲಾಖೆ, ನವೋದಯ ವಿದ್ಯಾಲಯ ಸಂಘಟನ್, ಕೇಂದ್ರೀಯ ವಿದ್ಯಾಲಯ ಸಂಘಟನ್ ಮುಂತಾದ ಸಂಸ್ಥೆಗಳ ಜತೆಗೆ ಸಮನ್ವಯ ಸಾಧಿಸಿ ಎಲ್ಲ ಶಾಲಾ ಸಿಬ್ಬಂದಿಗೆ ಲಸಿಕೆ ನೀಡಬೇಕೆಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net