

ಬೆಂಗಳೂರು: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಕಾಂಗ್ರೆಸ್ ಶಾಸಕ (Congress MLA) ಸತೀಶ್ ಸೈಲ್ಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.
ಅದಿರು ನಾಪತ್ತೆ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ಬಳಿಕ ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ (Congress MLA) ಸೈಲ್ಗೆ 7 ವರ್ಷಗಳ ಶಿಕ್ಷೆ ಹಾಗೂ 44 ಕೋಟಿ ರೂಪಾಯಿ ದಂಡವನ್ನು ವಿಧಿಸಿದ್ದಾರೆ.
ಸತೀಶ್ ಸೈಲ್ ವಿರುದ್ಧ ಬೆಲೆಕೇರಿ ಅದಿರು ಅಕ್ರಮ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣ ದಾಖಲಾಗಿತ್ತು. ಸೈಲ್ ವಿರುದ್ಧ ಸುದೀರ್ಘ ವಿಚಾರಣೆ ನಡೆದಿತ್ತು. ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿತ್ತು. ಇದೀಗ ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ.
ಸತೀಶ್ ಸೈಲ್ ಗೆ ವಂಚನೆ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆಯಾದರೆ, ಒಳಸಂಚು ಆರೋಪದಡಿ 5 ಮತ್ತು ಕಳ್ಳತನ ಆರೋಪದಡಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇದೇ ವೇಳೆ ಕೋರ್ಟ್ ದೊಡ್ಡ ಮಟ್ಟದ ದಂಡವನ್ನು ವಿಧಿಸಿದೆ. ಒಟ್ಟಾರೆ 44 ಕೋಟಿಗೂ ಹೆಚ್ಚು ದಂಡವನ್ನು ಕೋರ್ಟ್ ವಿಧಿಸಿದೆ.
ನಿಯಮಗಳ ಪ್ರಕಾರ ಎರಡು ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯಾದರೆ ಶಾಸಕ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಅಂತಹದರಲ್ಲಿ ಸತೀಶ್ ಸೈಲ್ ಗೆ 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಹೀಗಾಗಿ ಅವರ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ.