ತಪ್ಪಿದ ಕೋವಿಡ್ ಸಾವಿನ ಲೆಕ್ಕ!; ಮೃತಪಟ್ಟವರು 40 ಸಾವಿರ, ಪರಿಹಾರ ವಿತರಣೆ 58 ಸಾವಿರ ಮಂದಿಗೆ!

Covid
Published on

ಬೆಂಗಳೂರು: ರಾಜ್ಯದಲ್ಲಿ ಕೋವಿಡ್​ನಿಂದ ಮೃತಪಟ್ಟ 58,039 (ಜೂ. 30ರವರೆಗೆ) ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಆದರೆ ಜಿಲ್ಲೆಗಳಿಂದ ಹೆಚ್ಚುವರಿ ಕೋವಿಡ್ ಸಾವುಗಳು ಸೇರ್ಪಡೆಯಾಗಿದ್ದು, ಈ ಸಂಖ್ಯೆ 71 ಸಾವಿರ ಮೀರುವ ಸಾಧ್ಯತೆ ಇದೆ. ಆದರೆ ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ, ಈ ಅವಧಿವರೆಗೆ ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆ 40,075. ಜೂ.29ರ ಸಂಜೆ ವೇಳೆಗೆ ಕೋವಿಡ್ ಪರಿಹಾರಕ್ಕಾಗಿ ಸರ್ಕಾರ 62,700ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿದೆ. ಈ ಪೈಕಿ ಈಗಾಗಲೆ 58,039 ಕುಟುಂಬಗಳಿಗೆ ತಲಾ 50 ಸಾವಿರ ರೂ. ಪರಿಹಾರ ಒದಗಿಸಿದ್ದು, ಫಲಾನುಭವಿಗಳು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದ ಕಾರಣ 2,453 ಅರ್ಜಿಗಳನ್ನು ತಡೆಹಿಡಿಯಲಾಗಿದ್ದು, 2,251 ಅರ್ಜಿಗಳು ಪರಿಹಾರಕ್ಕೆ ಬಾಕಿ ಉಳಿದಿವೆ ಎಂದು ಪಿಂಚಣಿ ಇಲಾಖೆ ಮೂಲಗಳು ತಿಳಿಸಿವೆ. ಪಿಂಚಣಿ ಇಲಾಖೆಗೆ ಪರಿಹಾರಕ್ಕಾಗಿ ಸಲ್ಲಿಕೆಯಾಗಿರುವ 62 ಸಾವಿರಕ್ಕೂ ಅಧಿಕ ಅರ್ಜಿಗಳಲ್ಲಿ 29,466 ಆರೋಗ್ಯ ಇಲಾಖೆ ಅಧಿಕೃತವಾಗಿ (40,075) ದಾಖಲಿಸಿರುವ ಸಾವುಗಳಾಗಿವೆ. ಉಳಿದಂತೆ 10,600ಕ್ಕೂ ಹೆಚ್ಚು ಕುಟುಂಬಗಳು ಪರಿಹಾರ ಪಡೆಯಲು ಆಸಕ್ತಿ ತೋರಿಸಿಲ್ಲ ಅಥವಾ ಹಕ್ಕು ಪಡೆಯಲು ಕಾನೂನುಬದ್ಧ ಉತ್ತರಾಧಿಕಾರತ್ವ ಹೊಂದಿಲ್ಲದಿರಬಹುದು.

ಹೆಚ್ಚುವರಿ ಅರ್ಜಿಗಳು 33 ಸಾವಿರಕ್ಕೂ ಅಧಿಕ: ಆರೋಗ್ಯ ಇಲಾಖೆ ಪ್ರಕಾರ, ಕೋವಿಡ್​ನಿಂದ ಮೃತರಪಟ್ಟವರ ಈವರೆಗಿನ ಸಂಖ್ಯೆ 40, 075. ಪರಿಹಾರಕ್ಕಾಗಿ ಸರ್ಕಾರ ಈವರೆಗೂ ಸ್ವೀಕರಿಸಿರುವ ಅರ್ಜಿಗಳ ಸಂಖ್ಯೆ 62 ಸಾವಿರಕ್ಕೂ ಅಧಿಕ. ಅಂದರೆ ಅಧಿಕೃತ ಸಾವಿನ ಸಂಖ್ಯೆಗಿಂತ ಹೆಚ್ಚುವರಿಯಾಗಿ 33 ಸಾವಿರ ಅರ್ಜಿಗಳನ್ನು ಸರ್ಕಾರ ಸ್ವೀಕರಿಸಿದೆ. ಈ ಪೈಕಿ ಅನುಮೋದನೆಗಾಗಿ ಬಾಕಿ ಇರುವ 2,251 ಅರ್ಜಿಗಳು ತಿರಸ್ಕೃತವಾದರೂ, 31 ಸಾವಿರ ಹೆಚ್ಚುವರಿ ಅರ್ಜಿ ಸ್ವೀಕರಿಸಿದಂತಾಗಿದೆ.

