ಉಪಸಮರ- ಗರಿಗೆದರಿದ ರಾಜಕೀಯ: ಸಿಂದಗಿ, ಹಾನಗಲ್ ಕ್ಷೇತ್ರಕ್ಕೆ ಚುನಾವಣೆ ಪ್ರಕಟ; ಮೂರೂ ಪಕ್ಷಗಳಲ್ಲಿ ತಾಲೀಮು ಬಿರುಸು

Election
Published on

ಬೆಂಗಳೂರು: ಬಹು ನಿರೀಕ್ಷಿತ ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣಾ ವೇಳಾ ಪಟ್ಟಿ ಪ್ರಕಟವಾಗುತ್ತಿದ್ದಂತೆ ಮೂರು ಪ್ರಮುಖ ಪಕ್ಷಗಳಲ್ಲಿ ಪೂರ್ವ ತಾಲೀಮು ಬಿರುಸಾಗಿದೆ. ತ್ರಿಸೂತ್ರಗಳ ಅವಲಂಬನೆ: ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಘಟನೆ, ನಾಯಕತ್ವ ಮತ್ತು ವರ್ಚಸ್ಸು ಎಂಬ ತ್ರಿಸೂತ್ರದ ಬಲ ಅವಲಂಬಿಸಿ ಉಪ ಸಮರವನ್ನು ಎದುರಿಸಲು ಸಿದ್ಧವಾಗುತ್ತಿವೆ. ನಗರಪಾಲಿಕೆ ಚುನಾವಣೆಯಲ್ಲಿ ಪಕ್ಷದ ಮೇಲುಗೈ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಖುಷಿ ತಂದುಕೊಟ್ಟಿದ್ದು, ಸಿಎಂ ಆದ ಬಳಿಕ ಮತ್ತೊಂದು ಸವಾಲು ಎದುರಿಸುತ್ತಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವುದು ಸರ್ಕಾರದ ವರ್ಚಸ್ಸು ಮತ್ತು ಪಕ್ಷದ ಸಂಘಟನಾ ಬಲ ಅನುಕೂಲಕರ ಅಂಶಗಳೆಂದು ಬಿಜೆಪಿ ಲೆಕ್ಕ ಹಾಕಿದೆ. ಅಲ್ಲದೆ, ಜೆಡಿಎಸ್ ಭದ್ರ ಕೋಟೆ ಎನಿಸಿರುವ ಸಿಂದಗಿಯಲ್ಲೂ ಪ್ರಾಬಲ್ಯ ಮೆರೆಯುವ ತಂತ್ರಗಾರಿಕೆ ಹೂಡಿದೆ.

ತಳಹಂತದಿಂದ ಪಕ್ಷಕ್ಕೆ ಪುನಶ್ಚೇತನ ನೀಡಿ ಮತ್ತೆ ದೃಢವಾಗಿ ಕಟ್ಟುವತ್ತ ಕಾಂಗ್ರೆಸ್ ಗಮನ ನೆಟ್ಟಿದ್ದು, ಒಂದು ದೊಡ್ಡ ಗೆಲುವಿಗೆ ಹಾತೊರೆಯುತ್ತಿದೆ. ಪಾಲಿಕೆಯಲ್ಲಿ ಹುಸಿಯಾದ ನಿರೀಕ್ಷೆ ವಿಧಾನಸಭೆ ಉಪ ಚುನಾವಣೆಯಲ್ಲಿ ಫಲಿಸಲೆಂಬ ಅಪೇಕ್ಷೆ ಇಟ್ಟುಕೊಂಡಿದ್ದು, ಒಂದು ತಂಡವಾಗಿ ಮುನ್ನಡೆಯಲಿ ಎನ್ನುವುದು ಕಾರ್ಯಕರ್ತರ ಅಪೇಕ್ಷೆಯಾಗಿದೆ.

ಜೆಡಿಎಸ್ 2023 ವಿಧಾನಸಭೆ ಸಾರ್ವತ್ರಿಕ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು, ವಿಶಿಷ್ಟ ರೀತಿಯಲ್ಲಿ ಸಂಘಟನಾ ಕಾರ್ಯಾಗಾರ ಹಮ್ಮಿಕೊಂಡಿದೆ. ಜತೆಗೆ ಉಪ ಚುನಾವಣಾ ವೇಳಾಪಟ್ಟಿ ಪ್ರಕಟಿಸುವುದಕ್ಕೆ ಮುಂಚೆ ಹಾನಗಲ್​ಗೆ ನಿಯಾಜ್ ಶೇಖ್ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಪ್ರಕಟಿಸಿದೆ. ವ್ಯರ್ಥ ಕಸರತ್ತು, ಅಲ್ಪಾವಧಿಗೆ ಹೆಚ್ಚಿನ ಖರ್ಚು ಇತ್ಯಾದಿ ಕಾರಣಗಳನ್ನು ನೀಡಿ ಆರ್​ಆರ್ ನಗರ ಕ್ಷೇತ್ರದ ಉಪ ಚುನಾವಣೆಯಿಂದ ಜೆಡಿಎಸ್ ಹಿಂದೆ ಸರಿದಿತ್ತು. ಆದರೆ ಈ ಬಾರಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ತುದಿಗಾಲಲ್ಲಿ ನಿಂತಿರುವುದು ಕುತೂಹಲಕಾರಿಯಾಗಿದೆ.

