

ಉತ್ತರ ಪ್ರದೇಶ: ಮಾಟ, ಮಂತ್ರ, ದೆವ್ವ ಬಿಡಿಸುವಿಕೆ, ನರಬಲಿ ಕೊಡುವ ಪ್ರವೃತ್ತಿಗಳಿಗೆ ಇಂದಿಗೂ ದಾಸರಾಗಿರುವ ಕೆಲವು ಜನರು, ಇಂತಹ ಮೂಢನಂಬಿಕೆಗಳಿಂದ ತಮ್ಮ ಅಸ್ವಿತ್ವ, ಮನುಷ್ಯನ ನೈಜ ಗುಣವನ್ನೇ ಮರೆತು ಹೋಗುತ್ತಿದ್ದಾರೆ. ಮಾನವನಾಗಿ ಹುಟ್ಟಿ, ಒಂದು ಜೀವ ಉಳಿಸಲು ಸಾಧ್ಯವಾದರೆ ಉಳಿಸಬೇಕೇ ವಿನಃ ಕಸಿದುಕೊಳ್ಳಬಾರದು. ಆದ್ರೆ, ಕೆಲವರು ಮಾತ್ರ ಇಂದಿಗೂ ಈ ರೀತಿಯ ಹುಚ್ಚಾಟಗಳಲ್ಲಿ ತೊಡಗಿರುವುದು ತೀರ ಶೋಚನೀಯ ಸಂಗತಿ (Child Sacrifice). ಇದಕ್ಕೆ ಸಂಬಂಧಿಸಿದಂತೆ ಇಲ್ಲೊಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತ ಹೆಣ್ಣು ಮಗುವಿನ ತಾಯಿ ಹಲವು ತಿಂಗಳಿನಿಂದ ಅನಾರೋಗ್ಯ ಸಮಸ್ಯೆಯಿಂದ ತೀವ್ರ ಬಳಲುತ್ತಿದ್ದಳು. ಇದಕ್ಕೆ ವೈದ್ಯರಿಂದ ಸೂಕ್ತ ಪರಿಹಾರ ಪಡೆದುಕೊಳ್ಳದ ದಂಪತಿ, ಭೂತ ಬಿಡಿಸುವವನ ಸಲಹೆಯ ಮೇರೆಗೆ ತಾವು ಜನ್ಮ ಕೊಟ್ಟ ಮಗುವನ್ನೇ ನರಬಲಿ ಕೊಟ್ಟಿದ್ದಾರೆ. ಮಗುವನ್ನು ಹತ್ಯೆಗೈದ ಪಾಪಿ ಪೋಷಕರು, ಮೃತದೇಹವನ್ನು ಯಾರಿಗೂ ಕಾಣಸಿಗದಂತೆ ದಟ್ಟ ಕಾಡಿನ ಮಧ್ಯೆ ಹೂತು ಬಂದಿದ್ದಾರೆ.
ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ವಾಸವಿರುವ ಈ ದಂಪತಿ, ಭೂತ ಬಿಡಿಸುವವನ ಬಳಿ ಹೋಗಿ, ತಮ್ಮ ಅನಾರೋಗ್ಯ ಸಮಸ್ಯೆಗೆ ಪರಿಹಾರ ಕೇಳಿಕೊಂಡಿದ್ದಾರೆ. ಇದಕ್ಕೆ ಆತ ಮಗುವನ್ನು ಬಲಿಕೊಡಬೇಕು ಎಂದು ಹೇಳಿದ್ದಾನೆ. ಈ ಮಾತನ್ನು ಬಲವಾಗಿ ನಂಬಿದ ಪೋಷಕರು, ತಮಗೆ ಜನಿಸಿದ ಒಂದು ತಿಂಗಳ ಹೆಣ್ಣು ಮಗುವನ್ನು ಬಲಿ ಕೊಟ್ಟಿದ್ದಾರೆ. ಸದ್ಯ ಈ ಆರೋಪದಡಿ ಇದೀಗ ದಂಪತಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಭೋಪಾ ಪ್ರದೇಶದ ಬೆಲ್ಡಾ ಗ್ರಾಮದಲ್ಲಿ ಬುಧವಾರ (ಅ.09) ರಾತ್ರಿ ಈ ಘಟನೆ ನಡೆದಿದ್ದು, ಮಗು ಕಾಣೆಯಾಗಿರುವುದನ್ನು ಕಂಡು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಈ ವಿಚಾರಣೆ ವೇಳೆ ಮಮತಾ ಮತ್ತು ಆಕೆಯ ಪತಿ ಗೋಪಾಲ್ ಕಶ್ಯಪ್ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವರಿಬ್ಬರು ತಮ್ಮ ತಪ್ಪನ್ನು ಒಪ್ಪಿಕೊಂಡರು. ತಮ್ಮ ಮಗಳನ್ನು ಕೊಂದು ಆಕೆಯ ಶವವನ್ನು ಕಾಡಿನ ಒಂದು ಮೂಲೆಯಲ್ಲಿ ಬಚ್ಚಿಟ್ಟಿರುವುದಾಗಿ ತಿಳಿಸಿದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಆದಿತ್ಯ ಬನ್ಸಾಲ್ ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).