ನಕಲಿ ನೋಟು ಚಲಾವಣೆ ಪ್ರಕರಣ: ಅಪರಾಧಿಗೆ ಆರು ವರ್ಷ ಜೈಲು ಶಿಕ್ಷೆ

nia
Published on

ಬೆಂಗಳೂರು: ನಕಲಿ ನೋಟು ಚಲಾವಣೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಆರು ವರ್ಷಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ಎನ್‌ಐಎ ನ್ಯಾಯಾಲಯ ತೀರ್ಪು ನೀಡಿದೆ.
ಪಶ್ಚಿಮ ಬಂಗಾಳ ಮೂಲದ ಸರಿಫುಲ್ ಇಸ್ಲಾಂ ಶಿಕ್ಷೆಗೊಳಗಾದ ಅಪರಾಧಿ.
ಪಶ್ಚಿಮ ಬಂಗಾಳ ಮೂಲದ ಈತ ೨೦೧೮ರಲ್ಲಿ ನಕಲಿ ನೋಟು ಚಲಾವಣೆ ಮಾಡಿ ದೇಶದ ಆರ್ಥಿಕತೆ ಪೆಟ್ಟು ಕೊಡಲು ಮುಂದಾಗಿದ್ದ. ಚಿಕ್ಕೋಡಿ ಠಾಣೆ ಪೊಲೀಸರು ಈತನನ್ನು ಬಂಧಿಸಿದ್ದರು. ಅಲ್ಲದೇ ಇದೇ ಪ್ರಕರಣದಲ್ಲಿ ಇತರೆ ಆರು ಮಂದಿಗೆ ಈಗಾಗಲೇ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.
ಬಾಂಗ್ಲಾದೇಶದ ಗಡಿಯಿಂದ ದೇಶದ ವಿವಿಧ ಭಾಗಗಳಿಗೆ ೮೨ ಸಾವಿರ ನೋಟುಗಳನ್ನು ಕಳ್ಳಸಾಗಣೆ ಮಾಡಲು ಇತರೆ ಆರೋಪಿಗಳೊಂದಿಗೆ ಸೇರಿ ಪಿತೂರಿ ನಡೆಸಿರುವುದು ಎನ್‌ಐಎ ತನಿಖೆಯಿಂದ ತಿಳಿದುಬಂದಿತ್ತು. ಸರಿಫುಲ್ ಇಸ್ಲಾಂ ಪಶ್ಚಿಮ ಬಂಗಾಳದಿಂದ ನಕಲಿ ನೋಟುಗಳನ್ನು ಸಂಗ್ರಹಿಸಲು ಮತ್ತು ದೇಶಾದ್ಯಂತ ಅದರ ಚಲಾವಣೆಗಾಗಿ ತನ್ನ ಸಹ ಆರೋಪಿಗಳೊಂದಿಗೆ ಸಂವಹನ ನಡೆಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಿಮ್ ಕಾರ್ಡ್ ಪಡೆದಿದ್ದ. ಸದ್ಯ ಅಪರಾಧಿಗೆ ಆರು ವರ್ಷ ಜೈಲು ಶಿಕ್ಷೆ ಹಾಗೂ ೫ ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net