ಸಿಂದಗಿ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಲು ಕಾರಣರಾಗಿದ್ದ ಎಂ.ಸಿ.ಮನಗೂಳಿ ಕುಟುಂಬವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ದಿವಂಗತ ಎಂ.ಸಿ.ಮನಗೂಳಿ ಪುತ್ರ ಅಶೋಕ ಮನಗೂಳಿಗೆ ಟಿಕೆಟ್ ಭರವಸೆಯಿತ್ತು, ಕೈಪಡೆ ಪಕ್ಷಕ್ಕೆ ಸೇರಿಸಿಕೊಂಡಿದೆ. ಜೆಡಿಎಸ್ ಟಿಕೆಟ್ ಮೇಲೆ ಕಣ್ಣಿಟ್ಟು, ಇಂಡಿ ಕ್ಷೇತ್ರದ ಮಾಜಿ ಶಾಸಕ ರವಿಕಾಂತ ಪಾಟೀಲ್, ಜಿಪಂ ಪಕ್ಷೇತರ ಸದಸ್ಯ ಗುರುರಾಜ ಪಾಟೀಲ್ ಆ ಪಕ್ಷಕ್ಕೆ ಸೇರಿದ್ದಾರೆ. ಆದರೆ ದಳಪತಿಗಳು ಈ ಕ್ಷೇತ್ರದಲ್ಲೂ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಚನೆಯಲ್ಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಉಪ ಚುನಾವಣೆಯು ಜೆಡಿಎಸ್ ಪಾಲಿಗೆ ಪೂರ್ವಸಿದ್ಧತಾ ಪರೀಕ್ಷೆ ಇದ್ದಂತೆ. ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಈ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದ್ದೇವೆ. | ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

ಪಕ್ಷದ ನಾಯಕತ್ವದಲ್ಲೇ ಚುನಾವಣೆ

ಹಾನಗಲ್, ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಪಕ್ಷದ ನಾಯಕತ್ವದಲ್ಲೇ ಎದುರಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜನರ ಒಲವು, ಬೆಂಬಲ ಪಕ್ಷದ ಪರವಾಗಿದೆ. ಸಂಘಟನೆ ಹಾಗೂ ಕಾರ್ಯಕರ್ತರ ಪಡೆ ಸಶಕ್ತವಾಗಿದ್ದು, ಪಕ್ಷದ ನೇತೃತ್ವದಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು. ಹಾನಗಲ್ ಕ್ಷೇತ್ರದಿಂದ 6 ಬಾರಿ ಉದಾಸಿ ಚುನಾಯಿತರಾಗಿದ್ದರು. ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೂ ಪಕ್ಷಕ್ಕೆ ನೆರವಾಗಲಿದೆ. ಪಕ್ಷದ ಸಾಂಘಿಕ ಶಕ್ತಿ, ಸರ್ಕಾರದ ಅಭಿವೃದ್ಧಿಪರ ನಿಲುವು ಜನ ಮನ್ನಣೆ ಗಳಿಸಿದೆ ಎಂದು ವಿಶ್ಲೇಷಿಸಿದರು. ದಾವಣಗೆರೆಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಎರಡೂ ಕ್ಷೇತ್ರಗಳ ಉಪಚುನಾವಣೆ ತಯಾರಿ ಚರ್ಚೆಯಾಗಿದ್ದು, ವೀಕ್ಷಕರನ್ನು ನೇಮಿಸಲು ಪಕ್ಷದ ರಾಜ್ಯಾಧ್ಯಕ್ಷರು ಕಾರ್ಯೋನ್ಮುಖರಾಗಿದ್ದಾರೆ. ಅಭ್ಯರ್ಥಿಗಳ ಹೆಸರು ಆದಷ್ಟು ಬೇಗ ಅಂತಿಮವಾಗಲಿದೆ ಎಂದು ತಿಳಿಸಿದರು.