ಅಧಿಕೃತ ದಾಖಲೆಗೆ ಸೇರ್ಪಡೆ ಅಗತ್ಯ: ಕೋವಿಡ್ ಸಾವಿಗೆ ಪಿಂಚಣಿ ಇಲಾಖೆ ಈವರೆಗೂ ನೀಡಿರುವ ಹೆಚ್ಚುವರಿ ಪರಿಹಾರ ಪ್ರಕರಣಗಳನ್ನು ಆರೋಗ್ಯ ಇಲಾಖೆ ಅಧಿಕೃತ ದಾಖಲೆಗೆ ಸೇರಿಸುವುದು ಮುಖ್ಯವಾಗಿದೆ. ಇಲ್ಲವಾದಲ್ಲಿ ಇವುಗಳಲ್ಲಿ 27 ಸಾವಿರಕ್ಕೂ ಅಧಿಕ ಬಿಪಿಎಲ್ ಕುಟುಂಬಗಳು ರಾಜ್ಯ ಸರ್ಕಾರದ ಒಂದು ಲಕ್ಷ ರೂ. ಪರಿಹಾರದಿಂದ ವಂಚಿತವಾಗಲಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ 975 ಕೋವಿಡ್ ಕೇಸ್: ರಾಜ್ಯದಲ್ಲಿ ಶನಿವಾರ 26,061 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 975 ಮಂದಿಗೆ ಸೋಂಕು ದೃಢಪಟ್ಟಿದೆ. ಶಿವಮೊಗ್ಗದ 37 ವರ್ಷದ ವ್ಯಕ್ತಿ ಸೋಂಕಿನಿಂದ ಮೃತರಾಗಿದ್ದು, ಮೃತರ ಒಟ್ಟು ಸಂಖ್ಯೆ 40,077ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 668 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರ ಒಟ್ಟು ಸಂಖ್ಯೆ 39.24 ಲಕ್ಷ ಮೀರಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 6,440 ತಲುಪಿದೆ. ಈವರೆಗೂ 39.71 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ.

ಹೆಚ್ಚುವರಿ ಸಾವು ಎಲ್ಲಿಂದ ವರದಿಯಾಗುತ್ತಿದೆ?: ಕೋವಿಡ್​ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದ ನಂತರ, ಪರಿಹಾರ ವಿತರಣೆಯ ಮೇಲ್ವಿಚಾರಣೆ ಹೊಣೆ ಹೊತ್ತ ಪಿಂಚಣಿ ಇಲಾಖೆಯು ಆರೋಗ್ಯ ಇಲಾಖೆಯಿಂದ ಅಧಿಕೃತವಾಗಿ ಸಾವುಗಳನ್ನು ದಾಖಲಿಸದ ಕುಟುಂಬಗಳಿಂದಲೂ ಅರ್ಜಿಗಳನ್ನು ಸ್ವೀಕರಿಸಿದೆ. ಆದರೆ ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿಯೊಂದಿಗೆ ಇದು ಹೊಂದಾಣಿಕೆ ಆಗಾಗಿದ್ದಾಗ ಸರ್ಕಾರ ಈ ಪ್ರಕರಣಗಳನ್ನು ಪರಿಶೀಲಿಸಲು ನಿರ್ಧರಿಸಿತು. ಇದಕ್ಕಾಗಿ ಪರಿಹಾರ ಕೋರಿದ ಸಾವುಗಳನ್ನು ದೃಢೀಕರಿಸಲು ಜಿಲ್ಲಾ ಸಮಿತಿಗಳನ್ನು ರಚಿಸಲಾಯಿತು. ಆರೋಗ್ಯ ಇಲಾಖೆ ಬುಲೆಟಿನ್​ನ ಭಾಗ ವಲ್ಲದ ಹೆಚ್ಚುವರಿ ಸಾವುಗಳನ್ನು ಸಮಿತಿಗಳು ಕೋವಿಡ್ ಸಾವುಗಳು ಎಂದು ಪ್ರಮಾಣೀಕರಿಸಿದವು. ಹಾಗಾಗಿ ಅಧಿಕೃತ ಸಾವುಗಳಿಗಿಂತ ಹೆಚ್ಚುವರಿ ಪರಿಹಾರ ನೀಡಲಾಗಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಂಕಿತರಿಂದ ಹೆಚ್ಚು ಹಣ ಸುಲಿಗೆ

