

ಚಾಮರಾಜನಗರ: ಕರೊನಾ ವೇಳೆ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಮೂಲಭೂತ ಕರ್ತವ್ಯ ವಿಭಾಗದ (ಜಿಡಿಎ) ತರಬೇತಿ ನೀಡಿ ಉದ್ಯೋಗ ನೀಡದೆ ವಂಚಿಸಿರುವುದನ್ನು ಖಂಡಿಸಿ ಕೋವಿಡ್ ಮುಂಚೂಣಿ ಕಾರ್ಯಕರ ಒಕ್ಕೂಟದ ವತಿಯಿಂದ ಸೆ.22 ರಿಂದ ನಗರದ ಜಿಲ್ಲಾಡಳಿತ ಭವನ ಮುಂಭಾಗ ಅನಿರ‌್ಷ್ಟಾವ ಧರಣಿ ನಡೆಸಲಾಗುವುದು ಎಂದು ಕದಂಬ ಕನ್ನಡ ಸೇನೆ ಕರ್ನಾಟಕದ ಅಧ್ಯಕ್ಷ ಅಂಬರೀಶ್ ತಿಳಿಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ತರಬೇತಿ ಕೇಂದ್ರಕ್ಕೆ ನಿತ್ಯವು 300-400 ರೂ.ಗಳ ಖರ್ಚು ಮಾಡಿಕೊಂಡು 3-4 ತಿಂಗಳು ಸ್ವತಃ ಖರ್ಚಿನಲ್ಲಿ ತರಬೇತಿಗೆ ಬಂದಿರುವ 141 ಜನ ಅಭ್ಯರ್ಥಿಗಳು ಬೀದಿಗೆ ಬಂದಿದ್ದಾರೆ. ಈ ಸಂಬಂಧ ಮುಖ್ಯ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು,
ಕೋವಿಡ್ 19 ಸಂದರ್ಭದಲ್ಲಿ ತರಬೇತಿ ಜತೆಗೆ ಕೆಲಸ ನೀಡುತ್ತೇವೆ ಎಂದು ಕೆಲಸ ಕೊಟ್ಟು ರೋಗಕ್ಕೆ ತುತ್ತಾದ ವ್ಯಕ್ತಿಗಳ ಪ್ರಾಣವನ್ನು ರಕ್ಷಿಸುವ ಮತ್ತು ಅವರಿಗೆ ಸೇವೆ ಸಲ್ಲಿಸುವ ತರಬೇತಿ ನೀಡಿ, ಕೆಲಸವನ್ನು ತೆಗೆದುಕೊಂಡಿರುತ್ತಾರೆ. ಆದರೆ ಇದುವರೆಗೂ ಇವರಿಗೆ ಯಾವುದೇ ಪ್ರೋತ್ಸಾಹಧನವನ್ನಾಗಲಿ, ಕೆಲಸ ಮಾಡಿಸಿಕೊಂಡ ಸೇವಾ ಭತ್ಯೆಯನ್ನಾಗಲಿ, ಯಾವುದೇ ಉದ್ಯೋಗವನ್ನು ನೀಡಿಲ್ಲ ಎಂದು ದೂರಿದರು. ಯುವ ಸೇನೆ ಕರ್ನಾಟಕ ಸೇವಾ ಸಮಿತಿ ಜಿಲ್ಲಾಧ್ಯಕ್ಷ ನಮ್ಮನೆ ಪ್ರಶಾಂತ್ ಕುಮಾರ್, ಚಂದ್ರಶೇಖರ್ , ಶಿವಕುಮಾರ್, ಶ್ರೀಕಂಠಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.