ಅತ್ಯಾಚಾರ ಸಂತ್ರಸ್ತೆಗೆ ಭಾರತೀಯ ಸಂಸ್ಕೃತಿ ಪಾಠ ಮಾಡಿದ ಹೈಕೋರ್ಟ್​

High Court 13 Jan 20
Published on

ಬೆಂಗಳೂರು: ‘ಅತ್ಯಾಚಾರದಿಂದ ಸುಸ್ತಾಗಿ ವಿಶ್ರಾಂತಿ ಮೊರೆ ಹೋಗಿದ್ದ ಕಾರಣ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲು ಸಾಧ್ಯವಾಗಲಿಲ್ಲ’ ಎಂದು ಮಹಿಳೆಯೊಬ್ಬರು ನೀಡಿರುವ ಕಾರಣವನ್ನು ಅಲ್ಲಗಳೆದಿರುವ ಹೈಕೋರ್ಟ್, ಭಾರತೀಯ ನಾರಿಯರು ತಮ್ಮ ಮೇಲೆ ಬಲಾತ್ಕಾರವಾದಾಗ ನಡೆದು ಕೊಳ್ಳುವ ರೀತಿ ಇದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಅತ್ಯಾಚಾರ ಪ್ರಕರಣದ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನಗರದ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ರಾಕೇಶ್ (27) ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ಮಹಿಳೆ ನೀಡಿರುವ ಸಮಜಾಯಿಷಿಯನ್ನು ತಳ್ಳಿ ಹಾಕಿದೆ.

ಮಹಿಳೆಯ ಆರೋಪಗಳನ್ನು ಈ ಹಂತದಲ್ಲೇ ನಂಬುವುದು ಕಷ್ಟ. ಅತ್ಯಾಚಾರದ ಗಂಭೀರ ಆರೋಪವಿದೆ ಎಂಬ ಒಂದೇ ಕಾರಣಕ್ಕೆ ಅರ್ಜಿದಾರರ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗದು ಎಂದಿರುವ ಪೀಠ, ಆರೋಪಿಯು 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಒದಗಿಸಬೇಕು. ಸಾಕ್ಷ್ಯ ನಾಶಪಡಿಸಬಾರದು, ತನಿಖೆಗೆ ಸಹಕರಿಸಬೇಕು, ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೇ ಹೊರಹೋಗುವಂತಿಲ್ಲ. 2 ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಬೇಕೆಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.

ನಂಬಲು ಸಾಧ್ಯವಿಲ್ಲ: 2 ವರ್ಷಗಳಿಂದ ಸಂತ್ರಸ್ತ ಮಹಿಳೆಯ ಮಾಲಿಕತ್ವದ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿರುವ ಆರೋಪಿ, ಮೊದಲಿಂದಲೂ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆಂದು ಆರೋಪಿಸಲಾಗಿದೆ. ಆ ಸಂದರ್ಭದಲ್ಲೇ ಮಹಿಳೆ ಏಕೆ ಕಾನೂನಿನ ಮೊರೆ ಹೋಗಲಿಲ್ಲ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಸಂಧಾನ ಮಾಡಿಕೊಳ್ಳಲು ಒಪ್ಪಿದರೆ ದೂರು ಹಿಂಪಡೆದೆಯುವುದಾಗಿ ಮಹಿಳೆ ಪತ್ರ ಬರೆದಿದ್ದಾರೆಂಬ ಆರೋಪವೂ ಇದೆ. ಇದನ್ನು ಗಮನಿಸಿದರೆ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆಂಬ ಮಹಿಳೆ ಆರೋಪಗಳನ್ನು ಈ ಹಂತದಲ್ಲೇ ನಂಬಲು ಸಾಧ್ಯವಿಲ್ಲ ಎಂದು ಹೇಳಿದೆ.

ಮೇಲಾಗಿ, ಮಹಿಳೆಯೇ ಆರೋಪಿಯ ಜತೆ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಕುಡಿದು ಬಂದು ಕಾರು ಹತ್ತಿದ ಎನ್ನುವ ಮಹಿಳೆ, ಆ ವೇಳೆ ಪೊಲೀಸರನ್ನಾಗಲೀ ಸಾರ್ವಜನಿಕರನ್ನಾಗಲೀ ಸಹಾಯಕ್ಕಾಗಿ ಕೂಗಿರುವ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ. ಕೃತ್ಯ ನಡೆದ ದಿನ ರಾತ್ರಿ 11 ಗಂಟೆಗೆ ಕಚೇರಿಗೆ ಹೋಗಿದ್ದೇಕೆ ಎಂಬ ಬಗ್ಗೆಯೂ ವಿವರಿಸಿಲ್ಲ. ಅತ್ಯಾಚಾರ ನಡೆದ ದಿನ ದೂರು ಕೊಡದ್ದಕ್ಕೆ ನೀಡಿರುವ ಸಕಾರಣವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ಸಂತ್ರಸ್ತ ಮಹಿಳೆ (42) ಬೆಂಗಳೂರಿನಲ್ಲಿ ನಡೆಸುತ್ತಿರುವ ಕನ್ಸನ್ಸಲ್ಟೆನ್ಸಿ ಸಂಸ್ಥೆಯಲ್ಲಿ ಆರೋಪಿ ರಾಕೇಶ್ 2 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ. ಇಬ್ಬರ ನಡುವೆ ಆತ್ಮೀಯತೆ ಮೂಡಿತ್ತು. 2020ರ ಮೇ 2ರಂದು ಮಹಿಳೆ ರಾಜರಾಜೇಶ್ವರಿನಗರ ಠಾಣೆಗೆ ತೆರಳಿ, ಏ.22ರಂದು ರಾಕೇಶ್ ತನ್ನೊಂದಿಗೆ ಕಾರಿನಲ್ಲಿ ಕಚೇರಿಗೆ ಬಂದು ಅತ್ಯಾಚಾರ ಎಸಗಿದ. ಏ.23ರಂದು ನನ್ನ ನಗ್ನ ಚಿತ್ರಗಳನ್ನು ನನಗೇ ಕಳುಹಿಸಿದ. ಇದನ್ನು ಪ್ರಶ್ನಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರು ದಾಖಲಿಸಿದ್ದರು. ನಿರೀಕ್ಷಣಾ ಜಾಮೀನು ಕೋರಿ ರಾಕೇಶ್ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net