ಪ್ರೀ-ವೆಡ್ಡಿಂಗ್​ ಫೋಟೋಶೂಟ್​ ವೇಳೆ ದುರಂತ; ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ ಜೋಡಿ ದುರ್ಮರಣ

Couple 9
Published on

ಮೈಸೂರು: ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದ ಈ ಜೋಡಿ, ಪ್ರೀ ವೆಡ್ಡಿಂಗ್ ಫೋಟೋ ಶೂಟ್​ ಮಾಡಿಸೋಕೆ ಹೋಗಿ ಜೀವವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆ ತಿ.ನರಸೀಪುರ ತಾಲೂಕಿನ ಮುಡುಕುತೊರೆ ಬಳಿ ನಡೆದಿದೆ.

ನವೆಂಬರ್​ 22ರಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಚಂದ್ರು(28) ಮತ್ತು ಶಶಿಕಲಾ (20) ಮೃತರು. ಇವರಿಬ್ಬರೂ ಕಾವೇರಿ ನದಿ ಮಧ್ಯೆ ತೆಪ್ಪದಲ್ಲಿ ಪ್ರೀ ವೆಡ್ಡಿಂಗ್​ ಫೋಟೋ ಶೂಟ್​ ಮಾಡುತ್ತಿದ್ದರು. ಆದರೆ ತೆಪ್ಪ ಮಗುಚಿದ ಪರಿಣಾಮ ಇಬ್ಬರೂ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.

ಚಂದ್ರು ಹಾಗೂ ಶಶಿಕಲಾ ಇಬ್ಬರೂ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳು. ಸಂಭ್ರಮದಿಂದ ಫೋಟೋ ಶೂಟ್ ಮಾಡಿಸಲು ಪ್ಲ್ಯಾನ್ ಮಾಡಿಕೊಂಡಿದ್ದರು. ಇದಕ್ಕಾಗಿ ಎರಡು ತೆಪ್ಪದಲ್ಲಿ ಒಟ್ಟು ಐವರು ನದಿ ಮಧ್ಯೆ ತೆರಳಿದ್ದರು. ಚಂದ್ರು-ಶಶಿಕಲಾ ಒಂದು ತೆಪ್ಪದಲ್ಲಿದ್ದರೆ, ಫೋಟೋಗ್ರಾಫರ್​ ಮತ್ತು ಸಂಬಂಧಿಕರಿಗಾಗಿ ಇನ್ನೊಂದು ತೆಪ್ಪ ಸಿದ್ಧಪಡಿಸಲಾಗಿತ್ತು. ಹರಿಯುತ್ತಿರುವ ನೀರಿನ ಮಧ್ಯೆ ತೆಪ್ಪದಲ್ಲಿ ನಿಂತು ಫೋಸ್​ ಕೊಟ್ಟಿದ್ದರು. ಆದರೆ ಆ ತೆಪ್ಪ ಮಗುಚಿ ಇಬ್ಬರೂ ಮೃತಪಟ್ಟಿದ್ದಾರೆ. ಇವರಿಬ್ಬರ ಶವವನ್ನೂ ನೀರಿನಿಂದ ಹೊರತೆಗೆಯಲಾಗಿದೆ.

ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net