

ಚಿಕ್ಕಬಳ್ಳಾಪುರ: ಜಮೀನಿನಲ್ಲಿ ಸಿಕ್ಕಿದ ಬಂಗಾರ ಮಾರಾಟದ ಸುಳ್ಳು ಮಾಹಿತಿಯನ್ನು ಹೇಳಿ ನಂಬಿಸಿದ, ಖದೀಮರು ಟೈಲರ್‌ನಿಂದ ೪ ಲಕ್ಷ ರೂ ಪಡೆದುಕೊಂಡು ಪರಾರಿಯಾಗಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನ್ ಸಿಟಿ ಏರಿಯಾದ ಗಾರ್ಮೆಂಟ್ಸ್ ನಲ್ಲಿ ಸ್ಟಿಚಿಂಗ್ ಆಪರೇಟರ್ ಆಗಿರುವ ನವೀನ್ ಪ್ರದೀಪ್ (38) ವಂಚನೆಗೊಳಗಾದವರು. ಅಪರಿಚಿತರು ಮೊಬೈಲ್‌ಗೆ ಕರೆ ಮಾಡಿ, ಚಿನ್ನ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿ, ಕಡಿಮೆ ಬೆಲೆಗೆ ಮಾರುವುದಾಗಿ ತಿಳಿಸಿದ್ದು ಇದನ್ನು ನಂಬಿ ಪ್ರದೀಪ್ ಮೋಸ ಹೋಗಿದ್ದಾರೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಪ್ರಕರಣದ ಹಿನ್ನೆಲೆ
ಕಳೆದ 15 ದಿನಗಳಿಂದ ಕರೆ ಮಾಡಿದ ಅಪರಿಚಿತ ವ್ಯಕ್ತಿ ನಾನು ಶ್ಯಾಮ್, ಜೆಸಿಬಿ ಡ್ರೈವರ್, ಗೌರಿಬಿದನೂರಿನಿಂದ ಕರೆ ಮಾಡುತ್ತಿದ್ದು ಜಮೀನಿನಲ್ಲಿ ನನಗೆ ಬಂಗಾರ ಸಿಕ್ಕಿದ್ದು ಹೀಗೆ ಯಾರೋ ನಿಮ್ಮ ನಂಬರನ್ನು ಕೊಟ್ಟಿರುತ್ತಾರೆ. ಬೇರೆ ಕಡೆ ಮಾರಿದರೆ, ಅದು ಎಲ್ಲಿ ಸಿಕ್ಕಿದ್ದು ಹೇಗೆ? ಎಂದೆಲ್ಲ ವಿಚಾರಿಸುತ್ತಾರೆ. ನಿಮಗೆ ಯಾರಾದರೂ ತಿಳಿದವರು ಇದ್ದರೆ ಹೇಳಿ, ನಾನು ನಿಮಗೆ ಸ್ಯಾಂಪಲ್ ಬಂಗಾರವನ್ನು ಕೊಡುತ್ತೇನೆ. ಬಳಿಕ ಚೆಕ್ ಮಾಡಿಸಿ, ನಂಬಿಕೆ ಬಂದ ಮೇಲೆ ಅಡ್ವಾನ್ಸ್ ಹಣವನ್ನು ಕೊಡಿ ಎಂದು ಪ್ರದೀಪ್‌ಗೆ ತಿಳಿಸಿದ್ದಾರೆ. ಇದಕ್ಕು ನಂಬಿ ಹೋದಾಗ ಅಪರಿಚಿತರು ಶ್ಯಾಮ್ ಮತ್ತು ರಾಜು ಎಂಬುದಾಗಿ ಪರಿಚಯಿಸಿಕೊಂಡಿದ್ದಾರೆ. ಚೆಕ್ ಮಾಡಿಕೊಳ್ಳಲು ನಕಲಿ ಬಂಗಾರ ಸರ ಕೊಟ್ಟಿದ್ದಾರೆ. ಹಾಗೆಯೇ 4 ಲಕ್ಷ ರೂ ಪಡೆದುಕೊಂಡು ಪರಾರಿಯಾಗಿದ್ದಾರೆ.
*ಪೊಲೀಸರ ವೇಷದಲ್ಲೂ ಮೋಸ
ಚಿನ್ನದ ಸರವನ್ನು ಚೆಕ್ ಮಾಡುವ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಆಸಾಮಿಗಳು, ನಾವು ಪೊಲೀಸ್ ನವರು, ನೀವು ಯಾಕೆ ಇಲ್ಲಿದ್ದಿರಿ?, ಆ ಮೂರು ಜನರನ್ನು ಯಾರು? ಎಂದು ಪ್ರಶ್ನಿಸಿದ್ದಾರೆ. ಇದರ ಕಕ್ಕಾಬಿಕ್ಕಿಯಲ್ಲಿ ಹಣವನ್ನು ಪಡೆದುಕೊಂಡು ಎಲ್ಲರೂ ಓಡಿ ಹೋಗಿದ್ದು ಬಂಗಾರವಿರುವ ಚಿಕ್ಕ ಚೀಲವನ್ನು ಬಿಚ್ಚಿ ನೋಡಿದಾಗ ನಕಲಿ ಸರ ಇರುವುದು ಗೊತ್ತಾಗಿದೆ. ವಂಚಕ ಅಪರಿಚಿತರನ್ನು ನೋಡಿದರೆ, ಗುರುತಿಸುವುದಾಗಿ ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.