ಜರ್ಮನಿಯಲ್ಲಿ ನಾವಿಕೋತ್ಸವ ವಿಶ್ವಕನ್ನಡ ಸಮ್ಮೇಳನಕ್ಕೆ ಕ್ಷಣಗಣನೆ

ನಾವಿಕ
Published on
Benki Basanna 1
ಬೆಂಕಿ ಬಸಣ್ಣ ನ್ಯೂಯಾರ್ಕ್
ಇದೇ ಜುಲೈ 6 ಶನಿವಾರದಂದು   ಜರ್ಮನಿಯ  ಫ್ರಾಂಕ್ಫರ್ಟ್ ನಲ್ಲಿ ನಡೆಯಲಿರುವ  ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಸಕಲ ಸಿದ್ಧತೆಗಳು  ಭರ್ಜರಿಯಾಗಿ ನಡೆದಿವೆ.  

"ಅಮೇರಿಕಾ ದೇಶದಿಂದ ಸುಮಾರು 200 ಜನರು ಈ ಸಮ್ಮೇಳನದಲ್ಲಿ ಭಾಗವಹಿಸಲು  ಈಗಾಗಲೇ ಯುರೋಪಿಗೆ ಆಗಮಿಸಿದ್ದು  ಸದ್ಯ ಹನ್ನೊಂದು ದಿವಸಗಳ  ಗ್ರೂಪ್ ಪ್ರವಾಸದಲ್ಲಿದ್ದಾರೆ.  ಅವರು ಈ ಸಮ್ಮೇಳನದಲ್ಲಿ ಭಾಗವಹಿಸುವುದರ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ಕೊಡಲಿದ್ದಾರೆ" ಎಂದು ನಾವಿಕ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್ ಬೆಂಗಳೂರು ಹೇಳಿದ್ದಾರೆ.

"ಯುರೋಪಿನಲ್ಲಿ  ನಡೆಯುತ್ತಿರುವ ಈ ಮೊಟ್ಟ ಮೊದಲ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು  ನಡೆದಿದ್ದು  ಅಮೆರಿಕದಿಂದ, ಭಾರತದಿಂದ ಮತ್ತು ವಿವಿಧ ದೇಶಗಳಿಂದ ಬರುತ್ತಿರುವ ಕನ್ನಡ ಪ್ರೇಮಿಗಳನ್ನು  ಬರ ಮಾಡಿಕೊಳ್ಳಲು ಎದುರು ನೋಡುತ್ತಿದ್ದೇವೆ"  ಎಂದು ರೈನ್-ಮೈನ್   ಕನ್ನಡ ಸಂಘ ( RMKS) ದ ಅಧ್ಯಕ್ಷರಾದ  ವೇದ ಕುಮಾರಸ್ವಾಮಿ ಹೇಳಿದ್ದಾರೆ.

"ಈ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನದಲ್ಲಿ  ಮೆಲೋಡಿ ಕಿಂಗ್  ರಾಜೇಶ್ ಕೃಷ್ಣನ್ ಮತ್ತು ತಂಡದವರಿಂದ  ಸಂಗೀತ ಸಂಜೆ ಕಾರ್ಯಕ್ರಮ ಹಾಗೂ ಸುಪ್ರಸಿದ್ಧ ಪ್ರೊಫೆಸರ್ ಕೃಷ್ಣೇಗೌಡ ಅವರಿಂದ  ಸಾಹಿತ್ಯ ವೇದಿಕೆ  ಕಾರ್ಯಕ್ರಮಗಳು  ನಡೆಯಲಿವೆ" ಎಂದು  ಸಂಚಾಲಕರಾದ ವಿಶ್ವನಾಥ ಬಾಳೇಕಾಯಿ ತಿಳಿಸಿದ್ದಾರೆ.

" ಈ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನದಲ್ಲಿ  ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿ ( NRI ಫೋರಂ)  ಡೆಪ್ಯೂಟಿ ಚೇರ್ಮನ್  ಡಾ. ಆರತಿ ಕೃಷ್ಣ   ಮತ್ತು ಕನ್ನಡ ಸಾಹಿತ್ಯ  ಪರಿಷತ್ತಿನ ಅಧ್ಯಕ್ಷರಾದ  ನಾಡೋಜ ಡಾ.  ಮಹೇಶ್ ಜೋಶಿ   ವಿಶೇಷ ಅತಿಥಿಗಳಾಗಿ  ಆಗಮಿಸಲಿದ್ದಾರೆ"  ಎಂದು  ಸಂಯೋಜಕರಾದ   ರವೀಂದ್ರ ಕುಲಕರ್ಣಿ ತಿಳಿಸಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ  "ರಂಗಧ್ವನಿ"  ತಂಡ ಪ್ರಸ್ತುತಪಡಿಸುವ  ನಾವಿಕ ಸಂಸ್ಥೆಯ  ಸ್ಥಾಪಕರಲ್ಲಿ ಒಬ್ಬರಾದ  ಬಹುಮುಖ  ವ್ಯಕ್ತಿತ್ವದ  ವಲ್ಲೀಶ  ಶಾಸ್ತ್ರಿ  ನಿರ್ದೇಶನದ  ಸಂದೀಪ್ ಆಚಾರ್ ವಿರಚಿತ  ಹಾಸ್ಯ ನಾಟಕ  "ಬೇಸ್ತು ಬಿದ್ದ ರಾಜ"  ಪ್ರದರ್ಶನಗೊಳ್ಳಲಿದೆ.  

