26ನೇ ವಿವಾಹ ವಾರ್ಷಿಕೋತ್ಸವದ ಕೇಕ್​ ಕತ್ತರಿಸಿ ಮದ್ವೆ ಬಟ್ಟೆಯಲ್ಲೇ ದಂಪತಿ ಸಾವಿಗೆ ಶರಣು! ಡೆತ್​ನೋಟ್​ನಲ್ಲಿತ್ತು ಮನಕಲಕುವ ಸಂಗತಿ | Wedding anniversary

Wedding anniversary
Published on

Wedding anniversary : ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ದುರಂತ ಘಟನೆವೊಂದು ಬೆಳಕಿಗೆ ಬಂದಿದೆ. 26ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪತಿ ಮತ್ತು ಪತ್ನಿ ಸಾವಿಗೆ ಶರಣಾಗಿದ್ದಾರೆ. ದಂಪತಿ ಸಾವು ಅವರ ಕುಟುಂಬಗಳನ್ನು ಶೋಕದಲ್ಲಿ ಮುಳುಗಿಸಿದೆ.

ಮೃತ ದಂಪತಿ ತಮ್ಮ 26ನೇ ವಿವಾಹ ವಾರ್ಷಿಕೋತ್ಸವವನ್ನು ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಮಧ್ಯರಾತ್ರಿ ಆಚರಿಸಿದರು. ಸಾಯುವ ಕೊನೆಯ ಕ್ಷಣದವರೆಗೂ ತುಂಬಾ ಆನಂದದಿಂದ ಇದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದರೆ ಯಾರೂ ಕೂಡ ನಂಬುತ್ತಿಲ್ಲ. 57 ವರ್ಷದ ಜೆರಿಲ್ ಡ್ಯಾಮ್ಸನ್ ಆಸ್ಕರ್ ಮಾನ್‌ಕ್ರೀಫ್ ಅಡುಗೆಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಅವರ ಪತ್ನಿ 46 ವರ್ಷದ ಆನಿ ಜೆರಿಲ್, ಡ್ರಾಯಿಂಗ್​ ರೂಮಿನಲ್ಲಿ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾದರು. ದಂಪತಿ 26 ವರ್ಷಗಳ ಹಿಂದೆ ಮದುವೆಯ ದಿನ ಧರಿಸಿದ್ದ ಅದೇ ಉಡುಗೆಗಳನ್ನು ಧರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ದಂಪತಿಗೆ 26 ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಇಬ್ಬರೂ ಸಾಯುವ ಮೊದಲು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಸಹ ಅಪ್​ಡೇಟ್​ ಮಾಡಿದ್ದರು. ಎರಡು ಡೆತ್​ನೋಟ್​ ಅನ್ನು ಅಪ್‌ಲೋಡ್ ಮಾಡಿದ್ದಾರೆ. ಈ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆಯಲಾಗಿದೆ. ಮೊದಲು ಜೆರಿಲ್ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡರು. ಈ ವೇಳೆ ಜೆರಿಲ್ ಅವರು ಪತ್ನಿಯ ಶವವನ್ನು ಬಟ್ಟೆಯಿಂದ ಮುಚ್ಚಿ ಅದರ ಮೇಲೆ ಹೂವುಗಳನ್ನು ಇಟ್ಟರು. ಇದಾದ ಬಳಿಕ ಜೆರಿಲ್​ ಸ್ಕಾರ್ಫ್‌ನಿಂದ ನೇಣು ಬಿಗಿದುಕೊಂಡಿದ್ದಾರೆ ಎಂದು ನಾಗ್ಪುರದ ಜರಿಪಟ್ಕಾ ಠಾಣಾ ಪೊಲೀಸರು ತಿಳಿಸಿದ್ದಾರೆ.

ಫೇಸ್‌ಬುಕ್ ವಿಡಿಯೋವೊಂದರಲ್ಲಿ ಆನ್ನಿ ಜೆರಿಲ್​, ತನ್ನ ಕುಟುಂಬ ಸದಸ್ಯರನ್ನು ಹಾಗೂ ತಮ್ಮ ಸಂಬಂಧಿಕರನ್ನು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಎಲ್ಲರಿಗೂ ಶುಭ ಹಾರೈಸಿದ್ದಾರೆ. ತನ್ನ ಸಾವಿಗೆ ಯಾರೂ ಕಾರಣರಲ್ಲ ಮತ್ತು ತನ್ನ ಆಸ್ತಿಗಳನ್ನು ಸರಿಯಾಗಿ ವಿತರಿಸಬೇಕೆಂದು ಆನ್ನಿ ಜೆರಿಲ್​ ನಿರ್ದಿಷ್ಟವಾಗಿ ಹೇಳಿದ್ದಾರೆ. ಸರಿಯಾಗಿ ಮಧ್ಯರಾತ್ರಿ 12 ಗಂಟೆಗೆ ತಮ್ಮ ವಾರ್ಷಿಕೋತ್ಸವದ ಕೇಕ್ ಕತ್ತರಿಸಿ ಉತ್ತಮ ಸಮಯವನ್ನು ಕಳೆದ ದಂಪತಿ ಮರುಕ್ಷಣವೇ ಸಾವಿಗೆ ಶರಣಾಗಿದ್ದಾರೆ.

