ನಟ ದರ್ಶನ್​ಗಿಲ್ಲ ರಿಲೀಫ್​; ಮನೆಯೂಟ ಕೋರಿ ಸಲ್ಲಿಸಿದ್ದ ಅರ್ಜಿ ಮುಂದೂಡಿದ ಕೋರ್ಟ್​

darshan
Published on

ಬೆಂಗಳೂರು: ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸ್ಸೇಜ್​ ಮಾಡಿದ ಎಂಬ ಕಾರಣಕ್ಕೆ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ಹತ್ಯೆ ಮಾಡಿ ಎರಡನೇ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್​ಗೆ ದಿನ ಕಳೆದಂತೆ ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಿದ್ದು, ಮನೆಯೂಟ ಕೋರಿ ನಟ ದರ್ಶನ್​ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ಹೈಕೋರ್ಟ್​ ಸೆಪ್ಟೆಂಬರ್​ 05ರಂದು ವಿಚಾರಣೆ ನಡೆಸುವುದಾಗಿ ಮುಂದೂಡಿದೆ.

ಆರೋಗ್ಯ ಸಮಸ್ಯೆಯ ಕಾರಣ ನೀಡಿ ನಟ ದರ್ಶನ್​ ಮನೆಯೂಟ, ಹಾಸಿಗೆ ಹಾಗೂ ಕೆಲವು ಪುಸ್ತಕಗಳನ್ನು ನೀಡುವಂತೆ ಕೋರಿ ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಜೈಲಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಏಕಸದಸ್ಯ ಪೀಠ ಸೂಚಿಸಿತ್ತು. ಅಂತೆಯೇ ನಿರ್ಧಾರವನ್ನು ಹೈಕೋರ್ಟ್​ಗೆ ನೀಡಿದ್ದ ಜೈಲು ಅಧಿಕಾರಿಗಳು ಜೈಲು ಊಟ ಸಾಕೆಂದಿದ್ದರು. ಜೈಲಿನ ವೈದ್ಯಾಧಿಕಾರಿ ನೀಡಿದ್ದ ವರದಿಯನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

Darshan

ವೈದ್ಯಾಧಿಕಾರಿಗಳು ದರ್ಶನ್​ಗೆ ಮನೆ ಊಟವನ್ನು ನಿರಾಕರಿಸಿದ್ದಾರೆ ಎಂದು ಹೈಕೋರ್ಟ್​ನಲ್ಲಿ ರಾಜ್ಯ ಅಭಿಯೋಜಕ ಬೆಳ್ಳಿಯಪ್ಪ ಹೇಳಿದರು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿರುವುದಾಗಿ ತಿಳಿಸಿದರು. ಆದರೆ ದರ್ಶನ್ ಪರ ವಕೀಲರು ವೈದ್ಯಾಧಿಕಾರಿಗಳ ವರದಿ ನೋಡಿ ವಾದಮಂಡನೆಗೆ ಸಮಯ ಬೇಕಾಗುತ್ತದೆಯಾದ್ದರಿಂದ ವಾದ ಮಂಡಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಅಂತೆಯೇ ನ್ಯಾಯಾಧೀಶರು ವಿಚಾರಣೆಯನ್ನು ಸೆಪ್ಟೆಂಬರ್ 5 ಕ್ಕೆ ಮುಂದೂಡಿದರು.

ಇತ್ತ ನಟ ದರ್ಶನ್​ಗೆ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿರುವ ನಡುವೆಯೇ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಹಾಗೂ ಏಳನೇ ಆರೋಪಿ ಅನುಕುಮಾರ್​ ಜಾಮೀನು ಕೋರಿ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಆಗಸ್ಟ್​ 22ರಂದು ನಡೆಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net