

ವಾಷಿಂಗ್ಟನ್: ಜಗತ್ತಿನಾದ್ಯಂತ ಕೋವಿಡ್-19 ಕಾಯಿಲೆಗೆ ಲಸಿಕೆ ಕಂಡು ಹಿಡಿಯಲು ಹಲವು ಸಂಸ್ಥೆಗಳು ಪೈಪೋಟಿ ಮೇಲೆ ಸಂಶೋಧನೆಗೆ ಇಳಿದಿವೆ. ಕ್ಲಿನಿಕಲ್ ಟ್ರಯಲ್ಗಳನ್ನು ನಡೆಸುತ್ತಿವೆ.
ಇನ್ನೂ ಕೆಲ ಸಂಸ್ಥೆಗಳು ಈಗಿರುವ ಲಸಿಕೆಗಳನ್ನೇ ಮಾರ್ಪಡಿಸಿ ಕರೊನಾ ಕೊಲ್ಲಲು ಸಿದ್ಧತೆ ನಡೆಸಿವೆ. ಕರೊನಾಗೆ ಲಸಿಕೆ ಯಾವಾಗ ಸಿದ್ಧವಾಗುತ್ತೋ ಎಂದು ಎಲ್ಲ ರಾಷ್ಟ್ರಗಳು ಕಾಯುತ್ತಿವೆ. ಇಂಥ ಅವಧಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ವರ್ಷಾಂತ್ಯಕ್ಕೆ ಕೋವಿಡ್-19 ನಿವಾರಿಸುವ ಔಷಧ ಸಿದ್ಧಗೊಳ್ಳುವುವು ಖಚಿತ ಎಂದು ಹೇಳಿದ್ದಾರೆ. ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಟ್ರಂಪ್ ಈಗಾಗಲೇ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ದು, ಇದನ್ನೇ ಚುನಾವಣೆ ವಿಷಯವನ್ನಾಗಿಸಿಕೊಂಡಿದ್ದಾರೆ.
ಈ ಬೇಸಿಗೆಯಲ್ಲಿ ಜನರು ಸಮುದ್ರ ತೀರಗಳಲ್ಲಿ ವಿಹರಿಸುವಂತಾಗಬೇಕು. ಸೆಪ್ಟಂಬರ್ ವೇಳೆಗೆ ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತೆ ಕಾರ್ಯಾರಂಭಿಸಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದು ಹೇಳಿದ್ದಾರೆ.
ಈ ದೇಶವನ್ನು ತೊರೆಯವುದು ಅಥವಾ ದೇಶವನ್ನು ಎಲ್ಲ ರೀತಿಯಿಂದ ಮುಚ್ಚಿರುವಂತೆ ಬಿಡಲು ಸಾಧ್ಯವಾಗದು. ಮುಂದಿನ ವರ್ಷ ಅತ್ಯದ್ಭುತವನ್ನಾಗಿಸುವ ಉದ್ದೇಶ ಹೊಂದಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ. ಕಳೆದುಕೊಂಡಿರುವ ಉದ್ಯೋಗವನ್ನು ಅಮೆರಿಕನ್ನರು ಪಡೆದುಕೊಳ್ಳಲಿದ್ದಾರೆ ಹಾಗೂ ಈ ಹಿಂದಿಗಿಂತಲೂ ಹೆಚ್ಚು ಗಳಿಸಲಿದ್ದಾರೆ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.
ಅಮೆರಿಕದ ಆರ್ಥಿಕತೆ ಉತ್ತುಂಗದಲ್ಲಿದ್ದಾಗ, ಎರಡನೇ ಅವಧಿ ಖಚಿತ ಎನ್ನುವ ಸ್ಥಿತಿಯಿಂದ ಟ್ರಂಪ್ ಈಗ ಕೆಳಗೆ ಜಾರಿದ್ದಾರೆ. ಪ್ರತಿಸ್ಪರ್ಧಿ ಜಾಯ್ ಬಿಡೆನ್ಗಿಂತಲೂ ಹಲವು ವಿಷಯಗಳಲ್ಲಿ ಹಿಂದಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವಿಶ್ಲೇಷಿಸಿವೆ.