ಎರಡನೇ ದಿನವೂ ಮುಗಿಯದ ಪಾಕ್ ಮತ ಎಣಿಕೆ; ಗೊಂದಲದಲ್ಲೇ ಇರುವ ಫಲಿತಾಂಶ

PTI
Published on

ಲಾಹೋರ್: ಪಾಕಿಸ್ತಾನದಲ್ಲಿ ಗುರುವಾರ ನಡೆದ ಚುನಾವಣೆಯ ಮತ ಎಣಿಕೆ ಆರಂಭವಾಗಿ ಎರಡು ದಿನ ಮುಗಿಯುತ್ತ ಬಂದರೂ ಅಂತಿಮ ಫಲಿತಾಂಶ ಪ್ರಕಟವಾಗಿಲ್ಲ. ಈ ಮಧ್ಯೆ ಫಲಿತಾಂಶ ಪ್ರಕಟವಾಗಿರುವ ಸ್ಥಾನಗಳ ಬಗ್ಗೆ ಗೊಂದಲ ಸೃಷ್ಟಿ ಆಗಿದೆ. ಮತ್ತೊಂದೆಡೆ ಮೂರು ಪ್ರಮುಖ ಪಕ್ಷಗಳಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬರುವ ಸಾಧ್ಯತೆ ಇರದ್ದರಿಂದ ಅತಂತ್ರ ಪರಿಸ್ಥಿತಿ ಗೋಚರಿಸಿದೆ.

ಲೇಟೆಸ್ಟ್ ಮಾಹಿತಿ ಪ್ರಕಾರ ಚುನಾವಣೆ ನಡೆದ 265 ಸ್ಥಾನಗಳ ಪೈಕಿ 256 ಸ್ಥಾನಗಳ ಫಲಿತಾಂಶ ಪ್ರಕಟಗೊಂಡಿದೆ. ಅದರಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) 101 ಸ್ಥಾನಗಳೊಂದಿಗೆ ಮುಂಚೂಣಿಯಲ್ಲಿದೆ. ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) 73, ಬಿಲಾವಲ್ ಜರ್ದಾರಿ ಭುಟ್ಟೋ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) 54 ಸ್ಥಾನಗಳನ್ನು ಗಳಿಸಿದೆ.

ಎಣಿಕೆ ವಿಳಂಬಕ್ಕೆ ಆಕ್ರೋಶ: ಪಾಕ್ ಚುನಾವಣೆ ಗುರುವಾರ ಸಂಜೆ 5ಕ್ಕೆ ಮುಗಿದು ಅಂದೇ ಎಣಿಕೆ ಆರಂಭವಾಗಿ ಶನಿವಾರವೂ ಮುಂದುವರಿದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಕ್ಷ ಆಕ್ರೋಶ ವ್ಯಕ್ತಪಡಿಸಿತ್ತು. ಶನಿವಾರ ಮಧ್ಯರಾತ್ರಿಯೊಳಗೂ ಅಂತಿಮ ಫಲಿತಾಂಶ ಪ್ರಕಟಿಸದಿದ್ದರೆ ತೀವ್ರ ಪ್ರತಿಭಟನೆ ನಡೆಸಲಿರುವುದಾಗಿ ಎಚ್ಚರಿಕೆ ನೀಡಿತ್ತು.

ಸಮ್ಮಿಶ್ರ ಸರ್ಕಾರದ ನಿರೀಕ್ಷೆ: ಅಂತಿಮ ಫಲಿತಾಂಶ ಪ್ರಕಟವಾಗುವುದಕ್ಕೂ ಮುಂಚೆ ಪ್ರತಿಕ್ರಿಯಿಸಿದ ಪಾಕ್ ಹಂಗಾಮಿ ಅಧ್ಯಕ್ಷ ಅನ್ವರ್ ಉಲ್ ಹಕ್ ಕಾಕರ್, ಸಮ್ಮಿಶ್ರ ಸರ್ಕಾರ ರಚನೆಯ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದರು.

