

ಹರಿದ್ವಾರ: ಮಹಾಮಾರಿ ಕರೊನಾ ವೈರಸ್ ಮಣಿಸಲು ಔಷಧ ಕಂಡುಹಿಡಿಯುವ ಪ್ರಯತ್ನವು ವಿಶ್ವದ್ಯಾಂತ ನಡೆಯುತ್ತಿರುವ ನಡುವೆಯೇ ಯೋಗ ಗುರು ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಆಯುರ್ವೇದಿಕ್ ಸಂಸ್ಥೆಯು ಜನರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇಂದು ಆಯುರ್ವೇದಿಕ್ ಔಷಧ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
"ಕರೊನಿಲ್" ಹೆಸರಿನ ಔಷಧವು ಕರೊನಾ ವೈರಸ್ ಸೋಂಕಿಗೆ ಸರಿಯಾದ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಉತ್ತರಖಂಡದ ಹರಿದ್ವಾರದಲ್ಲಿರುವ ಪತಂಜಲಿ ಯೋಗಪೀಠವು ತಿಳಿಸಿದೆ. ಗಮನಾರ್ಹವೆಂದರೆ ಕೋವಿಡ್ ವೈರಸ್ ಗುಣಪಡಿಸುವ ಔಷಧವನ್ನು ಪತ್ತೆ ಮಾಡಿರುವುದಾಗಿ ಈ ತಿಂಗಳ ಆರಂಭದಲ್ಲೇ ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಅವರು ವಾದಿಸಿದ್ದರು. ಇದನ್ನೂ ಓದಿ: ಒಬ್ಬ ವ್ಯಕ್ತಿಗೆ ಕರೊನಾ ಇದೆಯೆಂದು ಆತನ ನೆರೆಹೊರೆಯವರಿಗೆ ತಿಳಿಸಿದ ಡಾಕ್ಟರ್ ಗತಿ ಏನಾಯ್ತು ನೋಡಿ….
ಕೋವಿಡ್ -19 ರೋಗಿಗಳಿಗೆ ನೀಡಲಾಗುತ್ತಿರುವ ಕರೊನಿಲ್ ಔಷಧವನ್ನು ಅಶ್ವಗಂಧ, ಗಿಲೊಯ್ ಮತ್ತು ತುಳಸಿ ಮಿಶ್ರಣದಿಂದ ತಯಾರಿಸಲಾಗಿದೆ. ಶೇ. 100 ರಷ್ಟು ಚೇತರಿಕೆ ದರವಿದೆ ಎಂದು ಬಾಬಾ ರಾಮದೇವ್ ಅವರು ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆಚಾರ್ಯ ಬಾಲಕೃಷ್ಣ ಅವರು, ಕರೊನಾ ವೈರಸ್ ಗುಣಪಡಿಸುವ ಸಾಕ್ಷಿ ಆಧಾರಿತ ಮೊದಲ "ಕರೊನಿಲ್" ಔಷಧವನ್ನು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಪತಂಜಲಿ ಯೋಗಪೀಠ ಬಿಡುಗಡೆ ಮಾಡಲಿದೆ ಎಂದು ಹೇಳಲು ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ. ಕರೊನಿಲ್ ಔಷಧವು ರೋಗಿಗಳನ್ನು 5 ರಿಂದ 14 ದಿನಗಳವರೆಗೆ ಗುಣಪಡಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಕರೊನಾ ವೈರಸ್ ಸ್ಪೋಟಗೊಂಡ ಬೆನ್ನಲ್ಲೇ ನಾವು ವಿಜ್ಞಾನಿಗಳ ಒಂದು ತಂಡವನ್ನು ನೇಮಕ ಮಾಡಿಕೊಂಡೆವು. ಮೊದಲಿಗೆ ವೈರಸ್ ವಿರುದ್ಧ ಹೋರಾಡಬಹುದಾದ ಮತ್ತು ದೇಹದಲ್ಲಿ ಅದರ ಹರಡುವಿಕೆಯನ್ನು ನಿಲ್ಲಿಸಬಹುದಾದ ಉತ್ತೇಜಕಗಳನ್ನು ಹಾಗೂ ಸಂಯುಕ್ತಗಳನ್ನು ಗುರುತಿಸಲಾಯಿತು. ಬಳಿಕ ಕ್ಲೀನಿಕಲ್ ಅಧ್ಯಯನ ನಡೆಸಲಾಯಿತು. 100 ಕರೊನಾ ರೋಗಿಗಳಲ್ಲಿ ಔಷಧದಿಂದ ಶೇ. 100 ರಷ್ಟು ಧನಾತ್ಮಕ ಫಲಿತಾಂಶ ಪಡೆಯಲಾಯಿತು ಎಂದು ಬಾಲಕೃಷ್ಣ ಅವರು ತಿಳಿಸಿದ್ದಾರೆ.
ನಮ್ಮ ಔಷಧವನ್ನು ಪಡೆದ ಬಳಿಕ 5 ರಿಂದ 14 ದಿನಗಳಲ್ಲಿ ರೋಗಿಗಳಿಗೆ ಕರೊನಾ ನೆಗಿಟಿವ್ ಬಂದಿದೆ. ಆದ್ದರಿಂದ, ಆಯುರ್ವೇದದ ಮೂಲಕ ಕೋವಿಡ್-19ಗೆ ಚಿಕಿತ್ಸೆ ಸಾಧ್ಯ ಎಂದು ನಾವು ಹೇಳಬಹುದಾಗಿದೆ. ಸದ್ಯ ನಾವು ನಿಯಂತ್ರಿತ ಕ್ಲಿನಿಕಲ್ ಪ್ರಯೋಗಗಳನ್ನು ಮಾತ್ರ ಮಾಡುತ್ತಿದ್ದೇವೆ. ಮುಂದಿನ ನಾಲ್ಕೈದು ದಿನಗಳಲ್ಲಿ ಸಾಕ್ಷಿ ಮತ್ತು ಡಾಟಾಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: VIDEO| ಸಮುದ್ರ ದಡದಲ್ಲಿ ಸಿಕ್ಕ ಸೂಟ್ಕೇಸ್ನಲ್ಲಿ ಹಣವಿದೆ ಅಂದುಕೊಂಡ ಯುವತಿಯರಿಗೆ ಕಾದಿತ್ತು ಶಾಕ್!
ಇದೇ ವೇಳೆ ಯೋಗಾಭ್ಯಾಸ ಮಾಡುವುದರೊಂದಿಗೆ ಇಮ್ಯೂನಿಟಿ ಉತ್ತೇಜಿಸುವಂತಹ ಆಹಾರಗಳನ್ನು ಸೇವಿಸಲು ಬಾಲಕೃಷ್ಣ ಅವರು ಜನರಿಗೆ ಸಲಹೆ ನೀಡಿದರು. (ಏಜೆನ್ಸೀಸ್)