

ನವದೆಹಲಿ: ಕರೊನಾ ಸೋಂಕಿಗೆ ತುಂಬ ಹೆದರಿಕೊಳ್ಳಬೇಕಿಲ್ಲ. ಅದು ನಿಜಕ್ಕೂ ಗಂಭೀರ ಕಾಯಿಲೆಯಲ್ಲ ಎಂದು ದೆಹಲಿ ಆಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್)ನ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಕರೊನಾ ವೈರಸ್ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತ ಜೀವ ಹಾನಿಯನ್ನು ಮಾಡುತ್ತಿದೆ. ಸೋಂಕಿನ ಪ್ರಮಾಣ ದಿನೇದಿನೇ ಹೆಚ್ಚುತ್ತಿದೆ. ಈ ಬಗ್ಗೆ ಮಾತನಾಡಿದ ಡಾ. ಗುಲೇರಿಯಾ, ಕರೊನಾ ಸೋಂಕಿತರಲ್ಲಿ ಶೇ.90-95 ಮಂದಿ ಗುಣಮುಖರಾಗುತ್ತಾರೆ. ಶೇ.80ರಷ್ಟು ಜನರು ಶಾಂತ ಸ್ವರೂಪದ ಸೋಂಕಿಗೆ ತುತ್ತಾಗುತ್ತಾರೆ ಮತ್ತು ಶೇ.5ಕ್ಕಿಂತಲೂ ಕಡಿಮೆ ಜನರಿಗಷ್ಟೇ ವೆಂಟಿಲೇಟರ್ ಅಗತ್ಯವಿದೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.80ರಷ್ಟು ಜನರಿಗೆ ಪ್ರಾಥಮಿಕ ಚಿಕಿತ್ಸೆ ಸಾಕಾಗುತ್ತಿದೆ. ಶೇ.15ರಷ್ಟು ರೋಗಿಗಳಿಗೆ ಆಕ್ಸಿಜನ್ ಥೆರಪಿ, ಸುಸ್ಥಿರ ಪ್ಲಾಸ್ಮಾ ಚಿಕಿತ್ಸೆ ಬೇಕಾಗುತ್ತಿದೆ ಎಂದಿದ್ದಾರೆ.
ಕರೊನಾ ಸೋಂಕನ್ನು ಕಳಂಕದಂತೆ ಬಿಂಬಿಸಲಾಗುತ್ತಿದೆ. ಇದೇ ಕಾರಣಕ್ಕೆ ಅನೇಕರು ಜ್ವರ ಮತ್ತಿತರ ಲಕ್ಷಣಗಳು ಕಂಡಕೂಡಲೇ ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಉಸಿರಾಟದಲ್ಲಿ ತೀವ್ರ ತೊಂದರೆ ಕಾಣಿಸಿಕೊಂಡು, ಇನ್ನೇನು ಆಸ್ಪತ್ರೆಗೆ ಹೋಗದೆ ವಿಧಿಯಿಲ್ಲ ಎಂದಾದಾಗ ಮಾತ್ರ ತಪಾಸಣೆಗೆ ಬರುತ್ತಿದ್ದಾರೆ. ಹಾಗಾಗಿ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.
ಹಾಗೇ, ಯಾರೂ ನಿರ್ಲಕ್ಷ್ಯ ಮಾಡಬೇಡಿ. ಸಣ್ಣ ಲಕ್ಷಣ ಕಂಡುಬಂದರೂ ಕೂಡಲೇ ಬಂದು ಪರೀಕ್ಷಿಸಿಕೊಳ್ಳಿ ಎಂದಿದ್ದಾರೆ. (ಏಜೆನ್ಸೀಸ್)