

ನವದೆಹಲಿ: ಭಾರತದಲ್ಲಿ ಬುಧವಾರ ಹೊಸದಾಗಿ 16,700ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದೆ. ಇದು ಈವರೆಗೆ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 4.72 ಲಕ್ಷಕ್ಕೆ ಏರಿಕೆಯಾಗಿದೆ. ಹೊಸದಾಗಿ 423 ಮಂದಿ ಕರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 14,900ಕ್ಕಿಂತ ಅಧಿಕವಾಗಿದೆ. ದೇಶದಲ್ಲಿ ಈವರೆಗೆ 2.71 ಲಕ್ಷ ರೋಗಿಗಳು ಗುಣಮುಖರಾಗಿದ್ದು, ಇನ್ನೂ 1.86 ಲಕ್ಷ ಸಕ್ರಿಯ ಪ್ರಕರಣಗಳಿವೆ.
ಕರೊನಾಗೆ ಅತಿ ಹೆಚ್ಚು ತತ್ತರಿಸಿರುವ ಮಹಾರಾಷ್ಟ್ರದಲ್ಲಿ 1.42 ಲಕ್ಷ ಪ್ರಕರಣಗಳು ವರದಿಯಾಗಿದ್ದು, 6,700ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ 70 ಸಾವಿರ, ತಮಿಳುನಾಡಿನಲ್ಲಿ 67 ಸಾವಿರ, ಗುಜರಾತ್ನಲ್ಲಿ 28 ಸಾವಿರ, ಉತ್ತರಪ್ರದೇಶದಲ್ಲಿ 18 ಸಾವಿರ, ರಾಜಸ್ಥಾನದಲ್ಲಿ 15 ಸಾವಿರಕ್ಕೂ ಅಧಿಕ ಪ್ರಕರಣಗಳು ಈವರೆಗೆ ಬೆಳಕಿಗೆ ಬಂದಿವೆ. ದೆಹಲಿಯಲ್ಲಿ 2,300 ಮಂದಿ ಸಾವನ್ನಪ್ಪಿದ್ದು, ಗುಜರಾತ್ನಲ್ಲಿ 1,700, ತಮಿಳುನಾಡಿನಲ್ಲಿ 800, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ 500ಕ್ಕೂ ಅಧಿಕ ಮಂದಿ ಕರೊನಾಗೆ ಬಲಿಯಾಗಿದ್ದಾರೆ. ಜಾಗತಿಕವಾಗಿ ಈವರೆಗೆ 4.81 ಲಕ್ಷ ಮಂದಿ ಅಸುನೀಗಿದ್ದು, 94.11 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿವೆ.
ತಮಿಳುನಾಡಿನಲ್ಲಿ ಕರೊನಾಗೆ ಸಿದ್ಧ ಚಿಕಿತ್ಸೆ ತಮಿಳುನಾಡಿನಲ್ಲಿ ಕರೊನಾ ಸೋಂಕಿತರಿಗೆ ಸಿದ್ಧ ಚಿಕಿತ್ಸೆ ನೀಡಲಾಗುತ್ತಿದೆ. ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಈ ಚಿಕಿತ್ಸೆ ವೈಜ್ಞಾನಿಕವಾಗಿ ದೃಢವಾಗಿಲ್ಲವಾದರೂ ಜನರ ನಂಬಿಕೆಗೆ ಪಾತ್ರವಾಗಿದೆ ಎಂದು ಸರ್ಕಾರ ತಿಳಿಸಿದೆ. ಹೆಚ್ಚಿನ ಗುಣಲಕ್ಷಣವಿಲ್ಲದವರಿಗೆ ಮತ್ತು ಬೇರೆ ಕಾಯಿಲೆ ಇರದವರಿಗೆ ಸಿದ್ಧ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಶೇ. 100 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಸರ್ಕಾರ ಹೇಳಿದೆ. ಸಿದ್ಧ ಚಿಕಿತ್ಸೆಗೆ ಒಪ್ಪಿದವರಿಗೆ ಮಾತ್ರವೇ ಈ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ರಾಜ್ಯ ಅಭಿವೃದ್ಧಿ ಸಚಿವ ಕೆ.ಪಂಡಿರಂಜನ್ ತಿಳಿಸಿದ್ದಾರೆ. ಈಗಾಗಲೇ ಚೆನ್ನೈನ 25 ರೋಗಿಗಳು ಸಿದ್ಧ ಚಿಕಿತ್ಸೆಯಿಂದ ಗುಣಮುಖರಾಗಿದ್ದು ಹಾಟ್ಸ್ಪಾಟ್ ಆಗಿರುವ ವ್ಯಾಸರ್ಪದಿಯಲ್ಲಿರುವ ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲೂ ಇದೇ ಔಷಧವನ್ನು ಬಳಸುವುದಾಗಿ ತಿಳಿಸಿದ್ದಾರೆ.
