

ನವದೆಹಲಿ: ಮದುವೆಗೂ ಮುನ್ನ ಅಥವಾ ನಂತರ ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್ ಫೋಟೋಶೂಟ್ ( Pre Wedding shoot ) ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್ ಫೋಟೋ ಮತ್ತು ವಿಡಿಯೋಗಳು ತುಂಬಾ ವಿಭಿನ್ನವಾಗಿರಬೇಕೆಂಬ ಕನಸನ್ನೂ ಹೊಂದಿರುತ್ತಾರೆ. ಸಾಧ್ಯವಾದಷ್ಟು ಸುಂದರವಾದ ತಾಣಗಳಲ್ಲಿ ಸೆರೆಹಿಡಿಯಬೇಕೆಂದು ಬಯಸುತ್ತಾರೆ. ಇನ್ನು ಕೆಲವು ಜೋಡಿ ತುಂಬಾ ವಿಭಿನ್ನವಾಗಿರಬೇಕೆಂದು ಸಾಹಸಕ್ಕೂ ಕೈಹಾಕುತ್ತಾರೆ. ಆದರೆ, ಇಲ್ಲೊಂದು ಜೋಡಿಯ ಫೋಟೋಶೂಟ್ ಎಲ್ಲರ ಮೆಚ್ಚುಗೆ ಪಡೆಯುವ ಬದಲು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ರೈತ, ಪೊಲೀಸ್ ಹೀಗೆ ಅನೇಕ ಪರಿಕಲ್ಪನೆಯಲ್ಲಿ ಫೋಟೋಶೂಟ್ ಮಾಡಿಸುತ್ತಾರೆ. ಈ ಮೂಲಕ ತಾವು ಮಾಡುವ ವೃತ್ತಿಗೆ ಗೌರವ ಸೂಚಿಸುವುದನ್ನು ನಾವು ನೋಡಿದ್ದೇವೆ. ಇನ್ನು ಕೆಲವರು ಸುಂದರವಾದ ತಾಣಗಳಲ್ಲಿ ಮನಮೋಹಕ ದೃಶ್ಯಗಳನ್ನು ಸೆರೆಹಿಡಿಯುತ್ತಾರೆ. ಆದರೆ, ಇಲ್ಲೊಂದು ಜೋಡಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ವೇಳೆ ಲಿಪ್ಲಾಕ್ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿರುವ ನವಜೋಡಿ ಒಬ್ಬರನ್ನೊಬ್ಬರನ್ನು ತಬ್ಬಿಕೊಂಡು ಗಾಢವಾಗಿ ಚುಂಬಿಸುತ್ತಿರುವ ದೃಶ್ಯವನ್ನು ಕಾಣಬಹುದು. ಆದರೆ, ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ವೆಡ್ಡಿಂಗ್ ಶೂಟ್ ಹೆಸರಿನಲ್ಲಿ ಮದುವೆಯಾಗುವ ಜೋಡಿಗಳು ತಮ್ಮ ಮಿತಿಯನ್ನು ಮೀರುತ್ತಿದ್ದಾರೆ. ಈ ರೀತಿಯ ವರ್ತನೆ ಸರಿಯಲ್ಲ ಎಂದು ಆಕ್ರೊಶ ಹೊರಹಾಕಿದ್ದಾರೆ.
ನಾಲ್ಕು ಗೋಡೆಗಳ ನಡುವೆ ಇರಬೇಕಾದನ್ನು ಈ ರೀತಿ ಪ್ರದರ್ಶಿಸುವುದು ಸರಿಯಲ್ಲ. ನಮ್ಮದು ಭಾರತೀಯ ಸಂಸ್ಕೃತಿ. ಇಲ್ಲಿ ಮದುವೆಗೆ ಅದರದೇಯಾದ ವಿಶೇಷ ಗೌರವ ಇದೆ. ನೀವುಗಳು ಈ ರೀತಿ ವಿಡಿಯೋ ಮಾಡಿ ಗೌರವವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದೀರಿ. ಇಂಥದ್ದಕ್ಕೆ ಬೆಂಬಲ ನೀಡಿದ ಪಾಲಕರಿಗೂ ನಾಚಿಕೆಯಾಗಬೇಕು ಎಂದು ನೆಟ್ಟಿಗರು ವೈರಲ್ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್)