

ದೇಶದಲ್ಲಿ ಕರೊನಾ ಪ್ರಕರಣಗಳು ಏರಿಕೆ ಹಿನ್ನೆಲೆ ವೃದ್ಧರು, ವಿವಿಧ ಕಾಯಿಲೆಗಳಿಗೆ ತುತ್ತಾಗಿರರುವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಲಸಿಕೆಗಳನ್ನು. ಮುನ್ನೆಚ್ಚರಿಕಾ ಕ್ರಮವಾಗಿ ಸಂಗ್ರಹಿಸಬೇಕು ಎಂದು ಸೂಚಿಸಲಾಗಿದೆ ಎಂದು ಸಿಎಂ(CM) ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ವಿಧಾನಸೌಧದ ಪೂರ್ವ ದ್ವಾರದ ಬಳಿ ಇರುವ ಮಾಜಿ ಪ್ರಧಾನ ಮಂತ್ರಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರು ರವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿದರು.
ಕೋವಿಡ್ ಸಂಬಂಧಿಸಿದಂತೆ ನಿನ್ನೆ ನಡೆದ ಸಭೆಯಲ್ಲಿ ಮುನ್ನೆಚ್ಚರಿಕಾ ಬಗ್ಗೆ ಚರ್ಚಿಸಲಾಗಿದೆ. ನಾವು ಎಲ್ಲದ್ದಕ್ಕೂ ಸಿದ್ಧರಾಗಿರಬೇಕು. ವೆಂಟಿಲೇಟರ್, ಆಮ್ಲಜನಕ, ವಾರ್ಡ್ ಗಳಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಸುಮಾರು 65 ಇದ್ದ ಪ್ರಕರಣಗಳು 80 ಆಗಿವೆ. ಇದು ಗಂಭೀರವಾದ ತಳಿಯಲ್ಲ. ನೆಗಡಿ, ಕೆಮ್ಮು, ಜ್ವರ ಬಂದಿರುವ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಹಾಗೂ ವೃದ್ಧರು, ವಿವಿಧ ಕಾಯಿಲೆಗಳಿಗೆ ತುತ್ತಾಗಿರರುವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ ಎಂದರು.
ಎಲ್ಲರೂ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿಲ್ಲ.ಆದರೆ ವೃದ್ಧರು, ಕಾಯಿಲೆಯಿರುವವರು ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು. ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಲು ಕೇಂದ್ರದಿಂದ ಸೂಚನೆ ಬಂದಿಲ್ಲ. ಆದರೆ ಎಚ್ಚರಿಕೆ ವಹಿಸಲಾಗುವುದು ಎಂದರು.