

ರಾಮನಗರ : ಕರೊನಾ ಯಾವ ಸಮಯದಲ್ಲಿ ಉಲ್ಬಣಿಸುತ್ತದೆ ಎಂದು ಹೇಳುವುದು ಕಷ್ಟ. ಆದ್ದರಿಂದ ಸಾರ್ವಜನಿಕರು ಕರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಿ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಣದಲ್ಲಿ ಬುಧವಾರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 4ರಿಂದ 5 ಕರೊನಾ ಪ್ರಕರಣಗಳು ವರದಿಯಾಗುತ್ತಿದ್ದು, ಮೈಕ್ರೋ ಕಂಟೈನ್‌ಮೆಂಟ್ ಜೋನ್ ಮಾಡಿಕೊಂಡು ಆ ಪ್ರದೇಶದಲ್ಲಿ ಹೆಚ್ಚು ಪರೀಕ್ಷೆಗಳನ್ನು ಕೈಗೊಳ್ಳಿ. ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂದು ರೋಗಿಗೆ ಶೇ. 4.2 ಪ್ರಾಥಮಿಕ ಹಾಗೂ ಶೇ. 2.7 ದ್ವಿತೀಯ ಸಂಪರ್ಕಿತರ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಇದನ್ನು ಚುರುಕುಗೊಳಿಸಿ 15-20 ಸಂಪರ್ಕಿತರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಿ ಎಂದರು.
ಮಾರುಕಟ್ಟೆ ಹಾಗೂ ಎಪಿಎಂಸಿಗಳಲ್ಲಿ ಕರೊನಾ ನಿಯಮಗಳ ಬಗ್ಗೆ ಅರಿವು ಮೂಡಿಸಲು ಅಳವಡಿಸಿರುವ ಧ್ವನಿವರ್ಧಕಗಳು ಸದಾ ಕಾಲ ಕಾರ್ಯನಿರ್ವಹಿಸುವ ಬಗ್ಗೆ ಪರಿಶೀಲಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಅಂಗಡಿಗಳ ಮಾಲೀಕರಿಗೆ ತಿಳಿಸಿ, ಪಾಲಿಸದಿದ್ದರೆ ಕ್ರಮ ಕೈಗೊಳ್ಳಿ ಎಂದು ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 1800 ಕರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆಗಳು ಒಂದೇ ಭಾಗದಲ್ಲಿ ನಡೆಯದೇ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯುತ್ತಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಿ. ಖಾಸಗಿ ಕ್ಲಿನಿಕ್‌ಗಳಲ್ಲಿ ಐಎಲ್‌ಐ ಹಾಗೂ ಎಸ್‌ಎಆರ್‌ಐ ಕೇಸ್‌ಗಳ ವರದಿಗಳನ್ನು ಸರಿಯಾಗಿ ಪಡೆದುಕೊಂಡು, ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿ ಎಂದರು.
ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ : ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಿಗದಿಪಡಿಸಿರುವ ವೈಯಕ್ತಿಕ ಶೌಚಗೃಹ ಹಾಗೂ 4 ಸಮುದಾಯ ಶೌಚಗೃಹಗಳ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ. ಅಂಗನವಾಡಿಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿ ಅಕ್ಟೋಬರ್‌ನಲ್ಲಿ ವರದಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನ್ಯಾಯಾಲಯ ತಿಳಿಸಿರುವ ಎಲ್ಲ ಮೂಲಸೌಲಭ್ಯಗಳನ್ನು ಒದಗಿಸಿ ವರದಿ ನೀಡಿ. ಅದಕ್ಕೆ ಬೇಕಾದ ಅನುದಾನವನ್ನು ಒದಗಿಸಲಾಗುವುದು ಎಂದು ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ತಿಳಿಸಿದರು.
ಘನತ್ಯಾಜ್ಯ ನಿರ್ವಹಣೆಗೆ ಗುರಿ ನಿಗದಿ : ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ 127 ಗುರಿ ನಿಗದಿಯಾಗಿದ್ದು, ಘಟಕಗಳ ನಿರ್ವಹಣೆಗೆ ಕನಿಷ್ಠ 10-15 ಗುಂಟೆ ಸ್ಥಳವನ್ನು ಗುರುತಿಸಿ ನೀಡಬೇಕು. ಬೂದು ನೀರು ಹಾಗೂ ಕಪ್ಪು ನೀರು ನಿರ್ವಹಣೆಗಾಗಿ ಗುರಿ ನಿಗದಿಯಾಗಿದ್ದು, ಸೋಕ್‌ಪಿಟ್ ನಿರ್ಮಾಣ ಕಾರ್ಯವನ್ನು ಅಕ್ಟೋಬರ್ ಅಂತ್ಯದೊಳಗೆ ತಾಲೂಕುವಾರು ಗುರಿ ನಿಗದಿಪಡಿಸಿಕೊಂಡು ಪೂರ್ಣಗೊಳಿಸಿ ಎಂದು ತುಷಾರ್ ಗಿರಿನಾಥ್ ಸೂಚಿಸಿದರು.
ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್, ಜಿಪಂ ಉಪ ಕಾರ್ಯದರ್ಶಿ ರಮೇಶ್, ಜಿಪಂ ಸಿಪಿಒ ಚಿಕ್ಕಸುಬ್ಬಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, 4 ತಾಲೂಕುಗಳ ತಹಶೀಲ್ದಾರರು ಹಾಗೂ ಇತರ ಅಧಿಕಾರಿಗಳು ಇದ್ದರು.