ಕೋವಿಡ್ ರೋಗಿಗಳಿಂದ ಹೆಚ್ಚುವರಿ ಶುಲ್ಕ ವಿಧಿಸಿದ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ತಕ್ಕ ಶಾಸ್ತಿ ಮಾಡಿದೆ. ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿ ದರವನ್ನೂ ಮೀರಿ ಶುಲ್ಕ ವಸೂಲು ಮಾಡಿದ ಆಸ್ಪತ್ರೆಗಳಿಂದ ಹೆಚ್ಚುವರಿ ಮೊತ್ತವನ್ನು ಕಕ್ಕಿಸಿದೆ. ಹೆಚ್ಚು ಶುಲ್ಕ ವಸೂಲು ಮಾಡಿರುವ ಬಗ್ಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್​ಎಎಸ್​ಟಿ)ಗೆ ಬರೋಬ್ಬರಿ 2701 ದೂರು ಬಂದಿದ್ದವು! ಈ ದೂರು ಬೆನ್ನಟ್ಟಿದ ಆರೋಗ್ಯ ಸುರಕ್ಷಾ ಟ್ರಸ್ಟ್ ಅಧಿಕಾರಿಗಳು ಹೆಚ್ಚು ಹಣ ಸುಲಿಗೆ ಮಾಡಿದ್ದನ್ನು ಪತ್ತೆ ಮಾಡಿ ವಸೂಲು ಮಾಡಿದ್ದಾರೆ. ಇದುವರೆಗೆ 78 ಆಸ್ಪತ್ರೆಗಳಿಂದ 1,26,36,833 ರೂ. ವಸೂಲು ಮಾಡಿದ್ದಾರೆ. ಈ ಹಣವನ್ನು ಸಂಬಂಧಿಸಿದ 307 ರೋಗಿಗಳಿಗೆ ಮರುಪಾವತಿ ಮಾಡಿ ಟ್ರಸ್ಟ್ ಮೆಚ್ಚುಗೆ ಗಳಿಸಿದೆ. 2020ರ ಮಾರ್ಚ್​ನಲ್ಲಿ ಸಾಂಕ್ರಾಮಿಕ ರೋಗವು ರಾಜ್ಯವನ್ನು ಅಪ್ಪಳಿಸಿದಾಗ, ರೋಗಿಗಳು ಖಾಸಗಿ ಆಸ್ಪತ್ರೆಗಳಿಂದ ಸುಲಿಗೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಕೋವಿಡ್ ಚಿಕಿತ್ಸೆಗೆ ಸರ್ಕಾರ ದರ ನಿಗದಿಪಡಿಸಿತ್ತು. ಮೂರು ಅಲೆ ಸಂದರ್ಭ ಸರ್ಕಾರ 2,39,736 ರೋಗಿಗಳಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಿದೆ.

ದೂರುಗಳು: ಖಾಸಗಿ ಆಸ್ಪತ್ರೆಗಳು ಹೆಚ್ಚು ಶುಲ್ಕ ವಸೂಲು ಮಾಡಿರುವ ಬಗ್ಗೆ 2,701 ದೂರು ಬಂದಿದ್ದವು. 272 ಖಾಸಗಿ, 44 ಸರ್ಕಾರಿ ಸೇರಿ ಒಟ್ಟು 316 ಆಸ್ಪತ್ರೆಗಳು ಹೆಚ್ಚುವರಿ ಬಿಲ್ಲಿಂಗ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿವೆ. ಒಟ್ಟು ದೂರಿನಲ್ಲಿ 921 ಪ್ರಕರಣ ಗಳನ್ನು ಜಿಲ್ಲಾ ಕುಂದುಕೊರತೆ ಪರಿಹಾರ ಸಮಿತಿಗಳಿಗೆ ಮತ್ತು 138 ಅನ್ನು ಬಿಬಿಎಂಪಿಗೆ ಮುಂದಿನ ಕ್ರಮಕ್ಕಾಗಿ ನೀಡಲಾಗಿದೆ. ಎಸ್​ಎಎಸ್​ಟಿಯು 100 ಖಾಸಗಿ ಆಸ್ಪತ್ರೆಗಳನ್ನು ಒಳಗೊಂಡ 731 ಪ್ರಕರಣಗಳ ವಿಚಾರಣೆಯನ್ನು ನಡೆಸಿದೆ. ಇನ್ನೂ 685 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net