ಒಂದೇ ಮಹಿಳೆ ಎರಡು ಕಡೆ ಸಾವು! ಇದು ಹೇಗೆ ಸಾಧ್ಯ? ಭಾರೀ ಚರ್ಚೆಗೆ ಗ್ರಾಸವಾದ ವಿಚಿತ್ರ ಪ್ರಕರಣ | Strange Case

Strange Case
Published on

ಹೈದರಾಬಾದ್​: ಯಾರೇ ಆಗಿರಲಿ ಒಬ್ಬರು ಒಂದೇ ಸ್ಥಳದಲ್ಲಿ ಮಾತ್ರ ಸಾಯುಲು ಸಾಧ್ಯ. ಆದರೆ, ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ( Strange Case ) ಮಹಿಳೆಯೊಬ್ಬರು ಎರಡು ಸ್ಥಳಗಳಲ್ಲಿ ಮೃತಪಟ್ಟಿದ್ದಾರೆ ಅಂದರೆ ನೀವು ನಂಬುತ್ತೀರಾ? ಒಬ್ಬ ಮನುಷ್ಯ ಒಮ್ಮೆ ಮಾತ್ರ ತಾನೇ ಸಾಯೋದು ಆದರೆ, ಮಹಿಳೆಯ ವಿಚಾರದಲ್ಲಿ ಹೀಗ್ಯಾಕಾಯಿತು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಜುಕ್ಕಲ್ ಮಂಡಲದ ಮೊಹಮ್ಮದಬಾದ್ ಗ್ರಾಮದ ಮಹಿಳೆ ಕಳೆದ ಆಗಸ್ಟ್​ 10ರಂದು ಮೃತಪಟ್ಟರು. ಆಕೆಯ ಪತಿಗೆ ಇಬ್ಬರು ಪತ್ನಿಯರು. ಮೃತ ಮಹಿಳೆಗೆ ಮಕ್ಕಳಿಲ್ಲ. ಕೆಲ ದಿನಗಳಿಂದ ಅಸ್ವಸ್ಥಳಾಗಿದ್ದ ಆಕೆಯನ್ನು ಸಂಗಾರೆಡ್ಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಳು. ತನ್ನ ಸಹೋದರಿ ಮೃತಪಟ್ಟಿದ್ದಾಳೆ ಎಂದು ಆ.12ರಂದು ಆಕೆಯ ಸಹೋದರ ಸಂಗಾರೆಡ್ಡಿ ಪುರಸಭೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಗಾರೆಡ್ಡಿ ನಗರಸಭೆಯು ಆ.17ರಂದು ಮಹಿಳೆಗೆ ಮರಣ ಪ್ರಮಾಣ ಪತ್ರ ನೀಡಿತು.

ಇದೇ ಸಂದರ್ಭದಲ್ಲಿ ಆಕೆಯ ಗಂಡ, ಮರಣ ಪ್ರಮಾಣ ಪತ್ರಕ್ಕಾಗಿ ಸೆ.5ರಂದು ಮೊಹಮ್ಮದಾಬಾದ್‌ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿದ್ದ. ಪಂಚಾಯಿತಿ ಕಾರ್ಯದರ್ಶಿ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಅದರ ಪ್ರಕಾರ ಸೆಪ್ಟಂಬರ್ 25 ರಂದು ಮಹಿಳೆ ಮೊಹಮ್ಮದಾಬಾದ್‌ನಲ್ಲಿ ಸಾವಿಗೀಡಾಗಿದ್ದಾಳೆ ಎಂದು ತಿಳಿಸಲಾಗಿದೆ.

ಇಲ್ಲಿ ಟ್ವಿಸ್ಟ್ ಏನೆಂದರೆ ಮರಣ ಪ್ರಮಾಣ ಪತ್ರದಲ್ಲಿ ಮೃತಳ ಪತಿಯ ಹೆಸರನ್ನು ಬದಲಾಯಿಸಲಾಗಿದೆ. ಒಂದೇ ಮಹಿಳೆ ಎರಡೆರಡು ಸ್ಥಳಗಳಲ್ಲಿ ಮೃತಪಟ್ಟಿದ್ದಾಳೆ ಎಂದು ಮರಣ ಪ್ರಮಾಣ ಪತ್ರ ಹೇಳುತ್ತದೆ. ಇಬ್ಬರ ಕುಟುಂಬದವರು ಮೃತಳ ಹೆಸರಿಗೆ ಬರುವ ಒಂದು ಎಕರೆ ಜಮೀನಿಗಾಗಿ ಅಧಿಕಾರಿಗಳಿಗೆ ಲಂಚ ಕೊಟ್ಟು ನಕಲಿ ಪ್ರಮಾಣ ಪತ್ರ ಪಡೆದಿದ್ದಾರೆಂದು ತಿಳಿದುಬಂದಿದೆ.

ಇಬ್ಬರು ನಗರಸಭೆ ಅಧಿಕಾರಿಗಳು ಲಂಚದ ಆಸೆಗೆ ಸುಳ್ಳು ದಾಖಲೆ ನೀಡಿರುವುದು ಕಂಡುಬಂದಿದೆ. ಒಂದು ಎಕರೆ ಜಮೀನನ್ನು ಮರಣ ಪ್ರಮಾಣ ಪತ್ರಗಳೊಂದಿಗೆ ಮಹಿಳೆಯ ಹೆಸರಿಗೆ ನೋಂದಣಿ ಮಾಡಲು ಎರಡೂ ಕುಟುಂಬಗಳು ಕಂದಾಯ ಕಚೇರಿಯ ಮೆಟ್ಟಿಲು ಹತ್ತಲು ಸಿದ್ಧವಾಗಿದ್ದವು. ಮತ್ತೊಂದೆಡೆ ಸ್ಥಳೀಯರು ಈ ಸಂಬಂಧ ದೂರು ನೀಡಿದ್ದರು. ಸಂಗಾರೆಡ್ಡಿ ಜಿಲ್ಲೆ ಮತ್ತು ಮೊಹಮ್ಮದಾಬಾದ್ ಪಂಚಾಯತಿ ನೀಡಿದ ಮರಣ ಪ್ರಮಾಣ ಪತ್ರವನ್ನು ಅಧಿಕಾರಿಗಳಿಗೆ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಸುಳ್ಳು ದಾಖಲೆಗಳನ್ನು ಸಲ್ಲಿಸಿ ಮರಣ ಪ್ರಮಾಣ ಪತ್ರ ಪಡೆದಿರುವುದು ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಹೆಸರಿಗೆ ಜಮೀನು ಪರಭಾರೆ ಮಾಡುವುದನ್ನು ತಡೆಯುವಂತೆ ತಹಸೀಲ್ದಾರ್‌ಗೆ ಸೂಚಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮರಣ ಪ್ರಮಾಣ ಪತ್ರ ನೀಡಿದವರ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದೀಗ ಎರಡು ಕಡೆ ಒಬ್ಬ ಮಹಿಳೆ ಸಾವಿಗೀಡಾಗಿರುವ ಸುದ್ದಿ ಸ್ಥಳೀಯವಾಗಿ ಬಹಳ ಚರ್ಚೆಗೆ ಗ್ರಾಸವಾಗಿದೆ. ಹಣಕ್ಕಾಗಿ ಎಂತಹ ಕೀಳು ಕೆಲಸವನ್ನೂ ಮಾಡುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net