‘ಸೌಜನ್ಯಾ ಪ್ರಕರಣ’ ಶಿಕ್ಷೆ ಕೊಡಿಸುವವರೆಗೂ ಹೋರಾಟಕ್ಕೆ ಮುಂದಾಗಿ

31blrp6-varun m.t
ವರುಣ್.ಎಂ,ಟಿ, ಜಿಲ್ಲಾ ಉಪಾಧ್ಯಕ್ಷ ರಾಷ್ಟ್ರ ವಿದ್ಯಾರ್ಥಿಗಳ ಒಕ್ಕೂಟ ಹಾಸನ
Published on

ಬೇಲೂರು: 2012ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸುವವರೆಗೂ ಹೋರಾಟಕ್ಕೆ ಮುಂದಾಗಬೇಕು ಎಂದು ಭಾರತ ರಾಷ್ಟ್ರ ವಿದ್ಯಾರ್ಥಿಗಳ ಒಕ್ಕೂಟದ ಹಾಸನ ಜಿಲ್ಲಾ ಉಪಾಧ್ಯಕ್ಷ ಎಂ.ಟಿ.ವರುಣ್‌ ತಿಳಿಸಿದ್ದಾರೆ.

2012ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಅಂದಿನ ದಿನಗಳಲ್ಲಿ ದೊಡ್ಡ ಸದ್ದು ಮಾಡಿದ್ದಲ್ಲದೆ, ಹಲವಾರು ಹೋರಾಟಗಳು ನಡೆದಿವೆ. ಅಲ್ಲದೆ ಈಗ ಮತ್ತೆ ಸುದ್ದಿಯಲ್ಲಿದೆ. ಯೂ ಟ್ಯೂಬರ್ ಸಮೀರ್ ಎಂಬುವವರು ಸೌಜನ್ಯಾ ಪ್ರಕರಣ ಕುರಿತು ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋ ಮಾಡಿದ್ದ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಯೂ ಟ್ಯೂಬರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಸಮೀರ್ ವಿರುದ್ಧದ ಪ್ರಕರಣಗಳು ವಿವಾದಕ್ಕೆ ಕಾರಣವಾಗಿದ್ದು, ಅವರ ಬಂಧನಕ್ಕೆ ಹೊರಟ ಪೊಲೀಸರಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಹೋರಾಟ ರೂಪಿಸುವ ಅವಶ್ಯಕತೆ ಇದ್ದು, ಇದೇ ಉದ್ದೇಶದಿಂದ ಸಮಾನ ಮನಸ್ಕ ಸಂಘಟನೆಗಳು ಸಮಾಲೋಚನೆ ನಡೆಸಿ, ಮಹತ್ವದ ತೀರ್ಮಾನಗಳನ್ನು ಕೈಗೊಂಡಿವೆ. ನ್ಯಾಯಕ್ಕಾಗಿ ಹೋರಾಟ ಮುಂದುವರಿಯುತ್ತಿದೆ. ಆದ್ದರಿಂದ ನಾವು ಸೌಜನ್ಯಾ ಪ್ರಕರಣದ ಸಲುವಾಗಿ ಮುಂದಿನ ದಿನಗಳಲ್ಲಿ ಹೋರಾಟಕ್ಕಿಳಿದು ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net