ಕೋವಿಡ್ ಸೋಂಕು ಇಳಿಕೆ ನಿರ್ಲಕ್ಷ್ಯವಹಿಸಿದರೆ ಚಳಿಗಾಲಕ್ಕೆ ಮತ್ತೆ ಹೆಚ್ಚಳ

Covid Test
Published on

ಬೆಂಗಳೂರು : ಕೋವಿಡ್ ಪರೀಕ್ಷೆ ಹೆಚ್ಚಳದಿಂದಾಗಿ ಆರಂಭದಲ್ಲೇ ಸೋಂಕಿತರ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಿಂದ ಸೋಂಕು ಹರಡುವಿಕೆ ಹಾಗೂ ಮರಣ ಪ್ರಮಾಣ ಕಡಿಮೆಯಾಗಿದೆ. ಹಾಗೆಂದು ಜನರು ಮೈಮರೆತು ನಿಯಮ ಪಾಲನೆಯಲ್ಲಿ ನಿರ್ಲಕ್ಷಿಸಿದರೆ, ದೆಹಲಿ ಮಾದರಿಯಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ತಜ್ಞರು ಎಚ್ಚರಿಸಿದ್ದಾರೆ.

ಲಾಕ್ ಡೌನ್ ಸಡಿಲಿಕೆಗೊಂಡಿದ್ದು, ಶಾಲಾ ಕಾಲೇಜುಗಳು ಆರಂಭವಾಗಿವೆ. ಹಾಗೆಂದು ಮೊದಲಿನ ಹಾಗೆ ಗುಂಪು ಸೇರುವುದು ಸರಿಯಲ್ಲ. ಸೋಂಕು ಇಳಿಕೆ ಆಯಿತೆಂದು ನಿರ್ಲಕ್ಷ್ಯ ಸಲ್ಲದು. ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳುನ್ನು ತಪ್ಪದೆ ಪಾಲಿಸಬೇಕು. |ಡಾ. ಸಿ.ಎನ್. ಮಂಜುನಾಥ್, ನಿರ್ದೇಶಕ, ಜಯದೇವ ಹೃದ್ರೋಗ ಸಂಸ್ಥೆ

ಕರೊನಾ ವೈರಸ್​ನ ಇತಿಹಾಸ ನೋಡಿದರೆ ಎರಡು ಮೂರು ತಿಂಗಳಲ್ಲಿ ಪುನಃ ಸೋಂಕು ಹರಡುವಿಕೆ ಪ್ರಮಾಣ ಹೆಚ್ಷಾಗುವ ಸಾಧ್ಯತೆಗಳಿವೆ. ದೇಶದ ಇತರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಮರಣ ಪ್ರಮಾಣ ಶೇ.1.1ರಷ್ಟಿದೆ ಅತ್ಯಂತ ಕನಿಷ್ಟ. ಇದನ್ನು ನೋಡಿದರೆ ಸೋಂಕು ಇಳಿಕೆಯಾಗಿದೆ ಎಂದು ನಿರ್ಲಕ್ಷ್ಯ ಮಾಡಿದರೆ ಮುಂದೆಯೂ ಅಪಾಯ ತಪ್ಪಿದ್ದಲ್ಲ ಎಂದು ತಜ್ಞರು ಹೇಳುತ್ತಾರೆ.

ಡಿಸೆಂಬರ್ 12ಕ್ಕೆ 9.25 ಲಕ್ಷಕ್ಕೆ ಏರಿಕೆ

ರಾಜ್ಯದಲ್ಲಿ ಕೋವಿಡ್ ಸೋಂಕು ಹಾಗೂ ಅದರ ಪರಿಣಾಮಗಳ ಕುರಿತು ನಿರಂತರ ಅಧ್ಯಯನ ನಡೆಸುತ್ತಿರುವ ಪಬ್ಲಿಕ್ ಫೌಂಡೇಶನ್ ಆಫ್ ಇಂಡಿಯಾ ಮತ್ತು ಜೀವನ್ ರಕ್ಷ ಸಂಸ್ಥೆಗಳು ಡಿ.12ರ ಹೊತ್ತಿಗೆ ರಾಜ್ಯದಲ್ಲಿ ಸುಮಾರು 9.25 ಲಕ್ಷ ಕೋವಿಡ್ ಪ್ರಕರಣಗಳು ವರದಿ ಆಗಬಹುದು ಎಂದು ಅಂದಾಜಿಸಿವೆ. ರಾಜ್ಯದಲ್ಲಿ ನ.18ಕ್ಕೆ ಒಟ್ಟು ಸೋಂಕಿತರ ಸಂಖ್ಯೆ 8.65 ಲಕ್ಷ ದಾಟಿದೆ. ಇನ್ನೊಂದು ತಿಂಗಳಲ್ಲಿ 9 ಲಕ್ಷ ಗಡಿ ದಾಟುವ ಹಾಗೂ ಸಾವಿನ ಸಂಖ್ಯೆ 12,800 ತಲುಪುವ ಸಾಧ್ಯತೆಯಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಿದೆ. ಸರ್ಕಾರ ಪರೀಕ್ಷೆ ಸಂಖ್ಯೆ ಹೆಚ್ಚಿಸಿ ಆರಂಭದಲ್ಲೇ ಸೋಂಕಿತರ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದ್ದು ಸೋಂಕು ಇಳಿಮುಖವಾಗಲು ಸಹಾಯಕವಾಗಿದೆ ಎಂದು ಜೀವನ್ ರಕ್ಷಾದ ಸಂಚಾಲಕ ಸಂಜೀವ್ ತಿಳಿಸಿದ್ದಾರೆ.

ಸಕ್ರಿಯ ಪ್ರಕರಣ 25,146ಕ್ಕೆ ಇಳಿಕೆ

ರಾಜ್ಯದಲ್ಲಿ ತಿಂಗಳ ಹಿಂದೆ ಒಂದು ಲಕ್ಷ ಮೀರಿದ್ದ ಕರೊನಾ ಸಕ್ರಿಯ ಪ್ರಕರಣಗಳು ಈಗ 25,146ಕ್ಕೆ ಕುಸಿದಿದೆ. ಬುಧವಾರ 1,791 ಹೊಸ ಸೋಂಕು ಪ್ರಕರಣ ವರದಿಯಾಗಿದ್ದು, 1,947 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 21 ಸೋಂಕಿತರ ಸಾವಿನೊಂದಿಗೆ ಮೃತರ ಸಂಖ್ಯೆ 11,578 ಕ್ಕೆ ಹೆಚ್ಚಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 8.65 ಲಕ್ಷಕ್ಕೆ ಏರಿಕೆಯಾಗಿದ್ದು, ಗುಣಮುಖರ ಸಂಖ್ಯೆ 8.29 ಲಕ್ಷ ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net