ಇದೆಂಥ ದೌರ್ಭಾಗ್ಯ.. ಕೇರಳದ ಅತಿದೊಡ್ಡ ಅರಮನೆಯಲ್ಲಿ ಅದರ ಮಾಲೀಕ ವಾಸವಿದ್ದದ್ದು ಕೇವಲ ಒಂದು ತಿಂಗಳಷ್ಟೇ

Arakkal Palace
Published on

ವಯನಾಡ್: ಕೇರಳದ ಮಾನಂದವಾಡಿಯಲ್ಲಿ ಕಳೆದ ವರ್ಷ ನಡೆದ ಗೃಹ ಪ್ರವೇಶವೊಂದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ದುಬೈ, ಶಾರ್ಜಾ, ಅಬುದಾಬಿ ಸೇರಿ ಕೊಲ್ಲಿ ರಾಷ್ಟ್ರಗಳ ಶ್ರೀಮಂತ ಅರಬ್ಬರೆಲ್ಲ ಅದಕ್ಕೆಂದೇ ವಿಶೇಷ ವಿಮಾನಗಳಲ್ಲಿ ಆಗಮಿಸಿದ್ದರು. ಅಂಥಾ ವೈಭೋಗದ ಅರಮನೆಯದು.

ನಾಲ್ಕು ಎಕರೆಗೂ ಹೆಚ್ಚು ಜಾಗದಲ್ಲಿ ಈ ಪ್ಯಾಲೇಸ್ ನಿರ್ಮಿಸಲಾಗಿದೆ. ಕಟ್ಟಡದ ಬಿಲ್ಟಪ್ ಏರಿಯಾ ಒಂದು ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿದೆ. ಅಂದರೆ, 45,000 ಚದರಡಿ ಪ್ರದೇಶದಲ್ಲಿ ಆವರಿಸಿಕೊಂಡಿದೆ.

ಅರಮನೆಯ ಸುತ್ತಲೂ ವಿಶಾಲ ಹಸಿರುಹಾಸಿದೆ. ಚೆಂದದ ಉದ್ಯಾನ ನಿರ್ಮಿಸಲಾಗಿದೆ. ಲ್ಯಾಂಡ್‍ಸ್ಕೇಪ್ ನಯನ ಮನೋಹರವಾಗಿದೆ.

ಇನ್ನು ಮನೆಯ ವೈಭೋಗದ ಬಗ್ಗೆ ಹೇಳುವುದಾದರೆ, ಒಂದು ಎಕರೆಯಲ್ಲಿ ಕಟ್ಟಿದ್ದಾರೆ ಎಂದ ಮೇಲೆ ಇದರಲ್ಲಿ ಅದೆಷ್ಟು ರೂಮ್‍ಗಳಿರಬಹುದೋ ಎಂದುಕೊಳ್ಳಬಹುದು. ಅಂದಹಾಗೆ ಇಲ್ಲಿರೋದು 8 ಬೆಡ್ ರೂಮ್‍ಗಳಷ್ಟೇ. ಸಾಮಾನ್ಯ ರೂಮ್‍ಗಳಿಗೆ ಹೋಲಿಸಿದರೆ ಕನಿಷ್ಠ ಮೂರುಪಟ್ಟು ದೊಡ್ಡದಾಗಿವೆ. ಮೂರು ಅಡುಗೆ ಕೋಣೆಗಳಿವೆ. ಎರಡು ಡೈನಿಂಗ್ ಹಾಲ್‍ಗಳು, ಪ್ರೇಯರ್ ಹಾಲ್, ಹೋಮ್ ಥಿಯೇಟರ್, ಎಂಟರ್​ಟೇನ್‍ಮೆಂಟ್ ಏರಿಯಾ, ಮೀಟಿಂಗ್ ಹಾಲ್ ಮೊದಲಾದವುಗಳಿವೆ. ಮನೆಯ ಮುಖ್ಯ ಹಾಲ್ 26 ಮೀಟರ್ ಉದ್ದವಿದ್ದು, ಮೂರು ಮಹಡಿಗಳಷ್ಟು ಎತ್ತರವಾಗಿದೆ. ಇಲ್ಲಿನ ಮಾರ್ಬಲ್ ಕಂಬಗಳು ಒಟ್ಟಾರೆ ಮನೆಯ ಮನೆಯ ಒಟ್ಟಾರೆ ಅಂದವನ್ನು ಹೆಚ್ಚಿಸಿವೆ. ಇಲ್ಲಿನ ಪ್ರತಿಯೊಂದು ವಸ್ತುವು ಐಷಾರಾಮಕ್ಕೆ ತಕ್ಕಂತಿವೆ. ಇಷ್ಟೆಲ್ಲ ಇದ್ದ ಮೇಲೆ ಸ್ವಿಮ್ಮಿಂಗ್‍ಪೂಲ್ ಇಲ್ಲದೇ ಇರುತ್ತಾ? ಅದು ಕೂಡ ದೊಡ್ಡದಾಗೇ ಇದೆ.

