

Death Note: ಪ್ರೀತಿ ಎಂಬುದೇ ಹಾಗೇ. ಯಾವಾಗ, ಯಾರ ಮೇಲೆ ಪ್ರೀತಿ ಎಂಬ ಹೂವು ಚಿಗುರಿ, ಅರಳುತ್ತದೆ ಎಂದು ತಿಳಿಯೋದಿಲ್ಲ. ಪ್ರೇಮದ ಕಣ್ಣೋಟ, ಪ್ರೀತಿಯ ಹೃದಯ ಬಡಿತ ನಾಡಿ ಮಿಡಿತವಾಗಿ ಪ್ರೇಮಿಗಳನ್ನು ಕಾಡುವುದು ತೀರ ಸಾಮಾನ್ಯ ಸಂಗತಿ. ಕೆಲವರಿಗೆ ತಾವು ಪ್ರೀತಿಸಿದ ಹುಡುಗ ಅಥವಾ ಹುಡುಗಿ ಸಿಕ್ಕರೆ, ಇನ್ನೂ ಕೆಲವರಿಗೆ ತಮ್ಮಿಷ್ಟದ ಜೀವಗಳು ಪ್ರೀತಿಗೆ ಮಾತ್ರ ಸೀಮಿತ ಆಗುತ್ತಾರೆಯೇ ಹೊರತು ದಾಂಪತ್ಯ ಜೀವನದವರೆಗೂ ಹೋಗುವುದಿಲ್ಲ. ಇದು ಅತೀವ ದುಃಖಕ್ಕೆ ಕಾರಣವಾಗುತ್ತದೆ. ಆದರೆ, ಪ್ರೀತಿ, ಪ್ರೀತಿಸಿದವರು ಸಿಕ್ಕರೂ ಬಾಳಲು ಸಾಧ್ಯವಾಗದೆ ಇಬ್ಬರು ಯುವ ಪ್ರೇಮಿಗಳು ಸಾವಿಗೆ ಶರಣಾದ ಘಟನೆಯೊಂದು ಹೆತ್ತವರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.
ಇಬ್ಬರು ಪರಸ್ಪರ ಪ್ರೀತಿಸಿದ್ದು ನಿಜ, ಮದುವೆ ಆಗಲು ಸಿದ್ಧವಾಗಿದ್ದು ನಿಜ. ಆದರೆ, ಮನೆಯವರ ಒಪ್ಪಿಗೆ ಸಿಗದೆ ಇದ್ದದ್ದು ಇಬ್ಬರ ನೋವಿಗೆ ಕಾರಣವಾಯಿತು. ಪ್ರೇಮ ಸಂಬಂಧದ ಬಗ್ಗೆ ಪೋಷಕರಿಗೆ ತಿಳಿಸಿದರೂ ಮನಸು ಬದಲಾಯಿಸದ ಮನೆಯವರು, ಯಾವುದೇ ಕಾರಣಕ್ಕೂ ಈ ಮದುವೆಗೆ ಒಪ್ಪಿಗೆ ನೀಡುವುದಿಲ್ಲ ಎಂದು ಖಡಕ್ ಆಗಿ ತಿಳಿಸಿದ್ದರು. ತಂದೆ-ತಾಯಿಯನ್ನು ಎದುರು ಹಾಕಿಕೊಂಡು ಮದುವೆ ಆಗುವ ಧೈರ್ಯವಿಲ್ಲದೆ, ಅತ್ತ ಮನೆಬಿಟ್ಟು ಹೋಗಲಾಗದ ಪರಿಸ್ಥಿತಿಯಲ್ಲಿ ಸಿಲುಕಿದ ಜೋಡಿ, ಸಾವಿನಲ್ಲಿ ಒಂದಾಗುವ ಕಟು ನಿರ್ಧಾರ ಕೈಗೊಂಡು, ದೂರದ ಊರಿಗೆ ತೆರಳಿ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ವರದಿಯಾಗಿದೆ.
