

ವಾಷಿಂಗ್ಟನ್: ಕರೊನಾ ವೈರಸ್ ಔಷಧದ ಪ್ರಾಯೋಗಿಕ ಪರೀಕ್ಷೆ ಮೊದಲ ಪ್ರಯತ್ನದಲ್ಲಿ ವಿಫಲವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ಸಂಕ್ಷಿಪ್ತ ವರದಿಯೊಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು್ಯಎಚ್ಒ) ವೆಬ್ಸೈಟ್ನಲ್ಲಿ ಪ್ರಕಟವಾಗಿದ್ದು, ಬಳಿಕ ಅದನ್ನು ಅಳಿಸಿಹಾಕಲಾಗಿದೆ. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಬ್ಲು್ಯಎಚ್ಒ, ವರದಿ ಇನ್ನೂ ಪರಿಶೀಲನೆ ಹಂತದಲ್ಲಿದ್ದು, ಅಜಾಗರೂಕತೆಯಿಂದ ಪ್ರಕಟವಾಗಿದೆ ಎಂದು ತಿಳಿಸಿದೆ.
ಚೀನಾದ ಪ್ರಯೋಗದಲ್ಲಿ 237 ರೋಗಿಗಳ ಮೇಲೆ ಪ್ರ್ರಾಯೋಗಿಕ ಕ್ಲಿನಿಕಲ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 158 ಜನರನ್ನು ಔಷಧ ಹಾಗೂ 79 ಜನರನ್ನು ಕಂಟ್ರೋಲ್ ಗ್ರೂಪ್ನಲ್ಲಿಡಲಾಗಿತ್ತು. ಕೆಲವರಿಗೆ ಅಡ್ಡ ಪರಿಣಾಮಗಳು ತೋರಿಸಿದ ಹಿನ್ನೆಲೆ 18 ರೋಗಿಗಳಿಗೆ ರೆಮ್ಡಿಸಿವಿರ್ ಔಷಧವನ್ನು ನೀಡುವುದನ್ನು ಮೊದಲೇ ನಿಲ್ಲಿಸಲಾಯಿತು. ಒಂದು ತಿಂಗಳ ಚಿಕಿತ್ಸೆ ಬಳಿಕ ರೆಮ್ಡಿಸಿವಿರ್ ನೀಡಲಾಗಿದ್ದ ರೋಗಿಗಳಲ್ಲಿ ಶೇ. 13.9 ಜನರು ಸಾವನ್ನಪ್ಪಿದ್ದಾರೆ. ಆದರೆ ಕಂಟ್ರೋಲ್ ಗ್ರೂಪ್ನಲ್ಲಿದ್ದ ಶೇ.12.8 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪ್ರಾಯೋಗಿಕ ಔಷಧ ರೆಮ್ಡಿಸಿವಿರ್ನ ತಯಾರಿಕ ಕಂಪನಿ ಗಿಲ್ಯಾಡ್ನ ವಕ್ತಾರರೂ ಈ ಬಗ್ಗೆ ಮಾತನಾಡಿದ್ದು, ಅಚಾನಕ್ಕಾಗಿ ಪ್ರಕಟವಾದ ವರದಿ ಸೂಕ್ತವಲ್ಲದ ಅಂಶಗಳನ್ನು ಒಳಗೊಂಡಿದೆ. ಕಡಿಮೆ ದಾಖಲಾತಿಯ ಕಾರಣದಿಂದಾಗಿ ಕ್ಲಿನಿಕಲ್ ಪ್ರಯೋಗವನ್ನು ಮೊದಲೇ ಕೊನೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಈ ವರದಿಯೇ ಅಂತಿಮವಲ್ಲ, ಹಲವಾರು ಸುಧಾರಿತ ದೊಡ್ಡ ಪ್ರಯೋಗಗಳು ಇನ್ನೂ ಬಾಕಿ ಇದ್ದು, ಅವುಗಳಿಂದ ಶೀಘ್ರದಲ್ಲೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದಿದ್ದಾರೆ.
ಬಿಸಿಲಿಗೆ ಕರೊನಾ ನಾಶ ಸಾಧ್ಯತೆ: ಕರೊನಾ ವೈರಸ್ ಸೂರ್ಯನ ಬಿಸಿಲಿಗೆ ಬೇಗನೆ ನಾಶವಾಗುತ್ತದೆ ಎಂದು ಹೊಸ ಸಂಶೋಧನೆಯೊಂದರಿಂದ ತಿಳಿದುಬಂದಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆಂತರಿಕ ಭದ್ರತಾ ಕಾರ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹೆಗಾರ ವಿಲಿಯಂ ಬ್ರಿಯಾನ್ ಶ್ವೇತಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ನೇರಳಾತೀತ ಕಿರಣಗಳ ಸೋಂಕಿನ ಮೇಲೆ ಪ್ರಬಲ ಪರಿಣಾಮ ಬೀರುತ್ತವೆ ಎಂದು ವಿಜ್ಞಾನಿಗಳು ಕಂಡು ಕಂಡುಹಿಡಿದಿದ್ದಾರೆ. ಹೀಗಾಗಿ ಬೇಸಿಗೆಯಲ್ಲಿ ಕರೊನಾ ಹರಡುವಿಕೆ ಕಡಿಮೆಯಾಗಬಹುದು ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ. ಅಲ್ಲದೇ ಬಿಸಿಲಿನ ಕಿರಣಗಳು ಗಾಳಿಯಲ್ಲೂ ಕೂಡ ವೈರಸ್ ನಾಶಪಡಿಸುತ್ತವೆ ಎಂದಿದ್ದಾರೆ.