

ನವದೆಹಲಿ/ಜಿನೀವಾ: ಹಲವು ತಿಂಗಳುಗಳ ಕಾಯುವಿಕೆಯ ನಂತರ ಭಾರತದ ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆಯಾದ ಕೋವಾಕ್ಸಿನ್ಗೆ ಅಂತೂ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ)ಯ ಅಂಗೀಕಾರ ಸಿಕ್ಕಿದೆ. ದೀಪಾವಳಿಯ ಈ ಶುಭ ಸಂದರ್ಭಕ್ಕೆ ಹೈದರಾಬಾದ್ನ ಕಂಪೆನಿಯಾದ ಭಾರತ್ ಬಯೋಟೆಕ್ನ ಉತ್ಪನ್ನವಾದ ಕೋವಾಕ್ಸಿನ್ ಲಸಿಕೆಗೆ ಎಮರ್ಜೆನ್ಸಿ ಯೂಸ್ ಲಿಸ್ಟಿಂಗ್(ಈಯುಎಲ್) ನೀಡಲಾಗಿದೆ.
ಡಬ್ಲ್ಯೂಎಚ್ಒನ ಟೆಕ್ನಿಕಲ್ ಅಡ್ವೈಸರಿ ಕಮಿಟಿ ಈ ನಿಟ್ಟಿನಲ್ಲಿ ಶಿಫಾರಸ್ಸು ಮಾಡಿದ್ದು, ಜಾಗತಿಕ ಮಾನ್ಯತೆ ಪಡೆದ ಕೆಲವೇ ಲಸಿಕೆಗಳ ಪಟ್ಟಿಗೆ ಇದೀಗ ಕೋವಾಕ್ಸಿನ್ ಕೂಡ ಸೇರಿದೆ. ಇದು ಕೋವಾಕ್ಸಿನ್ ಪಡೆದ ಭಾರತೀಯರಿಗೆ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಪ್ರಯಾಣ ಮಾಡಲು ಪೂರಕ ಪರಿಸ್ಥಿತಿಯನ್ನುಂಟು ಮಾಡಲಿದೆ. ಜೊತೆಗೆ, ಕೋವಾಕ್ಸಿನ್ನ ಉತ್ಪಾದನೆ, ಬಳಕೆ ಮತ್ತು ಅಂತರರಾಷ್ಟ್ರೀಯ ರಫ್ತಿಗೆ ಹೊಸ ಉತ್ತೇಜನ ಲಭಿಸಲಿದೆ.
ಐಸಿಎಂಆರ್ ಮತ್ತು ಪುಣೆಯ ನಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ವೈಜ್ಞಾನಿಕ ಸಹಯೋಗದೊಂದಿಗೆ ಭಾರತದಲ್ಲೇ ದೇಶೀಯವಾಗಿ ನಿರ್ಮಿಸಲಾಗಿರುವ ಏಕೈಕ ಲಸಿಕೆ ಕೋವಾಕ್ಸಿನ್. ಕರೊನಾದ ವಿರುದ್ಧ ಶೇಕಡ 77.8 ರಷ್ಟು ಪರಿಣಾಮಕಾರಿತ್ವ ಮತ್ತು ಹೊಸ ಡೆಲ್ಟಾ ವೇರಿಯೆಂಟ್ನ ವಿರುದ್ಧ ಶೇಕಡ 65.2 ರಷ್ಟು ಸಂರಕ್ಷಣೆ ಒದಗಿಸುತ್ತದೆ ಎನ್ನಲಾದ ಕೋವಾಕ್ಸಿನ್ಅನ್ನು ಭಾರತದಲ್ಲಿ ಮಕ್ಕಳಿಗೂ ಬಳಸಲು ಅನುಮೋದನೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ.
ಡಬ್ಲ್ಯೂಎಚ್ಒ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧನೋಮ್ ಘೆಬ್ರೆಯೆಸಸ್ ಅವರು ಮತ್ತೊಂದು ಲಸಿಕೆ, ಕೋವಾಕ್ಸಿನ್ಗೆ ಈಯುಎಲ್ ನೀಡಲಾಗಿರುವುದು ಸಂತಸದ ಸಂಗತಿ ಎಂದು ಟ್ವೀಟ್ ಮಾಡಿದ್ದಾರೆ. ಕರೊನಾ ವಿರುದ್ಧ ಹೆಚ್ಚು ಉತ್ಪನ್ನಗಳಿದ್ದಷ್ಟೂ ಒಳ್ಳೆಯದು ಎಂದಿದ್ದಾರೆ. ಭಾರತ್ ಬಯೋಟೆಕ್ನ ಎಂಡಿ ಡಾ.ಕೃಷ್ಣ ಎಲ್ಲಾ ಇದನ್ನು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ. ಮನಸೂಖ್ ಮಾಂಡವೀಯ ಅವರು ಇದು ಸಮರ್ಥ ನಾಯಕತ್ವ ಮತ್ತು ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯ ವಿಜಯವಾಗಿದೆ ಎಂದಿದ್ದಾರೆ. ಡಬ್ಲ್ಯೂಎಚ್ಒಗೆ ಧನ್ಯವಾದ ಹೇಳಿದ್ದಾರೆ. (ಏಜೆನ್ಸೀಸ್)