

ನವದೆಹಲಿ: ಭಾರತ್ ಬಯೋಟೆಕ್ ತಯಾರಿಸುತ್ತಿರುವ ಕರೊನಾ ಲಸಿಕೆ ಕೊವ್ಯಾಕ್ಸಿನ್ ಮುಂದಿನ ವರ್ಷದ ಎರಡನೇ ತ್ರೖೆಮಾಸಿಕದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ.
ದೇಶಾದ್ಯಂತ ಸದ್ಯ 3ನೇ ಹಂತದ ಪ್ರಯೋಗ ಯಶಸ್ವಿಯಾಗಿ ನಡೆಸುವುದು ನಮ್ಮ ಆದ್ಯತೆಯಾಗಿದೆ. ಕೊನೆಯ ಹಂತದ ಪ್ರಯೋಗದಲ್ಲಿ ಪರಿಣಾಮಕಾರಿ ಮತ್ತು ಸುರಕ್ಷತೆಯ ದತ್ತಾಂಶಗಳು ಲಭಿಸಿದ ಬಳಿಕ ಅಗತ್ಯ ಅನುಮೋದನೆಗಳನ್ನು ಪಡೆದು 2021ರ ಎರಡನೇ ತ್ರೖೆಮಾಸಿಕದಲ್ಲಿ ಲಸಿಕೆ ಬಿಡುಗಡೆ ಮಾಡುವ ಗುರಿ ಹೊಂದಿದ್ದೇವೆ ಎಂದು ಭಾರತ್ ಬಯೋಟೆಕ್ನ ಅಂತರರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕ ಸಾಯಿ ಪ್ರಸಾದ್ ಮಾಹಿತಿ ನೀಡಿದ್ದಾರೆ. ಕೊವ್ಯಾಕ್ಸಿನ್ನ ಮೂರನೇ ಹಂತದ ಪ್ರಯೋಗ ಪ್ರಕ್ರಿಯೆ ನವೆಂಬರ್ನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. 13 ರಿಂದ 14 ರಾಜ್ಯಗಳ ಸುಮಾರು 30 ಕಡೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಲಸಿಕೆ ಅಭಿವೃದ್ಧಿಗಾಗಿ 350 ರಿಂದ 400 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಲಸಿಕೆ ಪೂರೈಕೆಗಾಗಿ ಇತರ ದೇಶಗಳೊಂದಿಗೂ ಪ್ರಾಥಮಿಕ ಚರ್ಚೆಯಲ್ಲಿದ್ದೇವೆ. ಲಸಿಕೆ ವೆಚ್ಚ ಇನ್ನೂ ಅಂತಿಮವಾಗಿಲ್ಲ ಎಂದಿದ್ದಾರೆ.
ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ಕರೊನಾ ರೋಗಿಗಳ ಚಿಕಿತ್ಸೆಯಲ್ಲಿ ಆಯುರ್ವೆದದ ಆಯುಷ್ ಕ್ವಾಥಾ ಮತ್ತು ಫಿಫಾಟ್ರೊಲ್ನಂತಹ ಮಾತ್ರೆಗಳು ಕೊಂಚ ಪರಿಣಾಮಕಾರಿ ಫಲಿತಾಂಶ ತೋರಿಸಿವೆ ಎಂದು ದೆಹಲಿಯ ಅಖಿಲ ಭಾರತ ಆಯುರ್ವೆದ ಸಂಸ್ಥೆಯ (ಎಐಐಎ) ವೈದ್ಯರ ತಂಡವೊಂದು ಹೇಳಿದೆ. ಮಾತ್ರೆಗಳು ಕರೊನಾ ರೋಗಿಗಳ ಸ್ಥಿತಿಯನ್ನು ಸುಧಾರಿಸುವುದಲ್ಲದೇ ಚಿಕಿತ್ಸೆಯ 6 ದಿನಗಳಲ್ಲಿ ರ್ಯಾಪಿಡ್ ಆಂಟಿಜೆನ್ ಪರೀಕ್ಷೆಯ ವರದಿಯನ್ನು ನೆಗೆಟಿವ್ ಆಗಿ ಪರಿವರ್ತಿಸುತ್ತವೆ ಎಂದು ವೈದ್ಯರು ಹೇಳಿದ್ದಾರೆ.
