ಕ್ರೆಡಿಟ್​ಗೆ ಸಚಿವರ ಪೈಪೋಟಿ ಟೀಕೆಗಳಿಗೆಲ್ಲ ಸಿಎಂ ಹೊಣೆ!: ಮೂಲೆ ಸೇರಿದ ಆರ್ಧಕ್ಕರ್ಧ ಸಚಿವರು

BSY JPG
Published on

ಬೆಂಗಳೂರು: ಕರೊನಾ ನಿರ್ವಹಣೆ ವಿಚಾರದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಧಾವಂತ ತೋರುವ ಸಚಿವ ಸಂಪುಟ ಸದಸ್ಯರು ಟೀಕೆಗಳು ಬಂದಾಗ ಹಿಂದೆ ಸರಿಯುವ ಬೆಳವಣಿಗೆ ನಡೆದಿದೆ. ಕಳೆದೊಂದು ವಾರದವರೆಗೂ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪರಿಸ್ಥಿತಿ ಸಮಾಧಾನ ಎನ್ನುವಂತಿತ್ತು. ಕರ್ನಾಟಕ ಕೈಗೊಂಡ ಕ್ರಮಗಳು ಫಲಪ್ರದವಾಗಿವೆ ಎಂದೆಣಿಸಿ, ಕೇಂದ್ರ ಸರ್ಕಾರ ಕೂಡ ಮೆಚ್ಚಿ ಅಭಿಪ್ರಾಯ ನೀಡಿತ್ತು. ಅನಿರೀಕ್ಷಿತ ಎಂಬಂತೆ ಸಂಪರ್ಕ ಇಲ್ಲದ ಪ್ರಕರಣಗಳು ಈಗ ಹೆಚ್ಚಾಗತೊಡಗಿದ್ದು, ಸರ್ಕಾರದ ನೆಮ್ಮದಿಗೂ ಭಂಗ ತಂದಿದೆ.

ಮೃತದೇಹ ಅಂತ್ಯಸಂಸ್ಕಾರದಲ್ಲಿ ಲೋಪ, ಆಂಬ್ಯುಲೆನ್ಸ್ ಅವ್ಯವಸ್ಥೆ, ಆಸ್ಪತ್ರೆಯಲ್ಲಿ ಬೆಡ್ ಕೊರತೆ ಹೀಗೆ ಒಂದೊಂದೇ ಸಮಸ್ಯೆ ಸೃಷ್ಟಿಯಾಗುತ್ತಿದ್ದಂತೆ ನಮಗೂ ಈ ಬೆಳವಣಿಗೆಗೂ ಸಂಬಂಧವೇ ಇಲ್ಲ ಎಂಬಂತೆ ಕ್ರೆಡಿಟ್ ಪಡೆಯಲು ಮುಂದೆ ಕಾಣಿಸಿಕೊಳ್ಳುತ್ತಿದ್ದ ಸಚಿವರೆಲ್ಲ ಹಿಂದೆ ಸರಿದಿದ್ದಾರೆ. ಇದರಿಂದ ಸಹಜವಾಗಿ ಟೀಕೆ ಟಿಪ್ಪಣಿಯನ್ನು ನೇರವಾಗಿ ಸಿಎಂ ಗುರಿಯಾಗಿಸಲು ಆರಂಭವಾಗಿದೆ. ಜವಾಬ್ದಾರಿ ಕೊಡಲಿಲ್ಲ ಎಂದು 3 ತಿಂಗಳಿಂದಲೂ ಬಾಲಸುಟ್ಟ ಬೆಕ್ಕಿನಂತೆ ತಿರಗುತ್ತಿರುವ ಕೆಲ ಸಚಿವರು, ಈಗ ಸರ್ಕಾರದ ಬಗ್ಗೆ ಟೀಕೆ ಬಂದಾಗ ವಿಧಾನಸೌಧ ಕಾರಿಡಾರ್​ನಲ್ಲಿ ಮುಸಿಮುಸಿ ನಕ್ಕಿದ್ದು ಗುಟ್ಟಾಗಿ ಉಳಿದ ವಿಚಾರವೇನಲ್ಲ.