ಸಿಂದಗಿಯಲ್ಲಿ ಸ್ಪರ್ಧಿಸಲ್ಲ

ಅಥಣಿ (ಬೆಳಗಾವಿ): ಸಿಂದಗಿ ಉಪ ಚುನಾವಣೆಯಲ್ಲಿ ನಾನಾಗಲೀ, ಪುತ್ರ ಚಿದಾನಂದ ಸವದಿಯಾಗಲಿ ಸ್ಪರ್ಧಿ ಸುವುದಿಲ್ಲ ಎಂದು ಎಂಎಲ್​ಸಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ. ಸಿಂದಗಿ ಉಪಚುನಾ ವಣೆ ಉಸ್ತುವಾರಿ ನನಗೆ ವಹಿಸಲಾಗಿದೆ. 2-3 ದಿನದಲ್ಲಿ ಅಲ್ಲಿಗೆ ತೆರಳಲಿದ್ದೇನೆ. ಚುನಾವಣೆಗೆ ಅಭ್ಯರ್ಥಿ ಯಾರು ಎಂದು ಘೊಷಣೆಯಾಗಿಲ್ಲ. ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಸಿಂಧಗಿ-ಹಾನಗಲ್ಲ ಎರಡೂ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಹಾನಗಲ್ಲ ಕ್ಷೇತ್ರ ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆಯಾಗಿದ್ದರಿಂದ ಅಲ್ಲಿನ ಮತದಾರರು ಬಿಜೆಪಿಗೆ ಬೆಂಬಲ ನೀಡುವುದರಲ್ಲಿ ಅನುಮಾನವಿಲ್ಲ. ಅಭ್ಯರ್ಥಿಗಳ ಗೆಲುವೇ ನಮ್ಮ ಗುರಿಯಾಗಿದೆ ಎಂದರು.

3 ಲೋಕಸಭೆ, 30 ಅಸೆಂಬ್ಲಿ ಕ್ಷೇತ್ರಗಳಿಗೆ ಉಪಚುನಾವಣೆ

ನವದೆಹಲಿ: ದಾದ್ರ ಮತ್ತು ನಗರ್ ಹವೇಲಿ, ಹಿಮಾಚಲ ಪ್ರದೇಶದ ಮಂಡಿ, ಮಧ್ಯಪ್ರದೇಶದ ಖಂಡ್ವಾ ಲೋಕಸಭಾ ಕ್ಷೇತ್ರಗಳು ಹಾಗೂ 14 ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ. ಅಕ್ಟೋಬರ್ 30ಕ್ಕೆ ಮತದಾನ ನಡೆಯಲಿದ್ದು, ನವಂಬರ್ 2ಕ್ಕೆ ಎಣಿಕೆ ಕಾರ್ಯ ಜರುಗಲಿದೆ. ಅಸ್ಸಾಂನ 5, ಪಶ್ಚಿಮ ಬಂಗಾಳ 4, ಮೇಘಾಲಯ, ಮಧ್ಯಪ್ರದೇಶ, ಹಿಮಾಚಲ ಪ್ರದೇಶಗಳಲ್ಲಿ ತಲಾ ಮೂರು, ರಾಜಸ್ಥಾನ, ಬಿಹಾರ ಮತ್ತು ಕರ್ನಾಟಕಗಳಲ್ಲಿ ತಲಾ ಎರಡು, ಆಂಧ್ರಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಮಿಜೋರಾಂ, ನಾಗಾಲ್ಯಾಂಡ್, ತೆಲಂಗಾಣಗಳಲ್ಲಿ ತಲಾ ಒಂದು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಸದಸ್ಯರ ನಿಧನ ಅಥವಾ ರಾಜೀನಾಮೆಯಿಂದಾಗಿ ಈ ಕ್ಷೇತ್ರಗಳ ತೆರವಾಗಿದ್ದವು. ಕರೊನಾ ಪ್ರಕರಣ ಕಡಿಮೆ ಆಗಿರುವುದರಿಂದ ಚುನಾವಣೆ ನಡೆಸಲು ಇದು ಸೂಕ್ತಕಾಲ. ಆದರೂ ಕರೊನಾ ಮಾರ್ಗದರ್ಶಿಯಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಆಯೋಗ ಹೇಳಿದೆ. ಸೆ.4ರಂದು ಪಶ್ಚಿಮ ಬಂಗಾಳದ ಭವಾನಿಪುರ ಸೇರಿ ಮೂರು ಮತ್ತು ಒಡಿಶಾದ ಒಂದು ಕ್ಷೇತ್ರಕ್ಕೆ ಆಯೋಗ ಉಪಚುನಾವಣೆ ಘೋಷಿಸಿತ್ತು. ಇಲ್ಲಿ ಸೆ. 30ಕ್ಕೆ ಮತದಾನ ನಡೆಯಲಿದೆ.

ಈಗಾಗಲೆ ಒಂದು ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಅಂತಿಮವಾಗಿದೆ. ಇನ್ನೊಂದು ಕ್ಷೇತ್ರಕ್ಕೆ ರಾಜ್ಯ ನಾಯಕರು ಚರ್ಚೆ ನಡೆಸಿ ಹೈಕಮಾಂಡ್​ಗೆ ಕಳುಹಿಸುತ್ತೇವೆ. ಚುನಾವಣೆಯನ್ನು ಎದುರಿಸಲು ಪಕ್ಷ ಸದಾ ಸಿದ್ಧವಾಗಿದೆ. ಎರಡು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net