

ಭ್ರಮೆ - ಇದು ಮನಸ್ಸಿನ ಗ್ರಹಿಕೆ. ಇಲ್ಲದ್ದು ಇದೆ ಎಂಬ ತಿಳಿವಳಿಕೆ. ವಸ್ತುಸ್ಥಿತಿಯನ್ನು ಬಿಟ್ಟು ಕಾಲ್ಪನಿಕತೆಯೇ ಇದರ ಮೂಲ. ಮಿದುಳಿನ ನರವಾಹಿನಿ ಹಾಗೂ ರಾಸಾಯನಿಕ ದ್ರವ್ಯಗಳ ಏರುಪೇರುಗಳೇ ಇದಕ್ಕೆ ಕಾರಣ. ಇದರಿಂದಲೇ ಮನುಷ್ಯನ ತಿಳಿವಳಿಕೆ ಮತ್ತು ಕಲ್ಪನೆಯಲ್ಲಿ ಏರುಪೇರು ಉಂಟಾಗುತ್ತದೆ. ಬೇರೆಯವರು ತಮ್ಮನ್ನೇ ನೋಡಿದ
ಕಳೆದ ವಾರ ಒಬ್ಬ ವ್ಯಕ್ತಿ ಬಂದಿದ್ದರು. ಆತನ ಸಮಸ್ಯೆಯೇ ವಿಚಿತ್ರವಾಗಿತ್ತು. ಆತನ ಹೆಂಡತಿಯ ಊಹಾತ್ಮಕ ಲೋಕವೇ ಆ ರೀತಿಯದ್ದಾಗಿತ್ತು. ‘ಮನೆಯಲ್ಲಿ ಚಿಪ್ ಅಳವಡಿಸಿದ್ದಾರೆ, ತಮ್ಮ ಮನೆಯಲ್ಲಿ ನಡೆಯುವ ಎಲ್ಲ ಕೆಲಸಕಾರ್ಯಗಳು ನೆರೆಹೊರೆಯವರಿಗೆ ಗೊತ್ತಾಗುತ್ತದೆ, ಅವರು ತನ್ನನ್ನೇ ಅನುಸರಿಸುತ್ತಾರೆ, ತನ್ನ ಬಗ್ಗೆಯೇ ಮಾತನಾಡುತ್ತಾರೆ, ಈ ಮನೆಯಲ್ಲಿ ಯಾರೋ ಮಾತಾಡುತ್ತಾರೆ, ಅದು ತನಗೆ ಕೇಳಿಸುತ್ತದೆ’ ಎಂದು ಆತನ ಪತ್ನಿ ಪ್ರತಿನಿತ್ಯ ಗೋಗರೆಯುತ್ತಿದ್ದಳು.
ಹೆಂಡತಿಯ ಮಾತು ಕೇಳಿದ ಆತನೂ ನೆರೆಹೊರೆಯವರಿಗೆ ಹೀಗೆ ಪ್ರಶ್ನಿಸುತ್ತಿದ್ದ. ‘ನೀವೇಕೆ ನನ್ನ ಪತ್ನಿಯನ್ನು ಹಿಂಬಾಲಿಸುತ್ತಿದ್ದೀರಿ? ಅವಳ ಬಗ್ಗೆ ಮಾತನಾಡುತ್ತಿದ್ದೀರಿ?’. ಅದಕ್ಕೆ ನೆರೆಹೊರೆಯವರು, ‘ನಾವೇಕೆ ನಿಮ್ಮ ಹೆಂಡತಿ ಬಗ್ಗೆ ಮಾತಾಡೋಣ? ಏಕೆ ಹಿಂಬಾಲಿಸೋಣ? ನಮಗೆ ಬೇರೆ ಕೆಲಸವಿಲ್ಲವೇ?’ ಎನ್ನುತ್ತಿದ್ದರು. ಗಂಡ ಕೂಡ ಅದನ್ನು ಚಿಂತಿಸಿ ಹೆಂಡತಿಯ ಮುಂದೆ ಪ್ರಸ್ತಾಪಿಸಿದಾಗ ಆಕೆ ಅದನ್ನು ಖಡಾಖಂಡಿತವಾಗಿ ನಿರಾಕರಿಸಿದಳು. ‘ಅದು ನಿಜ. ಈ ಮನೆಯೇ ಬೇಡ, ಬೇರೆ ಮನೆಗೆ ಹೋಗೋಣ’ ಎಂದು ಐದು ವರ್ಷಗಳಲ್ಲಿ ಇದೇ ರೀತಿ ಆಗಿ 8-10 ಮನೆ ಬದಲಾಯಿಸಿದರು. ಯಾವ ಮನೆಗೆ ಹೋದರೂ ಹೆಂಡತಿಯ ಭ್ರಮೆ ಮಾತ್ರ ಕಡಿಮೆಯಾಗಲಿಲ್ಲ. ‘ನೆರೆಹೊರೆಯವರು ಚಿಪ್ ಇಟ್ಟಿದ್ದಾರೆ, ನನ್ನನ್ನೇ ನೋಡುತ್ತಾರೆ, ನನ್ನ ಬಗ್ಗೆಯೇ ಮಾತಾಡುತ್ತಾರೆ. ನಮ್ಮ ಮನೆಯಲ್ಲಿನ ಎಲ್ಲ ಘಟನೆಗಳೂ ಅವರಿಗೆ ತಿಳಿಯುತ್ತವೆ. ಸಿ.ಸಿ. ಕ್ಯಾಮರಾ ಇಟ್ಟಿದ್ದಾರೆ’ ಎಂದೇ ಆಕೆ ಪದೇಪದೆ ಹೇಳುತ್ತಿದ್ದಳು. ಎಲ್ಲಿ ಮನೆಮಾಡಿದರೂ ಆಕೆಯ ಗಂಡ ನರೆಹೊರೆಯವರ ಜೊತೆ ಈ ಬಗ್ಗೆ ಮಾತನಾಡುವುದು, ಅವರು, ‘ನಾವೇಕೆ ಆ ತರಹ ಮಾತಾಡುತ್ತೇವೆ? ನಮಗೆ ಬೇರೆ ಕೆಲಸವಿಲ್ಲವೇ?’ ಎನ್ನುವುದು ಸಾಮಾನ್ಯವಾಗಿತ್ತು. ಅದರ ಬಗ್ಗೆ ತಿಳಿಹೇಳಿದಾಗ ಆಕೆ ಒಪ್ಪದಿರುವುದು, ಇದೇ ರೀತಿ ಪ್ರತಿ ಸಲ ಮನೆಯಲ್ಲಿ ಗೊಂದಲ ಉಂಟಾಗುತ್ತಿತ್ತು.