ನವಾಜ್-ಪುತ್ರಿ ವಿಜಯಕ್ಕೂ ಕುತ್ತು: ಪಾಕಿಸ್ತಾನದ ಚುನಾವಣೆಯಲ್ಲಿ ಲಾಹೋರ್​ನ ಕ್ಷೇತ್ರ ಗಳಲ್ಲಿ ನವಾಜ್ ಷರೀಫ್ ಹಾಗೂ ಅವರ ಪುತ್ರಿ ಮರಿಯಂ ನವಾಜ್ ಸೇರಿ ಅವರ ಕುಟುಂಬದ ನಾಲ್ವರು ಗೆದ್ದಿದ್ದಾರೆ. ಆದರೆ ನವಾಜ್ ಮತ್ತು ಪುತ್ರಿಯ ಗೆಲುವನ್ನು ಪ್ರಶ್ನಿಸಿ ಶನಿವಾರ ಲಾಹೋರ್ ಹೈಕೋರ್ಟ್ ಮೆಟ್ಟಿಲೇರಲಾಗಿದೆ. ಈ ಚುನಾವಣೆಯಲ್ಲಿ ಸರಿಯಾದ ವಿಧಾನ ಅನುಸರಿಸಿಲ್ಲ ಎಂದು ಸೋತ ಪಿಟಿಐ ಅಭ್ಯರ್ಥಿಗಳು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದಾರೆ. ಅವರನ್ನು ವಿಜೇತರು ಎಂದು ಘೋಷಿಸುವ ಸಂದರ್ಭದಲ್ಲಿ ಪಾಕಿಸ್ತಾನ ಚುನಾವಣಾ ಆಯೋಗವು ಫಾಮ್ರ್-45 ಬಳಸುವ ಬದಲು ಫಾಮ್ರ್-47 ಬಳಸಿ ವಂಚಿಸಿದೆ ಎಂದು ಆರೋಪಿಸಲಾಗಿದೆ.

ಸ್ವತಂತ್ರ ವೀಕ್ಷಕರಿಂದ ನಿಗಾ: ಎಣಿಕೆ ಪ್ರಕ್ರಿಯೆಯನ್ನು ಸ್ವತಂತ್ರ ವೀಕ್ಷಕರು ಗಮನಿಸುತ್ತಿದ್ದು, ಹಲವೆಡೆ ಲೋಪಗಳನ್ನು ಪತ್ತೆ ಮಾಡಿ ದ್ದಾರೆ. ಚುನಾವಣೆ ನಡೆದ ಶೇ. 29ರಷ್ಟು ಮತಗಟ್ಟೆಗಳಲ್ಲಿ ಫಾಮ್ರ್-45 ನೀಡಿಲ್ಲ ಎಂಬುದಾಗಿ ಅವರು ಆರೋಪಿಸಿದ್ದಾರೆ.

ಇಮ್ರಾನ್​ಗೆ ಜಾಮೀನು: ಸೇನಾ ನೆಲೆಗಳ ಮೇಲೆ ಮೇ 9ರಂದು ನಡೆದಿದ್ದ ದಾಳಿ ಸಂಬಂಧ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ದಾಖಲಾಗಿದ್ದ 12 ಕೇಸುಗಳ ಕುರಿತಂತೆ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮೇ 9ರ ಪ್ರಕರಣ ಸಂಬಂಧ ಎಲ್ಲ ಆರೋಪಿಗಳಿಗೂ ಜಾಮೀನು ಸಿಕ್ಕಿರುವುದರಿಂದ 71 ವರ್ಷದ ಇಮ್ರಾನ್ ಖಾನ್​ರನ್ನು ಬಂಧನದಲ್ಲಿ ಇರುವುದು ಸರಿಯಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇತರ ಪ್ರಕರಣಗಳಲ್ಲಿನ ಶಿಕ್ಷೆ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಸೆರೆವಾಸ ಮುಂದುವರಿಯಲಿದ್ದು, ಸದ್ಯಕ್ಕೆ ಬಂಧನದಿಂದ ಮುಕ್ತಿ ಇಲ್ಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net