

ಶಿವಮೊಗ್ಗ:ಭಾರತೀಯರೆಲ್ಲರೂ ಸಮಾನತೆ, ಸೌಹಾರ್ದತೆ, ಭ್ರಾತ್ವತ್ವ, ಐಕ್ಯತೆ, ಭಾವೈಕ್ಯದಿಂದ ಇರಬೇಕೆಂಬ ಆಶಯ ಹೊತ್ತ ನಮ್ಮ ಸಂವಿಧಾನದ ಪೀಠಿಕೆಯನ್ನು ನಾವೆಲ್ಲರೂ ಪಾಲಿಸಿದರೆ ನೆಮ್ಮದಿಯಿಂದ ಬಾಳಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಹೇಳಿದರು.
ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮುಂದಾಲೋಚನೆ ಹೊಂದಿದ್ದ ಮಾನವತಾವಾದಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಸಂವಿಧಾನ ರಚಿಸುವ ಗುರುತರ ಜವಾಬ್ದಾರಿ ನೀಡಲಾಗಿತ್ತು. ಎಲ್ಲರೂ ಒಂದಾಗಿರಬೇಕು, ವಿದ್ಯಾವಂತರಾಗಬೇಕು ಹಾಗೂ ಸಂಘಟಿತರಾಗಿರಬೇಕು ಎಂಬುದು ಅಂಬೇಡ್ಕರ್ ಮೂಲ ಸಂದೇಶವಾಗಿತ್ತು ಎಂದರು.
ಸಮಾನತೆ, ಶಿಕ್ಷಣ ಮತ್ತು ಸಂಘಟನೆಯನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಮಹಿಳೆಯರ ಶಿಕ್ಷಣದ ಮಹತ್ವವನ್ನು ಎತ್ತಿ ಹಿಡಿದಿದ್ದರು. ಸಮಾನತೆ ಮತ್ತು ಶಿಕ್ಷಣದಿಂದ ಮಾತ್ರ ಉನ್ನತೀಕರಣ ಸಾಧ್ಯವೆಂದು ಹೇಳುತ್ತಿದ್ದರು. ಸಂಘಟನೆಯ ಶಕ್ತಿಯನ್ನು ಒತ್ತಿ ಹೇಳಿದ್ದರು ಎಂದು ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಅತ್ಯಂತ ಅರ್ಥಪೂರ್ಣವಾದ ಪೀಠಿಕೆಯನ್ನು ಅಂಬೇಡ್ಕರ್ ನಮಗೆ ನೀಡಿದ್ದಾರೆ. ಇದು ದೇಶಕ್ಕೆ ದಾರಿದೀಪ. ನಮ್ಮ ಸಂವಿಧಾನ ಜಗತ್ತೇ ನಮ್ಮ ಕಡೆಗೆ ನೋಡುವಂತೆ ಮಾಡಿದೆ. ದೇಶ ವಿಶ್ವಗುರು ಆಗಿ ಹೊರಹೊಮ್ಮುತ್ತಿದೆ. ಸಂವಿಧಾನ ನಮ್ಮ ದೇಶದ ಶಕ್ತಿ. ನಮ್ಮದು ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಮಾತನಾಡಿ, ಭಾವೈಕ್ಯ, ಸಮಾನತೆಯಿಂದ ಬದುಕಬೇಕೆಂಬ ಆಶಯದಿಂದ ಅಂಬೇಡ್ಕರ್ ನಮಗೆ ಅತ್ಯುತ್ತಮವಾದ ಸಂವಿಧಾನ ನೀಡಿದ್ದಾರೆ. ವಿದ್ಯಾರ್ಥಿಗಳು ಸಂವಿಧಾನವನ್ನು ತಿಳಿದರೆ ಮಾತ್ರ ಭವ್ಯ ಸಮಾಜ ಕಟ್ಟಲು ಸಾಧ್ಯ. ನಾವೆಲ್ಲ ಅಂಬೇಡ್ಕರ್, ಬುದ್ಧ, ಬಸವವಣ್ಣನ ಭಾವಚಿತ್ರಗಳನ್ನು ಮನೆಗಳಲ್ಲಿ ಪೂಜಿಸಬೇಕು. ಮಹಿಳೆಯರಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬೆಳೆಯಲು ಸಂವಿಧಾನ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿ, ಜಾತ್ಯತೀತವಾಗಿ ಸಮಾನತೆಯಿಂದ ಬದುಕಬೇಕೆಂಬ ಆಶಯದಿಂದ ಸಂವಿಧಾನ ರಚಿಸಲಾಗಿದೆ. ಆದರೆ ಇಂದಿಗೂ ಜಾತಿ, ದ್ವೇಷದ ವಿಷ ಬೀಜ ಬಿತ್ತಲಾಗುತ್ತಿದೆ ಎಂದರು.
ಸಂವಿಧಾನ ಪೀಠಿಕೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಸ್ತೂರಬಾ ಪಿಯು ಕಾಲೇಜಿನ ಉಪನ್ಯಾಸಕ ಎಚ್.ಎಸ್.ರವಿಕುಮಾರ್ ಸಂವಿಧಾನದ ಅರಿವು ಮತ್ತು ಜಾಗೃತಿ ಕುರಿತು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ (ಗ್ರೇಡ್-1) ಕೆ.ಎನ್.ಸುರೇಶ್ ಸಂವಿಧಾನದ ಆಶಯಗಳು ಮತ್ತು ಮೂಲಭೂತ ಹಕ್ಕುಗಳ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಡಿಸಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ ಇತರರಿದ್ದರು.