ಹಿರಿತನ, ವೃತ್ತಿ, ಸಾಮರ್ಥ್ಯ ಹೀಗೆ ವಿವಿಧ ಆಯಾಮಗಳಲ್ಲಿ ಕರೊನಾ ನಿರ್ವಹಣೆ ನಮಗೇ ಕೊಡಬೇಕೆಂಬ ಸಚಿವರ ಪೈಪೋಟಿ ಪಟ್ಟಿಯಲ್ಲಿ ನಾಲ್ಕಕ್ಕೂ ಹೆಚ್ಚು ಮಂದಿ ಇದ್ದಾರೆ. ಒಂದಿಬ್ಬರು ಸಚಿವರಂತೂ ಸಂಪುಟ ಸಭೆಗೆ ಬಂದು ತಲೆ ಆಡಿಸಿ ಮತ್ತೆ ಊರು ಸೇರುತ್ತಿದ್ದು, ಸಮಸ್ಯೆಯನ್ನು ಒಟ್ಟಾಗಿ ಎದುರಿಸುವ ಅಥವಾ ತಮ್ಮ ಇಲಾಖೆ ಮೂಲಕ ಮಾಡಬಹುದಾದ ಕೆಲಸವನ್ನೂ ಮಾಡದೆ ದೂರ ಉಳಿದಿದ್ದಾರೆ. ಸರ್ಕಾರದ ನಿತ್ಯ ಆಗುಹೋಗುಗಳಿಗೆ ಮೀಸಲಾಗಿ ವೆಚ್ಚ ಮಾಡುವುದು ಹಾಗೂ ಕರೊನಾ ನಿರ್ವಹಣೆಗಷ್ಟೇ ಆದ್ಯತೆ ನೀಡಿದ ಪರಿಣಾಮ ಇಲಾಖೆಗಳ ಅನುದಾನ ಕಡಿತ ಮಾಡಲಾಗಿದೆ. ಇದೂ ಹಲವು ಸಚಿವರ ನಿರುತ್ಸಾಹಕ್ಕೆ ಕಾರಣವಾಗಿದೆ.

ಸುಧಾಕರ್-ಅಶೋಕ್​ಗೆ ಜವಾಬ್ದಾರಿ ಹಂಚಿಕೆ: ಕರೊನಾ ನಿಯಂತ್ರಣದ ವಿಚಾರದಲ್ಲಿ ಸಚಿವರಾದ ಡಾ.ಕೆ.ಸುಧಾಕರ್ ಹಾಗೂ ಆರ್.ಅಶೋಕ್ ನಡುವಿನ ಪೈಪೋಟಿಯಿಂದ ಉಂಟಾಗಿರುವ ಮುಜುಗರ ತಪ್ಪಿಸಿಕೊಳ್ಳಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇಬ್ಬರಿಗೂ ಜವಾಬ್ದಾರಿ ಹಂಚಲು ನಿರ್ಧರಿಸಿದ್ದಾರೆ. ಸುಧಾಕರ್ ಹೋಂ ಕ್ವಾರಂಟೈನ್​ನಲ್ಲಿ ಇದ್ದುದರಿಂದ ತಾತ್ಕಾಲಿಕವಾಗಿ ಬೆಂಗಳೂರಿನಲ್ಲಿ ಕರೊನಾ ಉಸ್ತುವಾರಿ ನೋಡಿಕೊಳ್ಳಲು ಅಶೋಕ್​ಗೆ ಸೂಚನೆ ನೀಡಲಾಗಿತ್ತು. ಇದರಿಂದಾಗಿ ಇಬ್ಬರು ಸಚಿವರ ನಡುವೆ ವೈಮನಸ್ಸು ಉಂಟಾಗಿತ್ತು. ಬುಧವಾರ ಸುಧಾಕರ್ ಜತೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಯಡಿಯೂರಪ್ಪ, ಜವಾಬ್ದಾರಿ ಹಂಚುವ ನಿರ್ಧಾರಕ್ಕೆ ಬಂದಿದ್ದಾರೆ. ನೀತಿ, ನಿರೂಪಣೆ, ಚಿಕಿತ್ಸೆ, ತಂತ್ರಜ್ಞಾನದ ಬಳಕೆ, ತಜ್ಞರ ಜತೆ ಸಮನ್ವಯ, ಆಸ್ಪತ್ರೆಗಳ ಮೇಲುಸ್ತುವಾರಿ, ಔಷಧ ಸೇರಿ ಒಟ್ಟಾರೆ ನಿಯಂತ್ರಣಕ್ಕೆ ಸಂಬಂಧಿಸಿದ ವಿಚಾರವನ್ನು ಸುಧಾಕರ್ ನೋಡಿಕೊಳ್ಳಲಿದ್ದಾರೆ. ಹಾಸಿಗೆಗಳ ವ್ಯವಸ್ಥೆ, ಸೋಂಕಿತರಿಗೆ ಊಟೋಪಚಾರ, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ವ್ಯವಸ್ಥೆಯ ಜವಾಬ್ದಾರಿಯನ್ನು ಅಶೋಕ್ ಅವರಿಗೆ ವಹಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳು ಖಚಿತಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net