ಆಯುಷ್ ಸಚಿವಾಲಯಕ್ಕೆ ಪತಂಜಲಿ ವರದಿ ಸಲ್ಲಿಕೆ: ಕರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆಂದು ಪತಂಜಲಿ ಸಂಸ್ಥೆ ಬಿಡುಗಡೆ ಮಾಡಿದ್ದ ಕರೊನಿಲ್ ಔಷಧದ ವರದಿಯನ್ನು ಆಯುಷ್ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಸಂಸ್ಥೆ ನಡೆಸಿದ ಅಧ್ಯಯನ, ಔಷಧದ ಪ್ರಯೋಗದ ವಿವರವನ್ನು ಸಲ್ಲಿಸುವಂತೆ ಸಚಿವಾಲಯ ಸೂಚಿಸಿತ್ತು. ಈ ಔಷಧದಿಂದ ಶೇ. 100 ಸೋಂಕಿತರು ಗುಣಮುಖರಾಗುತ್ತಾರೆ ಎಂದು ತಿಳಿಸಿತ್ತು. ಆದರೆ ಸಚಿವಾಲಯದಿಂದ ಅನುಮತಿ ನೀಡುವವರೆಗೂ ಯಾವುದೇ ಜಾಹೀರಾತು ನೀಡದಂತೆ ಆಯುಷ್ ಸಚಿವಾಲಯ ತಿಳಿಸಿತ್ತು. ಯೋಗ ಗುರು ಅವರ ಸಂಸ್ಥೆ ಔಷಧ ಅಭಿವೃದ್ಧಿಪಡಿಸಿರುವುದು ಒಳ್ಳೆಯದೆ. ಆದರೆ, ಸಚಿವಾಲಯದ ಅನುಮತಿ ಪಡೆಯುವುದು ಅಗತ್ಯ ವೆಂದು ಆಯುಷ್ ಸಚಿವ ಶ್ರೀಪಾದ ನಾಯ್ಕ ಹೇಳಿದ್ದಾರೆ.
ಈ ಮಧ್ಯೆ, ಪತಂಜಲಿ ಸಂಸ್ಥೆಗೆ ಉತ್ತರಾಖಂಡದ ಆಯುಷ್ ಇಲಾಖೆ ಕೂಡ ನೋಟಿಸ್ ನೀಡಿದೆ. ಕರೊನಿಲ್ ಔಷಧ ಕೇವಲ ರೋಗನಿರೋಧಕ ಶಕ್ತಿ ಹೆಚ್ಚಿಸುವುದಕ್ಕೆ ಮಾತ್ರವೇ ಯೋಗ್ಯ ಎಂದು ಪರವಾನಗಿ ನೀಡಲಾಗಿದೆ. ಈ ಔಷಧ ಕರೊನಾದಿಂದ ಗುಣಮುಖ ಮಾಡುತ್ತದೆ ಎಂದು ಪರವಾನಗಿಯಲ್ಲಿಲ್ಲ ಎಂದು ಉತ್ತರಖಂಡದ ರಾಜ್ಯ ವೈದ್ಯಕೀಯ ಪರವಾನಗಿ ಪ್ರಾಧಿಕಾರದ ಜಂಟಿ ನಿರ್ದೇಶಕ ಡಾ.ವೈಎಸ್ ರಾವತ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಟಿಎಂಸಿ ಶಾಸಕ ಕರೊನಾಗೆ ಬಲಿ: ಕರೊನಾ ವೈರಸ್ಗೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ತಮಾನೋಶ್ ಘೊಷ್(60) ಮೃತರಾಗಿದ್ದಾರೆ. ದೇಶದಲ್ಲಿ ಕರೊನಾದಿಂದಾಗಿ ಮೃತರಾದ 2ನೇ ಶಾಸಕ ಇವರಾಗಿದ್ದಾರೆ. 3 ಬಾರಿ ಟಿಎಂಸಿ ಪಕ್ಷದಿಂದ ಶಾಸಕರಾಗಿ ಚುನಾಯಿತರಾಗಿದ್ದ ತಮಾನೋಶ್, ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಕರೊನಾ ಪರೀಕ್ಷೆಯಲ್ಲಿ ಅವರಿಗೆ ಸೋಂಕಿರುವುದು ದೃಢವಾಗಿತ್ತು. ಕಿಡ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ಹಿಂದೆ ತಮಿಳುನಾಡಿನ ಡಿಎಂಕೆ ಪಕ್ಷದ ಶಾಸಕ ಅಳ್ಬಗನ್ ಕರೊನಾದಿಂದಾಗಿ ಮೃತರಾಗಿದ್ದರು.