

ನವದೆಹಲಿ: ಕರೊನಾ ವೈರಸ್ ನಿಗ್ರಹಿಸುವ ಲಸಿಕೆ ಸದ್ಯಕ್ಕಂತೂ ಲಭ್ಯವಾಗದು. ಇದನ್ನು ನಿವಾರಿಸುವ ರಾಮಬಾಣವೊಂದು ಶೀಘ್ರವೇ ದೊರೆಯಲಿದೆ ಎಂಬ ಸುಳ್ಳು ನಿರೀಕ್ಷೆ ಹೊಂದುವುದು ಬೇಡವೆಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಏಮ್ಸ್ ಹಾಗೂ ಐಸಿಎಂಆರ್ನ ರಾಷ್ಟ್ರೀಯ ಕೋವಿಡ್ ಕಾರ್ಯಪಡೆ ಸದಸ್ಯರೇ ಇಂಥದ್ದೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ, ಭಾರತೀಯ ಮುಂಜಾಗ್ರತಾ ಹಾಗೂ ಸಾಮಾಜಿಕ ವೈದ್ಯಕೀಯ ಸಂಸ್ಥೆ, ಭಾರತೀಯ ಸಾಂಕ್ರಾಮಿಕ ತಜ್ಞರ ಸಂಸ್ಥೆ ಮೊದಲಾದವುಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಇದನ್ನು ಹೇಳಿದ್ದಾರೆ. ಲಸಿಕೆ ಬಗ್ಗೆ ಆಶಾವಾದಿಗಳಾಗಿರೋಣ ಆದರೆ, ಅತ್ಯಂತ ಸಂಕಷ್ಟದ ಸ್ಥಿತಿಯನ್ನು ಎದುರಿಸಲು ತಡೆ ಹಾಗೂ ನಿಯಂತ್ರಣಕ್ಕೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿವೆ.
ವೇಗವಾಗಿ ಹಬ್ಬುತ್ತಿರುವ ಕರೊನಾ ಸಂಕಷ್ಟ ನಿಯಂತ್ರಿಸುವಲ್ಲಿ ಲಸಿಕೆಯ ಪಾತ್ರವೇನೂ ಇಲ್ಲ. ವೈಯಕ್ತಿಕ ಸುರಕ್ಷೆ ಹಾಗೂ ಸೋಂಕಿಗೆ ಒಳಗಾಗುವ ಹೆಚ್ಚು ಸಂಭಾವ್ಯತೆ ಇರುವ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ದೀರ್ಘಕಾಲದ ಕಾಯಿಲೆಯಿರುವ ಹಿರಿಯ ಜೀವಗಳಿಗೆ ನೆರವಾಗಬಹುದು ಎನ್ನುವುದು ಇವರ ಅಭಿಪ್ರಾಯವಾಗಿದೆ. ಪರಿಣಾಮಕಾರಿಯಾದ ಲಸಿಕೆ ಸದ್ಯದಲ್ಲಂತೂ ಸಿಗುವುದು ಅನುಮಾನ. ಹೀಗಾಗಿ ಅಂಥದ್ದೊಂದು ರೋಗ ನಿವಾರಕ ಸಿಗಲಿದೆ ಎಂಬ ಸುಳ್ಳು ನಿರೀಕ್ಷೆಗಳನ್ನು ತೊಡೆದು ಹಾಕಬೇಕಿದೆ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಲಸಿಕೆ ಸಜ್ಜಾದರೂ, ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶನದ ಮೇರೆಗೆ ಅದನ್ನು ಬಳಸಬೇಕಾಗುತ್ತದೆ ಎನ್ನುವುದು ಇವರ ವಾದ.
ಈ ಲಸಿಕೆಗಳು ಸಾರ್ವಜನಿಕ ಬಳಕೆಗೆ ಲಭ್ಯವಾದಾಗ ಭವಿಷ್ಯದಲ್ಲಿ ತಾತ್ವಿಕವಾಗಿ ಕೊಂಚ ಸಹಾಯವಾಗಬಹುದು. ರಷ್ಯಾ, ಚೀನಾ ಮೊದಲಾದ ದೇಶಗಳು ಲಸಿಕೆ ಸಂಶೋಧನೆಯಲ್ಲಿ ತೋರುತ್ತಿರುವ ತರಾತುರಿಯನ್ನು ಗಮನಿಸಿದರೆ, ಸುರಕ್ಷತೆ ಹಾಗೂ ಕ್ಷಮತೆ ಬಗ್ಗೆ ಕಳವಳ ಮೂಡುವಂತಾಗಿದೆ ಎಂದು ಹೇಳಿವೆ. ಕರೊನಾ ಸಂಕಷ್ಟ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆಯೇ ಹೊರತು ಕಾನೂನು ಸುವ್ಯವಸ್ಥೆ ಸಮಸ್ಯೆಯಲ್ಲ. ಇದನ್ನು ಸಮುದಾಯದ ಸಹಭಾಗಿತ್ವದೊಂದಿಗೆ ನಿರ್ವಹಿಸಬೇಕಿದೆ. ರಾಜ್ಯ ಹಾಗೂ ಜಿಲ್ಲಾಮಟ್ಟದ ಸಾಂಕ್ರಾಮಿಕ ರೋಗಗಳ ತಜ್ಞರೇ ಕರೊನಾ ಅಂಕಿ-ಅಂಶಗಳನ್ನು ವಿಶ್ಲೇಷಿಸಬಲ್ಲರು. ಇವರ ಸಹಾಯದಿಂದ ಸ್ಥಳೀಯವಾಗಿಯೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ.
ಆದರೆ, ಈ ಹುದ್ದೆಗಳು ಬಹುತೇಕ ಖಾಲಿ ಇವೆ. ಆದ್ದರಿಂದ ಇವನ್ನು ಕೂಡಲೇ ಭರ್ತಿ ಮಾಡಬೇಕು. ಸಾಂಕ್ರಾಮಿಕ ಕಾಯಿಲೆಗಳ ತೀವ್ರತೆಯನ್ನು ತಿಳಿಯಲು ನಡೆಸುವ ರಕ್ತದ ಮಾದರಿ ಸಮೀಕ್ಷೆ ಇವರ ಉಸ್ತುವಾರಿಯಲ್ಲಿ ನಡೆಸಬೇಕು ಎಂದು ಹೇಳಿದ್ದಾರೆ.
ಏಮ್ಸ್ನ ಕಮ್ಯುನಿಟಿ ಮೆಡಿಸಿನ್ನ ಮುಖ್ಯಸ್ಥ ಡಾ. ಶಶಿಕಾಂತ್, ತಜ್ಞ ವೈದ್ಯರಾದ ಡಾ. ಸಂಜಯ್ ಕೆ. ರೈ, ಡಾ. ಕಪಿಲ್ ಯಾದವ್, ಡಾ. ಸುಜೀತ್ಕುಮಾರ್ ಸಿಂಗ್, ಡಾ. ಡಿ.ಸಿ.ಎಸ್ ರೆಡ್ಡಿ, ಡಾ. ರಾಜೇಶ್ಕುಮಾರ್ ಸೇರಿ 20 ಜನರು ಹೊರಡಿಸಿರುವ ಜಂಟಿ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಈ ಪೈಕಿ ಡಾ. ಶಶಿಕಾಂತ್ ಹಾಗೂ ಸಿಂಗ್ ರಾಷ್ಟ್ರೀಯ ಕೋವಿಡ್ ಕಾರ್ಯಪಡೆ ಸದಸ್ಯರಾಗಿದ್ದಾರೆ.