ಪೋಷಕರ ಕಣ್ತಪ್ಪಿಸಿ ಓಡಿಬಂದ ಇಬ್ಬರು ನೆಲ್ಲೂರಿನ ಒಂದು ಲಾಡ್ಜ್‌ನಲ್ಲಿ ರೂಮ್ ಪಡೆದು, ಅಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಸಲಿಗೆ ಡೆತ್ನೋಟ್ನಲ್ಲಿ, "ಕ್ಷಮಿಸಿ, ಅಮ್ಮ-ಅಪ್ಪ. ನೀವು ನಮ್ಮ ಪ್ರೀತಿಯನ್ನು ಯಾವುದೇ ರೀತಿಯಲ್ಲಿಯೂ ಸ್ವೀಕರಿಸಲು ಸಿದ್ಧವಿಲ್ಲ. ಹೀಗಾಗಿ ನಾವು ಮುಂದಿನ ಜನ್ಮದಲ್ಲಿ ಮತ್ತೆ ಹುಟ್ಟಿ, ಎಲ್ಲರ ಒಪ್ಪಿಗೆ ಪಡೆದು ಮದುವೆಯಾಗುತ್ತೀವಿ" ಎಂದು ಬರೆದು, ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಮೃತ ಪ್ರೇಮಿಗಳನ್ನು ಪೂರ್ವ ಗೋದಾವರಿ ಜಿಲ್ಲೆಯ ಕೊವ್ವೂರಿನ ಬಚು ಜೋಸೆಫ್ ರತ್ನಕುಮಾರ್ (23) ಮತ್ತು ಕೃಷ್ಣ ಜಿಲ್ಲೆಯ ಕೈಕಲೂರು ಮಂಡಲದ ಆಟಪಾಕದ ಚಿಲ್ಲುಮುಂಠ ಶ್ರಾವಣಿ (21) ಎಂದು ಗುರುತಿಸಲಾಗಿದೆ. ಬಿ.ಟೆಕ್ ಓದುತ್ತಿರುವಾಗ ಇಬ್ಬರ ನಡುವೆ ಸ್ನೇಹ ಬೆಳೆದು, ನಂತರದಲ್ಲಿ ಸ್ನೇಹ ಪ್ರೀತಿಗೆ ತಿರುಗಿದೆ. ನೆಲ್ಲೂರಿಗೆ ಬಂದ ಜೋಡಿ, ಕಾಲೇಜಿನಲ್ಲಿ ಕೌನ್ಸೆಲಿಂಗ್ ಇದೆ ಎಂದು ಹೇಳಿ ಲಾಡ್ಜ್‌ನಲ್ಲಿ ಉಳಿಯುವುದಾಗಿ ಹೇಳಿದ್ದಾರೆ. ಏ.23ರಂದು ಲಾಡ್ಜ್ ಕ್ಲೀನರ್ ರೂಮ್ ಸ್ವಚ್ಛಗೊಳಿಸಲು ಬಾಗಿಲು ತಟ್ಟಿದ್ದಾನೆ. ಆದರೆ, ಒಳಗಿನಿಂದ ಯಾವುದೇ ಶಬ್ದ ಬರದೆ ಇರುವುದನ್ನು ಗಮನಿಸಿ, ಗಾಬರಿಯಿಂದ ಮಾಲೀಕರಿಗೆ ಮಾಹಿತಿ ನೀಡಿದ್ದ.
ಇಬ್ಬರು ಹೊರಗೆ ಹೋಗಿರಬೇಕು ಎಂದು ಭಾವಿಸಿ ಸುಮ್ಮನಾದ ಮಾಲೀಕರು, ಕೋಣೆಯಿಂದ ಕೊಳತೆ ವಾಸನೆ ಬರುತ್ತಿದ್ದಂತೆ ಏ.25ರ ಮಧ್ಯಾಹ್ನ ಸಂತಪೇಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಇನ್ಸ್‌ಪೆಕ್ಟರ್ ಜಿ. ದಶರಥರಾಮಯ್ಯ ಮತ್ತು ಎಸ್‌ಐ ಬಾಲಕೃಷ್ಣ ಬಲವಂತವಾಗಿ ಬಾಗಿಲು ಮುರಿದು, ಒಳಗೆ ನೋಡಿದಾಗ ಹಾಸಿಗೆಯ ಮೇಲೆ ಜೋಸೆಫ್ ಮತ್ತು ಶ್ರಾವಣಿ ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದರು. ಪೋಷಕರಿಗೆ ಮಾಹಿತಿ ನೀಡಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ,(ಏಜೆನ್ಸೀಸ್).