ಸ್ಮರಣ  ಸಂಚಿಕೆ  "ಮೈನಾಕ": ಈ ಸಮ್ಮೇಳನದ ಸ್ಮರಣ  ಸಂಚಿಕೆ  "ಮೈನಾಕ" ತುಂಬಾ ಸೊಗಸಾಗಿ ಹೊರಬಂದಿದ್ದು  ಇದರಲ್ಲಿ ಯುರೋಪಿನಲ್ಲಿರುವ ಸುಮಾರು ಇಪ್ಪತ್ತು ಕನ್ನಡ ಸಂಘಗಳು ಮತ್ತು ಕನ್ನಡ-ಕಲಿ  ಶಾಲೆಗಳ ಬಗ್ಗೆ ಲೇಖನಗಳು, ಜೊತೆಗೆ ವೈವಿಧ್ಯಮಯ ಆಸಕ್ತಿದಾಯಕ ಲೇಖನಗಳು, ಕವನಗಳು, ಚಿತ್ರಕಲೆ  ಇತ್ಯಾದಿಗಳು ಇವೆ ಎಂದು ಪ್ರಧಾನ ಸಂಪಾದಕರಾದ ಬೆಂಕಿ ಬಸಣ್ಣ ತಿಳಿಸಿದ್ದಾರೆ.  

"ಮೈನಾಕ" ಎಂಬ ಹೆಸರು ಕೊಡಲು ಕಾರಣವೇನು? ಎಂಬ ಪ್ರಶ್ನೆ ಸಹಜವಾಗಿ ನಿಮ್ಮ ಮನಸ್ಸಿನಲ್ಲಿ  ಏಳುತ್ತದೆ.  ಮೈನಾಕ ಎಂದಾಕ್ಷಣ ನಮ್ಮ ರಸಿಕ ಮನಸ್ಸಿಗೆ ಬರುವುದು ವಿಶ್ವಾಮಿತ್ರ ಮುನಿಯ ತಪಸ್ಸನ್ನು ಭಂಗ ಮಾಡಿದ ಅಪೂರ್ವ ಸುಂದರಿ, ಅಪ್ಸರೆ 'ಮೇನಕಾ' !   "ಮೈನಾಕ" ಹೆಸರು  ( ಮೈ = ಮೈನ್  ನದಿಯ ತೀರದಲ್ಲಿ  ಈ ಸಮ್ಮೇಳನ  ನಡೆಯಲಿರುವ ಫ್ರಾಂಕ್ಫರ್ಟ್  ನಗರವಿದೆ ಮತ್ತು  ರೈನ್  "ಮೈ" ನ್ ಕನ್ನಡ ಸಂಘ, ಫ್ರಾಂಕ್ಫರ್ಟ್ )  +  (ನಾ = ನಾವಿಕ)   +  ( ಕ = ಕನ್ನಡಿಗರು )  ಹೀಗೆ ಮೂರು ಅಕ್ಷರಗಳನ್ನು ಕೂಡಿಸಿ ಸೃಷ್ಟಿಸಲಾಗಿದೆ .  ಹಾಗೆಯೇ   "ಮೈನಾಕ"  ಹೆಸರಿನ ಪರ್ವತವು ರಾಮಾಯಣದಲ್ಲಿ ಉಲ್ಲೇಖವಾಗಿದ್ದು ಅದು ಹನುಮಂತನು ಲಂಕಾಕ್ಕೆ ಹೋಗುವ ಸಮಯದಲ್ಲಿ ಆಶ್ರಯ ಕೊಟ್ಟು ಸಹಾಯ ಮಾಡಿರುತ್ತದೆ..  ಮೈನಾಕ ವನ್ನು ಕಂಗ್ಲಿಷ್  ನಲ್ಲಿ  "My-ನಾಕ",  ( ಅಂದ್ರೆ "My - ಸ್ವರ್ಗ")  ಎಂದು ಬರೆಯಬಹುದು.   ಈ ಸ್ಮರಣ ಸಂಚಿಕೆಯ ರಸವತ್ತಾದ  ಬರಹಗಳನ್ನು ಸವಿಯುತ್ತಿದ್ದರೆ, ಈ ಭೂಮಿಯ ಮೇಲೆಯೇ   "ಸ್ವರ್ಗ" ದಲ್ಲಿದಷ್ಟು ಆನಂದದ  ಅನುಭವವಾಗುತ್ತದೆ. "My- ನಾಕ" ( ನನ್ನ ಸ್ವರ್ಗ ) ಇಲ್ಲಿಯೇ ಸೃಷ್ಟಿಯಾದಂತ ಅನುಭವವಾಗುತ್ತದೆ.