ಕರೊನಾ ಸೋಂಕಿಗೆ ಒಳಗಾಗಿದ್ದ ತಮಿಳುನಾಡಿನ ಕೃಷಿ ಸಚಿವ ಆರ್. ದೊರೈಕ್ಕನ್ನು (72) ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಮೃತರಾಗಿದ್ದಾರೆ. ಅ.13ರಂದು ಅವರಿಗೆ ಕರೊನಾ ದೃಢವಾಗಿತ್ತು. ತಂಜಾವೂರು ಜಿಲ್ಲೆಯ ಪಾಪನಾಶಂನಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ನಿಧನಕ್ಕೆ ತಮಿಳುನಾಡು ಸಿಎಂ, ರಾಜ್ಯಪಾಲರು ಸೇರಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮದುವೆಗೆ 200 ಜನಕ್ಕೆ ಅನುಮತಿ: ದೆಹಲಿಯಲ್ಲಿ ಮದುವೆ ಸಮಾರಂಭ ಗಳಲ್ಲಿ 200 ಮಂದಿ ಭಾಗಿಯಾಗಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇದಕ್ಕೂ ಮೊದಲು ಈ ಮಿತಿ 50 ಇತ್ತು. ಒಳಾಂಗಣ ಅಥವಾ ಹಾಲ್ಗಳಲ್ಲಿ ಅಲ್ಲಿನ ಸಾಮರ್ಥ್ಯದ ಶೇ. 50 ಜನರು ಮಾತ್ರ ಪಾಲ್ಗೊಳ್ಳಬೇಕು ಎಂದು ತಿಳಿಸಲಾಗಿದೆ.
ಬ್ರಿಟನ್ನಲ್ಲಿ ಕರೊನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಡಿಸೆಂಬರ್ 2ರವರೆಗೆ ಲಾಕ್ಡೌನ್ ಘೋಷಿಸಿದ್ದಾರೆ. ಹೊಸ ಪ್ರಕರಣಗಳ ಹೆಚ್ಚಳ ಮತ್ತು ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಪುಟ ಸದಸ್ಯರೊಂದಿಗೆ ಶುಕ್ರವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. ರೆಸ್ಟೋರೆಂಟ್ಗಳು ಮತ್ತು ಬಾರ್ಗಳು ನಾಲ್ಕು ವಾರಗಳವರೆಗೆ ಮುಚ್ಚಲ್ಪಡುತ್ತವೆ. ಸಾಂಸ್ಕೃತಿಕ, ಕ್ರೀಡೆ ಹಾಗೂ ಇತರ ಚಟುವಟಿಕೆಗಳನ್ನೂ ರದ್ದುಗೊಳಿಸಲಾಗಿದೆ.
ಭಾರತದಲ್ಲಿ ಕರೊನಾ ಪ್ರಾರಂಭವಾದಾಗಿನಿಂದ ಇದೇ ಮೊದಲ ಬಾರಿ ತಿಂಗಳವಾರು ಹೊಸ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ. ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್ನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಶೇಕಡ 30ರಷ್ಟು ಇಳಿಕೆ ಕಂಡಿದೆ. ಸಾವು ಪ್ರಮಾಣವೂ ಸಹ ಈ ಹಿಂದಿಗಿಂತಲೂ ಶೇಕಡ ಅರ್ಧದಷ್ಟು ಇಳಿಕೆ ಕಂಡಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ನಡೆಸಿದ 18 ರ‍್ಯಾಲಿಗಳು ಸುಮಾರು 30 ಸಾವಿರ ಹೊಸ ಕರೊನಾ ಪ್ರಕರಣಗಳು ಹಾಗೂ 700ಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾಗಬಹುದು ಎಂದು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಅಂದಾಜಿಸಿದ್ದಾರೆ. ಜೂ.20 ರಿಂದ ಸೆ.22ರ ನಡುವೆ ಟ್ರಂಪ್ ನಡೆಸಿದ 18 ರ‍್ಯಾಲಿಗಳ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಆ ಸ್ಥಳಗಳಲ್ಲಿ ಹೆಚ್ಚಿನ ಸಾವು ಮತ್ತು ಪ್ರಕರಣಗಳು ವರದಿಯಾಗಲಿವೆ ಎಂದು ಹೇಳಲಾಗಿದೆ. ಈ ಕುರಿತ ವರದಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡೆನ್, ‘ಸಂಶೋಧಕರೆ ಅಧ್ಯಕ್ಷ ಟ್ರಂಪ್ ನಿಮ್ಮ ವರದಿಯ ಬಗ್ಗೆ ಹೆದರುವುದಿಲ್ಲ’ ಎಂದಿದ್ದಾರೆ.