ಲಾಕ್​ಡೌನ್ ಅವಧಿ ಮುಂದುವರಿಯಲಿದೆಯೇ?

Lockdown
Published on

ನವದೆಹಲಿ/ಬೆಂಗಳೂರು: ಕರೊನಾ ಸೋಂಕನ್ನು ಮಟ್ಟಹಾಕುವ ಉದ್ದೇಶದಿಂದ ದೇಶಾದ್ಯಂತ ಏ.14ರವರೆಗೆ ಘೋಷಿಸಲಾಗಿರುವ 21 ದಿನಗಳ ಲಾಕ್​ಡೌನ್ (ದಿಗ್ಬಂಧನ) ಏಪ್ರಿಲ್ ಅಂತ್ಯದವರೆಗೂ ವಿಸ್ತರಣೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವ ಜತೆಯಲ್ಲೇ ಈ ವ್ಯಾಧಿ ಸಮುದಾಯಕ್ಕೆ ಹಬ್ಬುವ 3ನೇ ಹಂತ ತಲುಪುವ ಅಪಾಯ ಇರುವುದರಿಂದ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳು ಹಾಗೂ ತಜ್ಞರ ನೀಡಿರುವ ಸಲಹೆಯಂತೆ ಲಾಕ್​ಡೌನ್ ಮುಂದುವರಿಸುವ ಕುರಿತು ಗಂಭೀರ ಚಿಂತನೆ ನಡೆಸಿರುವುದಾಗಿ ತಿಳಿದು ಬಂದಿದೆ.

ತೆಲಂಗಾಣ ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ ಸರ್ಕಾರಗಳು ಲಾಕ್​ಡೌನ್ ಮುಂದುವರಿಸಬೇಕೆಂದು ಮನವಿ ಮಾಡಿವೆ. ರಾಜಸ್ಥಾನ ಸರ್ಕಾರ ಹಂತಹಂತವಾಗಿ ನಿರ್ಬಂಧ ಸಡಿಲಿಸಬೇಕೆಂದು ಬಯಸಿದೆ. ಅಸ್ಸಾಂ ಕೂಡ ಇದೇ ಇಂಗಿತ ವ್ಯಕ್ತಪಡಿಸಿದೆ. ಲಾಕ್​ಡೌನ್​ನ ಕಡೆಯ ವಾರ ಅತ್ಯಂತ ನಿರ್ಣಾಯಕವಾದ್ದರಿಂದ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡರೂ ಜನರು ಅದಕ್ಕೆ ಸಹಕಾರ ನೀಡಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ.

ಸಚಿವರ ಸಭೆಯಲ್ಲೂ ಚರ್ಚೆ: ಕೋವಿಡ್-19 ಕುರಿತಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದಲ್ಲಿ ಸಚಿವರ ಗುಂಪಿನ ಸಭೆ ಮಂಗಳವಾರ ನಡೆದಿದ್ದು, ಲಾಕ್​ಡೌನ್ ಮುಂದುವರಿಕೆ ಕುರಿತು ಚರ್ಚೆ ನಡೆದಿದೆ. ಅತ್ಯವಶ್ಯಕ ವಸ್ತುಗಳ ಸರಬರಾಜು ಮತ್ತು ಕರೊನಾ ತೀವ್ರವಾಗಿರುವ ಹಾಟ್​ಸ್ಪಾಟ್​ಗಳ ಸ್ಥಿತಿಗತಿ ಕುರಿತು ಮಾತುಕತೆ ನಡೆದಿದೆ. ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಷಾ, ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್, ರೈಲ್ವೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆಹಾರ ಪೂರೈಕೆ ಸಚಿವ ರಾಮ್​ಲಾಸ್ ಪಾಸ್ವಾನ್ ಮೊದಲಾದವರು ಭಾಗವಹಿಸಿದ್ದರು. ಮಾರ್ಚ್ 22ರ ಭಾನುವಾರ ಒಂದು ದಿನದ ಜನತಾ ಕರ್ಫ್ಯೂಗೆ ಕರೆ ನೀಡಿದ್ದ ಪ್ರಧಾನಿ ಮೋದಿ, ಎರಡು ದಿನದ ಬಳಿಕ ಮೂರು ವಾರಗಳ ದೇಶವ್ಯಾಪಿ ದಿಗ್ಬಂಧನವನ್ನು ಮಾ.25ರಿಂದ ಅನ್ವಯವಾಗುವಂತೆ ಘೋಷಿಸಿದರು. ಇದು ಏ. 14ಕ್ಕೆ ಅಂತ್ಯವಾಗಲಿದೆ.

30ರವರೆಗೆ ಶಾಲೆ ಬಂದ್?: ಮಕ್ಕಳ ಹಿತದೃಷ್ಟಿಯಿಂದ ಶಾಲೆ, ಕಾಲೇಜುಗಳನ್ನು ಏ.30ರವರೆಗೆ ಮುಚ್ಚಲು ಸಲಹೆ ನೀಡುವ ಸಾಧ್ಯತೆ ಇದೆ. ಹಾಟ್ ಸ್ಪಾಟ್ ಹಾಗೂ ನಾನ್ ಹಾಟ್​ಸ್ಪಾಟ್​ಗಳಾಗಿ ಗುರುತಿಸಲ್ಪಟ್ಟ ಜಿಲ್ಲೆಗಳಲ್ಲಿ ರೆಸ್ಟೋರೆಂಟ್​ಗಳು ಮತ್ತು ಹೋಟೆಲ್​ಗಳಿಂದ ಪಾರ್ಸೆಲ್ ಮಾತ್ರ ಕೊಂಡೊಯ್ಯುವ ಪದ್ಧತಿ ಮುಂದುವರಿಸಬೇಕು ಎಂದು ಶಿಫಾರಸು ಮಾಡುವ ಸಾಧ್ಯತೆಗಳಿವೆ.

ಸರ್ಕಾರದ ನಿರ್ಧಾರಕ್ಕೆ

ಆರೋಗ್ಯ ತಜ್ಞರ ಸಮಿತಿಯ ನೀಡುವ ವರದಿಯನ್ನು ಒಪ್ಪುವ ಅಥವಾ ಭಾಗಶಃ ಒಪ್ಪುವ ಅಥವಾ ಒಪ್ಪದಿರುವ ಎಲ್ಲ ಅಧಿಕಾರವೂ ಸರ್ಕಾರಕ್ಕಿದೆ ಎಂದು ಹೆಸರು ಬಹಿರಂಗಕ್ಕೆ ಒಪ್ಪದ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net