

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟು ಮಾಡಿರುವ ಕೋವಿಡ್ 19 ಸಂದರ್ಭದಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಸಂಬಂಧಿಸಿದಂತೆ ಈಗ ಮತ್ತೊಂದು ಮಧ್ಯಂತರ ವರದಿ(Covid 19 scam: Submission of 2nd interim report)ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಈಗಾಗಲೇ ಸಲ್ಲಿಕೆಯಾಗಿರುವ ಮೊದಲ ಮಧ್ಯಂತರ ವರದಿ ಮೇಲೆ ಕಾನೂನು ಕ್ರಮ ಜರುಗುತ್ತಿದ್ದು, ಹಲವು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿವೆ. ಈಗ ಎರಡನೇ ಮಧ್ಯಂತರ ವರದಿ ಹಗರಣದಲ್ಲಿ ಭಾಗಿಯಾದವರ ಎದೆ ಬಡಿತ ಹೆಚ್ಚಿಸಿದೆ.
ಕೋವಿಡ್ 19 ರಲ್ಲಿ ಭಾರೀ ಅವ್ಯವಹಾರ ನಡೆದಿದೆ. ಮಾಜಿ ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆಂದು ಜಿದ್ದಾಜಿದ್ದಿನ ರಾಜಕಾರಣ ನಡೆದು ಕಾಂಗ್ರೆಸ್ ಸರ್ಕಾರ ಈ ಹಗರಣದ ತನಿಖೆಗೆ ನಿವೃತ್ತ ನ್ಯಾ.ಜಾನ್ ಮೈಕೇಲ್ ಕುನ್ಹಾ ಅವರ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಈ ಆಯೋಗ ಈಗ 1808 ಪುಟಗಳ ಎರಡನೇ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.
ಒಟ್ಟು ಏಳು ಸಂಪುಟಗಳ ಮಧ್ಯಂತರ ವರದಿ ಇದಾಗಿದ್ದು, ಇದರಲ್ಲಿ ನಾಲ್ಕು ಸಂಪುಟಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಹಗರಣ ಮತ್ತು ಅವ್ಯವಹಾರಗಳದ್ದಾಗಿವೆ.
ಬಿಬಿಎಂಪಿಯ ಬೊಮ್ಮನಹಳ್ಳಿ ವಲಯ, ದಕ್ಷಿಣ ವಲಯ, ಪಶ್ಚಿಮ ವಲಯ, ಯಲಹಂಕ ವಲಯಗಳ ಹಗರಣಗಳಿಗೆ ಸಂಬಂಧಪಟ್ಟ ವಿವರಗಳು ಪ್ರತ್ಯೇಕ ಪ್ರತ್ಯೇಕ ಸಂಪುಟಗಳಲ್ಲಿವೆ.
ಉಳಿದ ಮೂರು ಸಂಪುಟಗಳು ಬೆಂಗಳೂರು ನಗರ ಜಿಲ್ಲೆ, ಗ್ರಾಮಾಂತರ ಜಿಲ್ಲೆ ಮತ್ತು ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಹಗರಣಗಳದ್ದಾಗಿವೆ.
ತನಿಖೆಯ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಪ್ಪಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿವೃತ್ತ ನ್ಯಾ.ಜಾನ್ ಮೈಕೇಲ್ ಡಿ. ಕುನ್ಹಾ ಸಲ್ಲಿಸಿದ ಮೊದಲ ಮಧ್ಯಂತರ ವರದಿ ಪರಿಶೀಲನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಸಚಿವ ಸಂಪುಟ ಉಪ ಸಮಿತಿ ರಚಿಸಿದೆ. ಈ ಸಮಿತಿ ಈಗಾಗಲೇ ನಿರಂತರ ಸಭೆ ನಡೆಸುತ್ತಿದೆ. ಸುಮಾರು 29 ಜನ ಅಧಿಕಾರಿಗಳು ಸಮಿತಿ ನೀಡಿರುವ ನೋಟಿಸ್‌ಗೆ ಉತ್ತರ ನೀಡಿಲ್ಲ. ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು. ಕುನ್ಹಾ ಅವರು ವರದಿಯಲ್ಲಿ ಅನೇಕ ರಾಜಕಾರಣಿಗಳ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಇದರ ಬಗ್ಗೆ ನಮಗೂ ಅರಿವಿದೆ. ಸೂಕ್ತಕಾಲದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಹಲವು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿವೆ. ಈಗ ಎರಡನೇ ಮಧ್ಯಂತರ ವರದಿ ಹಲವರ ಮೈನಡುಕ ಉಂಟು ಮಾಡಿದೆ.