

ರಷ್ಯಾ ಸೇನೆ ಭೂ, ವಾಯು ಮತ್ತು ನೌಕಾಪಡೆ ಮೂಲಕ ದಾಳಿ ಆರಂಭಿಸಿರುವ ಕಾರಣ ಯೂಕ್ರೇನ್ನಲ್ಲಿರುವ 16,000 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಹಂಗರಿ, ಪೊಲಂಡ್ಗಳಿಂದ ಸರ್ಕಾರದ ರಕ್ಷಣಾ ತಂಡಗಳನ್ನು ಯೂಕ್ರೇನ್ಗೆ ರವಾನಿಸಲಾಗಿದ್ದು, ರಸ್ತೆ ದಾರಿಯಲ್ಲಿ ಅವರನ್ನು ಈ ದೇಶಗಳಿಗೆ ಕರೆತಂದು ಭಾರತಕ್ಕೆ ವಾಪಸ್ ಕರೆತರುವ ಪ್ರಯತ್ನ ಆರಂಭವಾಗಿದೆ. ಏರ್ಲಿಫ್ಟ್ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಎರಡು ಚಾರ್ಟರ್ಡ್ ವಿಮಾನವನ್ನು ಬುಚರೆಸ್ಟ್ಗೆ ಕಳುಹಿಸಲು ಚಿಂತನೆ ನಡೆಸಿದೆ. ಇದಲ್ಲದೆ, ಒಂದು ವಿಮಾನ ಬುಡಾಪೆಸ್ಟ್ಗೆ ತೆರಳಲಿದೆ ಎಂದು ಹೇಳಲಾಗಿದೆ.
ನೆರವಿನ ನಿರೀಕ್ಷೆಯಲ್ಲಿ 346 ಕನ್ನಡಿಗರು: ಯುದ್ಧಪೀಡಿತ ಯೂಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ಪೈಕಿ 346 ಕನ್ನಡಿಗರೂ ಸೇರಿದ್ದಾರೆ. ರಾಜ್ಯ ಸರ್ಕಾರ ಸ್ಥಾಪಿಸಿರುವ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ ಶುಕ್ರವಾರ ಮಧ್ಯಾಹ್ನ ದವರೆಗೆ ಇವರೆಲ್ಲರ ಮಾಹಿತಿ ಲಭ್ಯವಾಗಿದೆ.