ಅಂದಹಾಗೇ ಈ ಮನೆಯ ಒಡೆಯ ಜಾಯ್ ಅರಕ್ಕಳ್. ಇದನ್ನು ಅರಕ್ಕಳ್ ಪ್ಯಾಲೇಸ್ ಎಂದೇ ಕರೆಯಲಾಗುತ್ತದೆ. ದುಬೈನಲ್ಲಿ ಇನ್ನೋವಾ ರಿಫೈನಲ್ಇ ಹಾಗೂ ಟ್ರೇಡಿಂಗ್​ ಕಂನಿ ಮೂಲಕ ತೈಲ ಸಾಮ್ರಾಜ್ಯವನ್ನೇ ಕಟ್ಟಿದ, ಸಾವಿರಾರು ಕೋಟಿ ರೂ.ಗಳ ಒಡೆಯ ಜಾಯ್ ಅರಕ್ಕಳ್. ಕೊಲ್ಲಿಯ ಎಲ್ಲ ರಾಷ್ಟ್ರಗಳಲ್ಲೂ ತೈಲ ರಿಫೈನರಿಗಳನ್ನು ಹೊಂದಿದ್ದ. ಆದರೆ ಎಂಥ ದೌರ್ಬಾಗ್ಯ ನೋಡಿ ಈ ಮನೆಯಲ್ಲಿ ಆತ ವಾಸವಾಗಿದ್ದು ಒಂದು ತಿಂಗಳಷ್ಟೇ. ಏಕೆಂದರೆ, ಈತ ನೆಲೆಸಿದ್ದು ದುಬೈನ ಐಷಾರಾಮಿ ಪ್ರದೇಶ ಜುಮೇರಾದಲ್ಲಿ. ಪತ್ನಿ ಸೆಲಿನಾ ಹಾಗೂ ಪುತ್ರ ಅರುಣ್ ಹಾಗೂ ಪುತ್ರಿ ಆಶ್ಲೇ ಈತನೊಂದಿಗೆ ವಾಸವಾಗಿದ್ದರು. ಇಲ್ಲಿ ಆತನ ಪಾಲಕರು ಹಾಗೂ ಕೆಲ ಸಂಬಂಧಿಕರಿದ್ದಾರಷ್ಟೇ.

ಕಳೆದ ತಿಂಗಳ 23ರಂದು ಜಾಯ್ ಅರಕ್ಕಳ್ ದುಬೈನಲ್ಲಿ ಮೃತಪಟ್ಟರು. ಹೃದಯ ಸ್ತಂಭನದಿಂದ ಮೃತಪಟ್ಟರು ಎಂದು ಆರಂಭದಲ್ಲಿ ಹೇಳಲಾಗಿತ್ತಾದರೂ, ಇಲ್ಲ ಅದೊಂದು ಆತ್ಮಹತ್ಯೆ ಎಂದು ದುಬೈ ಪೊಲೀಸರು ಸ್ಪಷ್ಟಪಡಿಸಿದ್ದರು. ಕರೊನಾದಿಂದಾಗ ಜಾಗತಿಕ ತೈಲ ಬೆಲೆಯಲ್ಲಿ ಉಂಟಾದ ಕುಸಿತ ಹಾಗೂ ಈತನ ಕಂಪನಿಯ ಯೋಜನೆಯಲ್ಲಾದ ವಿಳಂಬದಿಂದ ಅಪಾರ ನಷ್ಟ ಉಂಟಾಗಿ ಆತ್ಮಹತ್ಯೆಗೆ ಜಾಯ್ ಶರಣಾದರೆಂದು ಕುಟುಂಬದ ಮೂಲಗಳು ತಿಳಿಸಿವೆ.

ಕೇರಳದಲ್ಲಿ ಹಲವು ಸಾಮಾಜಿಕ ಕಾರ್ಯಗಳನ್ನು ಜಾಯ್ ಕೈಗೊಂಡಿದ್ದರು. ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಏರಡೂವರೆ ಏಕರೆ ಜಮೀನಿನಲ್ಲಿ 25ಕ್ಕೂ ಅಧಿಕ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರು. ತಾಯಿಯ ಹೆಸರಲ್ಲಿ ತಮ್ಮೂರಿನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ತೆರೆದಿದ್ದರು. ಸ್ಥಳೀಯ ರೈತರು ಆರಂಭಿಸಿದ್ದ ಸಹಕಾರಿ ಸಂಸ್ಥೆಯಲ್ಲಿ ಶೇ.40 ಷೇರು ಬಂಡವಾಳ ಒದಗಿಸಿದ್ದರು.

ಅರಕ್ಕಳ್ ಪ್ಯಾಲೇಸ್ ನಿರ್ಮಾಣದ ಬಳಿಕ ಜಾಯ್ ಕೇರಳದಲ್ಲಿ ಭಾರಿ ಸೆಲೆಬ್ರಿಟಿ ಎನಿಸಿದ್ದರು. ಆದರೆ, ಆ ಅರಮನೆಯಲ್ಲಿ ವಾಸಿಸುವ ಭಾಗ್ಯವೇ ಇಲ್ಲದಂತಾಗಿದ್ದು ಮಾತ್ರ ವಿಪರ್ಯಾಸ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net