ಭಾರತೀಯರಿಗೆ ಶುಭಸುದ್ದಿ; ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ ಮಾನವರ ಬಳಕೆಗೆ ಸುರಕ್ಷಿತ; ಆರಂಭಿಕ ಯಶಸ್ಸು

covaxin
Published on

ನವದೆಹಲಿ: ದೂರದ ರಷ್ಯಾದಿಂದ ಕರೊನಾ ಲಸಿಕೆ ಸಿದ್ಧವಾಗಿದೆ ಎಂಬ ಶುಭಸುದ್ದಿ ಬಂದ ಬೆನ್ನಲ್ಲೇ, ಭಾರತವೂ ಕೂಡ ಈ ನಿಟ್ಟಿನಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ.

ಭಾರತದ 12 ವೈದ್ಯಕೀಯ ಸಂಸ್ಥೆಗಳಲ್ಲಿ ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ ಕ್ಲಿನಿಕಲ್​ ಟ್ರಯಲ್​ ನಡೆಯುತ್ತಿದೆ. ಇದೀಗ ಮೊದಲ ಹಂತದ ಪರೀಕ್ಷೆಯ ಆರಂಭಿಕ ಫಲಿತಾಂಶಗಳು ಕೊವಾಕ್ಸಿನ್​ ಮಾನವರ ಬಳಕೆಗೆ ಸುರಕ್ಷಿತ ಎಂಬುದನ್ನು ತಿಳಿಸಿವೆ.

ಹೈದರಾಬಾದ್​ನ ಭಾರತ್​ ಬಯೋಟೆಕ್​ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ವೈರಾಲಜಿ ಈ ಕಾರ್ಯಕ್ಕೆ ಸಾಥ್​ ನೀಡಿವೆ. ಮುಂದಿನ ತಿಂಗಳು ಇದರ ಎರಡನೇ ಹಂತದ ಪರೀಕ್ಷೆ ನಡೆಸಲಿವೆ.

ರೋಹ್ಟಕ್​ನ ವೈದ್ಯಕೀಯ ಸಂಸ್ಥೆಯಲ್ಲಿ ನಡೆಯುತ್ತಿರುವ ಕ್ಲಿನಿಕಲ್ ಟ್ರಯಲ್​ನ ಮುಖ್ಯ ಸಂಶೋಧನಾಧಿಕಾರಿಯಾಗಿರುವ ಡಾ. ಸವಿತಾ ವರ್ಮಾ, ಸಂಸ್ಥೆಯಿಂದ ಪ್ರಾಯೋಗಿಕವಾಗಿ ಲಸಿಕೆ ಪಡೆದವರಲ್ಲಿ ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ. ಲಸಿಕೆ ಮಾನವರ ಬಳಕೆಗೆ ಸುರಕ್ಷಿತ ಎಂಬುದನ್ನು ಇದು ತಿಳಿಸುತ್ತದೆ ಎಂದು ಹೇಳಿದ್ದಾರೆ.

ಪ್ರಯೋಗಾರ್ಥಿಗಳಿಗೆ ಎರಡನೇ ಹಂತದ ಡೋಸ್​ ನೀಡಲಾಗುತ್ತಿದ್ದು, ಅವರ ದೇಹದಲ್ಲಿ ಉಂಟಾಗಿರಬಹುದಾದ ಪ್ರತಿರೋಧಕ ಶಕ್ತಿಯ ವಿವರವನ್ನು ತಿಳಿಯಲು ರಕ್ತದ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಈವರೆಗಿನ ಪರೀಕ್ಷೆಯಲ್ಲಿ ಲಸಿಕೆ ಸುರಕ್ಷಿತ ಎಂಬುದು ಗೊತ್ತಾಗಿದೆ. ಇದಾದ ಬಳಿಕ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದನ್ನು ತಿಳಿಯಬೇಕಿದೆ. ಇದಕ್ಕಾಗಿ ರಕ್ತದ ಮಾದರಿಯನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ಮೊದಲ ಹಂತದ ಪ್ರಯೋಗದಲ್ಲಿ ಒಟ್ಟು 375 ಜನರ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದೆ. ಎರಡನೇ ಹಂತದ ಪರೀಕ್ಷೆಯಲ್ಲಿ 1000ಕ್ಕೂ ಅಧಿಕ ಜನರ ಮೇಲೆ ಕ್ಲಿನಿಕಲ್​ ಟ್ರಯಲ್​ ನಡಸಲು ಉದ್ದೇಶಿಸಲಾಗಿದೆ. ಈ ಪರೀಕ್ಷೆ ಸೆಪ್ಟಂಬರ್​ ಶುರು ಆಗುವ ನಿರೀಕ್ಷೆ ಹೊಂದಲಾಗಿದೆ. ಪರೀಕ್ಷೆ ನಡೆಸಲಾಗುತ್ತಿರುವ 12 ಸಂಸ್ಥೆಗಳಲ್ಲಿ ಬೆಳಗಾವಿಯ ಜೀವನ್​ ರೇಖಾ ಆಸ್ಪತ್ರೆಯೂ ಸೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net