ನಾಗ್ಪುರದ ಕ್ಯಾಥೋಲಿಕ್ ಸ್ಮಶಾನದಲ್ಲಿ ಶವಸಂಸ್ಕಾರ ಮಾಡುವ ವಿಜಯ್ ಅಲಿಕ್ ಮೈಕೆಲ್ ಮಾತನಾಡಿ, ನಾನು ಕಳೆದ ಐದು ವರ್ಷಗಳಿಂದ ಶವಪೆಟ್ಟಿಗೆಯನ್ನು ತಯಾರಿಸುತ್ತಿದ್ದೇನೆ. ಆದಾಗ್ಯೂ, ನಾನು ದಂಪತಿಗೆ ಶವಪೆಟ್ಟಿಗೆಯನ್ನು ತಯಾರಿಸುತ್ತಿರುವುದು ಇದೇ ಮೊದಲು. ಅವರ ಸಂಬಂಧಿಕರು ಅವರನ್ನು ಒಟ್ಟಿಗೆ ಅಂತ್ಯಕ್ರಿಯೆ ಮಾಡಲು ಬಯಸಿದ್ದಾರೆ ಎಂದರು. ಇನ್ನು 26 ವರ್ಷಗಳ ಹಿಂದೆ ತಮ್ಮ ಮದುವೆಯಲ್ಲಿ ಧರಿಸಿದ್ದ ಬಟ್ಟೆಯಲ್ಲೇ ಸಮಾಧಿ ಮಾಡಬೇಕೆಂದು ದಂಪತಿ ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಜೆರಿಲ್​ ತಮ್ಮ ಕೆಲಸವನ್ನು ಬಿಡುವ ಮೊದಲು ಹಲವಾರು ಹೋಟೆಲ್‌ಗಳಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. ಜೆರಿಲ್​ ಪತ್ನಿ ಆನ್ನಿ ಗೃಹಿಣಿಯಾಗಿದ್ದರು. ಜೆರಿಲ್ ಅವರು ಹಣವನ್ನು ಬಡ್ಡಿಗೆ ಸಾಲ ನೀಡಿ, ಅದರಲ್ಲೇ ಜೀವನ ನಡೆಸುತ್ತಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ 5.47 ಕ್ಕೆ ಈ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್​ಡೇಟ್​ ಮಾಡಲಾಗಿದೆ. ಆಪ್ತ ಸಂಬಂಧಿಯೊಬ್ಬರು ಪೋಸ್ಟ್ ಅನ್ನು ನೋಡಿ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಇತರ ಸಂಬಂಧಿಕರಿಗೂ ಮಾಹಿತಿ ತಿಳಿದು, ಅವರೆಲ್ಲರೂ ತಕ್ಷಣ ಮಾನ್ಕ್ರೀಫ್ ದಂಪತಿ ನಿವಾಸವನ್ನು ತಲುಪಿದರು. ಆದರೆ, ಅಷ್ಟರಲ್ಲಾಗಲೇ ದಂಪತಿ ಮೃತಪಟ್ಟಿರುವುದು ಖಚಿತವಾಯಿತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ನಾವು ಹೋಗುವ ಮುಂಚೆಯೇ ಸಂಬಂಧಿಕರು ಜೆರಿಲ್‌ ಶವವನ್ನು ಕೆಳಗಿಳಿಸಿ ನೆಲದ ಮೇಲೆ ಮಲಗಿಸಿದ್ದರು ಎಂದು ಜರಿಪಟ್ಕಾ ಪೊಲೀಸ್ ಠಾಣೆಯ ಅಧಿಕಾರಿ ಅರುಣ್ ಸಿರ್ಷತ್ ಹೇಳಿದರು. ಪತ್ನಿಯ ಶವ ಡ್ರಾಯಿಂಗ್ ರೂಮಿನಲ್ಲಿ ಪತ್ತೆಯಾಗಿದೆ. ಆರಂಭದಲ್ಲಿ ಇದು ಆತ್ಮಹತ್ಯೆಯಂತೆ ಕಾಣುತ್ತದೆ ಮತ್ತು ಇಲ್ಲಿಯವರೆಗೆ ಯಾವುದೇ ಪಿತೂರಿಯ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಅರುಣ್​ ಹೇಳಿದ್ದಾರೆ. ಪ್ರಸ್ತುತ, ಪೊಲೀಸರು ಇಬ್ಬರ ಮೊಬೈಲ್ ಫೋನ್‌ಗಳನ್ನು ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಿದ್ದಾರೆ. ಸಾವಿಗೆ ನಿಖರ ಕಾರಣ ಏನೆಂಬುದನ್ನು ತಿಳಿದುಕೊಳ್ಳಲು ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net