

ಬೆಂಗಳೂರು: ಜೀವನ್ಬಿಮಾನಗರ ಪೊಲೀಸರಿಂದ ಬಂಧನಕ್ಕೊಳಗಾದ ರೌಡಿಶೀಟರ್ಗೆ ಕರೊನಾ ದೃಢಪಟ್ಟಿದ್ದು, ಆತನ ಸಂಪರ್ಕದಲ್ಲಿದ್ದ ಪೊಲೀಸರಿಗೆ ಆತಂಕ ಶುರುವಾಗಿದೆ. ಅಲ್ಲದೆ ಆತನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದ ಹಿನ್ನೆಲೆಯಲ್ಲಿ ಮೇಯೋಹಾಲ್ ಕೋರ್ಟ್ನ ಶನಿವಾರದ ಕಲಾಪ ರದ್ದುಪಡಿಸಲಾಗಿದೆ.
ಕರೊನಾ ದೃಢಪಟ್ಟ ರೌಡಿಯನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಐದು ದಿನಗಳ ಹಿಂದೆ ಜೆ.ಬಿ. ನಗರ ಠಾಣೆಯ ರೌಡಿಶೀಟರ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನು ಜೂ.1ರಂದು ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಜೂ.2ರಂದು ಆರೋಪಿಗಳನ್ನು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿ ಶುಕ್ರವಾರ ಬಂದಿದ್ದು, ರೌಡಿಶೀಟರ್ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಆತನೊಂದಿಗಿದ್ದ ಮತ್ತಿಬ್ಬರು ಆರೋಪಿಗಳಿಗೆ ನೆಗೆಟಿವ್ ಬಂದಿದೆ. ಇವರನ್ನು ಕ್ವಾರಂಟೈನ್ಗೆ ಒಳಪಡಿಸಿ ಸಿ.ವಿ. ರಾಮನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆರೋಪಿ ಗಳೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 20 ಪೊಲೀಸ್ ಸಿಬ್ಬಂದಿಯನ್ನು ಏರ್ಪೋರ್ಟ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಜೆ.ಬಿ. ನಗರ ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಆರೋಗ್ಯ ಇಲಾಖೆ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಇದೀಗ ಕರೊನಾ ಸೋಂಕಿಗೆ ಒಳಗಾದ ರೌಡಿಶೀಟರ್ನ ಸಂಪರ್ಕದಲ್ಲಿದ್ದ ಹಲವು ಜನರಲ್ಲೂ ಆತಂಕಕ್ಕೆ ಕಾರಣವಾಗಿದೆ.
ಸಮುಚ್ಚಯ ಸ್ಯಾನಿಟೈಸ್
ಆರೋಪಿಗೆ ಕರೊನಾ ಇರುವ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಮೇಯೋಹಾಲ್ ಕೋರ್ಟ್ನ ಎಲ್ಲ ಕಲಾಪಗಳನ್ನು ರದ್ದುಪಡಿಸಲಾಯಿತು. ಶನಿವಾರ ಯಾರೊಬ್ಬರೂ ಕೋರ್ಟ್ ಆವರಣ ಪ್ರವೇಶಿಸಬಾರದೆಂದು ರಿಜಿಸ್ಟ್ರಾರ್ ಜನರಲ್ ಸೂಚಿಸಿದ್ದಾರೆ. ನ್ಯಾಯಾಲಯದ ಸಂಪೂರ್ಣ ಸಮುಚ್ಚಯ ಸ್ಯಾನಿಟೈಸ್ ಮಾಡುವ ಉದ್ದೇಶದಿಂದ ಕಲಾಪ ರದ್ದುಪಡಿಸಲಾಗಿದೆ. ಅರ್ಜಿಗಳ ಫಿಸಿಕಲ್ ಫೈಲಿಂಗ್, ಕೋರ್ಟ್ ಶುಲ್ಕ ಪಾವತಿ ಇನ್ನಿತರ ಪ್ರಕ್ರಿಯೆಗೆ ನೀಡಿದ್ದ ಅನುಮತಿಯನ್ನೂ ರದ್ದುಪಡಿಸಲಾಗಿದೆ. ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ತುರ್ತು ಪ್ರಕರಣಗಳನ್ನು ವಿಡಿಯೋ ಗೋಷ್ಠಿ ಮೂಲಕ ವಿಚಾರಣೆ ನಡೆಸಲಿದ್ದಾರೆ.