ವೈದ್ಯಕೀಯ ಫೋರಮ್:  ಈ ನಾವಿಕೋತ್ಸವ ಸಮ್ಮೇಳನದ  ಭಾಗವಾಗಿ ನಡೆಯುತ್ತಿರುವ   ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ     ವಿಶ್ವವಿಖ್ಯಾತ ವೈದ್ಯರಾದ  ಡಾಕ್ಟರ್ ಬಿ.  ವಿ.  ಚಂದ್ರಮೌಳಿ, ಡಾಕ್ಟರ್ ರಾಜಣ್ಣ ರಾಮಸ್ವಾಮಿ, ಡಾಕ್ಟರ್ ಸುಬ್ರಮಣ್ಯ ಭಟ್, ಡಾಕ್ಟರ ನವೀನ್ ಉಳಿ, ಮತ್ತು ಡಾಕ್ಟರ್ ಮನಮೋಹನ್ ಕಟ್ಟಪಡಿ ಅವರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ಕೊಡಲಿದ್ದಾರೆ.

ಮುಖ್ಯ ಕಾರ್ಯಕ್ರಮಗಳ ವಿವರಗಳು: ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್  ಮತ್ತು ಅವರ ತಂಡದವರಾದ ಹಿನ್ನೆಲೆ ಗಾಯಕಿ ಹರ್ಷ ರಂಜಿನಿ ಮತ್ತು ಡ್ರಮ್ಮರ್   ಕೃಷ್ಣ ಆನಂದ್, ದೀಪಕ್ ಜಯಶೀಲನ್, ಪ್ರಕಾಶ್ ಅಂಥೋನಿ, ಮತ್ತು ವರುಣ್ ಪ್ರದೀಪ್ ಮುಂತಾದವರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಮುಖ್ಯ ಅತಿಥಿ  ಪ್ರೊಫೆಸರ್  ಕೃಷ್ಣೇಗೌಡ ಅವರ ಉಪಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ವೇದಿಕೆಯ ಕಾರ್ಯಕ್ರಮಗಳು ನಡೆಯಲಿವೆ.  

ಅಮೇರಿಕಾದ ಟೆಕ್ಸಾಸ್ ನ ರಶ್ಮಿ ಶಶಿ ಸ್ಟುಡಿಯೋ ಮುದ್ರಾ ಸ್ಕೂಲ್ ಆಫ್ ಡಾನ್ಸ್  ಅವರಿಂದ ನೃತ್ಯ ಕಾರ್ಯಕ್ರಮ, ಅಮೆರಿಕಾದ  ವೀರ ರಘುನಾಥ್, ಕಲ್ಪನಾ ರಾಮಸ್ವಾಮಿ, ಶಂಕರಮೂರ್ತಿ  ಮತ್ತು ಗಂಗಾ ಅವರಿಂದ ಗಾನಸುದೆ ಕಾರ್ಯಕ್ರಮ.   ಜರ್ಮನಿಯಲ್ಲಿರುವ  ಯಕ್ಷಮಿತ್ರರು ತಂಡದಿಂದ "ಮೇಧಿನಿ ಸೃಷ್ಟಿ"  ಯಕ್ಷಗಾನ. ಮಯೂರಿಸ್ ಮತ್ತು ಲಯ ತಂಡಗಳಿಂದ ನವನೀತ ನಾಟ್ಯ ಪ್ರದರ್ಶನ,  "ವಿದೇಶದಲ್ಲಿ ದೇಶೀಯ ಸೊಗಡು" ತಂಡದಿಂದ ಕನ್ನಡ ನಾಡಿನ ವಿವಿಧ  ಉಡುಪು ಮತ್ತು ತೊಡುಗೆಗಳ ಪ್ರಸ್ತುತಿ,  ಸೌರಭ ಆರ್ಟ್ಸ್ ಮತ್ತು ಆರೋಹಣಂ ತಂಡಗಳಿಂದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ವೈಭವ,   ಜರ್ಮನಿಯ ಬಾಲ ನಾಗರಾಜ್ ಅವರ ತಂಡದಿಂದ ಭಾವಗೀತೆಗಳು. 

ಈ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ . ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂಬಿ ಪಾಟೀಲ್ ಅವರನ್ನು ಆಹ್ವಾನಿಸಲಾಗಿದ್ದು  ಅವರು ಅನಿವಾರ್ಯ ಕಾರಣಗಳಿಂದ ಭಾಗವಹಿಸುತ್ತಿಲ್ಲ. ಆದರೆ ತಮ್ಮ ಶುಭ ಸಂದೇಶಗಳನ್ನು  ಸಮ್ಮೇಳನಕ್ಕೆ ಕಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net