ಅವರಿಗೆ ಒಬ್ಬ ಆಪ್ತಸಮಾಲೋಚಕರ ಪರಿಚಯವಾಯಿತು. ಅವರು ಗಮನಿಸಿದಾಗ ಆಕೆಗೆ ಮಾನಸಿಕ ಕಾಯಿಲೆ ಕಾಡುತ್ತಿರುವುದು ತಿಳಿಯಿತು. ಅವರು ಆ ದಂಪತಿಗೆ ಕ್ರಮೇಣ ಆಪ್ತಸಮಾಲೋಚನೆಯ ಮುಖಾಂತರ ತಿಳಿಹೇಳಿದಾಗ ಅದೊಂದು ಭ್ರಮೆಯ ಮಾನಸಿಕ ಕಾಯಿಲೆ, ಅದಕ್ಕೆ ತಕ್ಕ ಮನೋವೈದ್ಯರ ಕಡೆ ಯೋಗ್ಯ ಸಲಹೆ ಪಡೆದು ಔಷಧ ತೆಗೆದುಕೊಂಡರೆ ಪರಿಹಾರ ಸಿಗುತ್ತದೆ. ದಾಂಪತ್ಯಜೀವನವೂ ಸರಿಹೋಗುತ್ತದೆಂದು ಗೊತ್ತಾಯಿತು. ಬೇರೆಯವರ ಕಾರಣಕ್ಕೆ ತಾನ್ಯಾಕೆ ಔಷಧ ತೆಗೆದುಕೊಳ್ಳಬೇಕು ಎಂಬುದೇ ಅವಳ ಪ್ರಶ್ನೆಯಾಗಿತ್ತು. ಮನೋವೈದ್ಯರ ಚಾಕಚಕ್ಯತೆ ಮತ್ತು ಆಪ್ತಸಮಾಲೋಚನೆಯ ಪರಿಣಾಮದಿಂದ ಮಾತ್ರೆ ತೆಗೆದುಕೊಳ್ಳುವಂತಾದ ಮೇಲೆ ನಿಧಾನವಾಗಿ ಅವಳಲ್ಲಿ ಮತ್ತು ಅವಳ ಆಲೋಚನೆಗಳಲ್ಲಿ ಬದಲಾವಣೆ ಕಾಣತೊಡಗಿತು. ತಾನಾಡಿದ ಮಾತನ್ನೇ ತಿರುಗಿಸಿ, ‘ಅಯ್ಯೋ! ಅವರು ಮೊದಲಿದ್ದ ಹಾಗಿಲ್ಲ, ಬಹಳ ಬದಲಾಗಿದ್ದಾರೆ. ಮನುಷ್ಯರಲ್ಲವೇ? ಒಮ್ಮೊಮ್ಮೆ ಕೆಟ್ಟವರಾಗ್ತಾರೆ, ಒಳ್ಳೆಯವರೂ ಆಗ್ತಾರೆ. ನಾವೇ ಬುದ್ಧಿ ಕಲಿಯಬೇಕು. ನಾವೇ ಎಷ್ಟು ಬೇಕೋ ಅಷ್ಟಿದ್ದರಾಯಿತು’ ಎಂದಾಗ ಗಂಡ ಸಮಾಧಾನದ ನಿಟ್ಟುಸಿರು ಬಿಟ್ಟ.
ಜನ ಈ ಆಧುನಿಕ ಜಗತ್ತಿನಲ್ಲೂ ಅವರಿವರ ಇಲ್ಲಸಲ್ಲದ ಮಾತಿಗೆ ಕಿವಿಗೊಡುತ್ತಾರೆ. ಮೂಢನಂಬಿಕೆಗಳಿಗೆ ತುತ್ತಾಗುತ್ತಾರೆ. ಹಾಗಾಗಿ ಇಂಥ ಸಮಸ್ಯೆಗಳು ಎದುರಾದಾಗ ಯೋಗ್ಯ ಮನೋವೈದ್ಯರ ಬಳಿ ಹೋಗಿ ಸಲಹೆ, ಆಪ್ತಸಮಾಲೋಚನೆ, ಔಷಧ ತೆಗೆದುಕೊಂಡರೆ ಮಾನಸಿಕ ಕಾಯಿಲೆಗೆ ತುತ್ತಾಗದೆ ಒಳ್ಳೆಯ ಜೀವನ ರೂಪಿಸಿಕೊಳ್ಳಲು ಸಾಧ್ಯ.