ಮೇಲ್ಮನೆ ಪ್ರವೇಶಕ್ಕೆ ಸಿಗದ ಅವಕಾಶ; ಬಿಜೆಪಿಯಲ್ಲಿ ಅಸಮಾಧಾನ

BJP ROUND
Published on

ಬೆಂಗಳೂರು:
ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಸಿಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಹಲವು ಆಕಾಂಕ್ಷಿಗಳಿಗೆ ತೀವ್ರ ನಿರಾಸೆಯಾಗಿದ್ದು, ಅವರ ಆಕ್ರೋಶವನ್ನು ಒಂದೊಂದು ರೀತಿಯಲ್ಲಿ ಹೊರ ಹಾಕುತ್ತಿರುವುದು ಪಕ್ಷಕ್ಕೆ ಮುಜುಗರ ತಂದಿದೆ.
ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದ ಕಾರಣಕ್ಕಾಗಿ ವಿಧಾನ ಪರಿಷತ್ ಮೇಲೆ ಕಣ್ಣಿಟ್ಟುಕೊಂಡಿದ್ದ ಆಕಾಂಕ್ಷಿಗಳಲ್ಲಿ ಸಿ.ಟಿ.ರವಿ ಒಬ್ಬರಿಗೆ ಮಾತ್ರ ಅದೃಷ್ಟ ಕುಲಾಯಿಸಿದೆ. ಇನ್ನುಳಿದವರಿಗೆ ಹೈಕಮಾಂಡ್ ಅಪ್ಪಣೆ ಸಿಕ್ಕಿಲ್ಲ.
ತುಮಕೂರು ಲೋಕಸಭೆ ಚುನಾವಣೆ ಸ್ಪರ್ಧೆಗೆ ತೀವ್ರ ಪ್ರಯತ್ನ ನಡೆಸಿದ್ದ ಜೆ.ಸಿ.ಮಾಧುಸ್ವಾಮಿ ಟಿಕೆಟ್ ಸಿಗದೆ ಇದ್ದಾಗ ಅವರು ಪಕ್ಷದಿಂದ ಆಚೆಗೆ ಕಾಲು ತೆಗೆಯಲು ಮುಂದಾಗಿದ್ದರು. ಆ ಸಂದರ್ಭದಲ್ಲಿ ಖುದ್ದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮನವೊಲಿಕೆ ಮಾಡಿ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಮಾತನ್ನು ಈಡೇರಿಸಲು ಸಾಧ್ಯವಾಗಿಲ್ಲ. ಇದರಿಂದ ತೀವ್ರ ಅಸಮಾಧಾನಗೊಂಡಿರುವ ಮಾಧುಸ್ವಾಮಿ ಆಪ್ತರ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಂಸದರಾಗುವ ಕನಸು ಇಟ್ಟುಕೊಂಡಿದ್ದ ಪ್ರತಾಪಸಿಂಹ ಅವರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಲೋಕಸಭೆಗೆ ಟಿಕೆಟ್ ಸಿಗದೆ ಇದ್ದಾಗ, ವಿಧಾನ ಪರಿಷತ್ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದರು. ಅದೂ ಕೈ ತಪ್ಪಿದಾಗ ಪಕ್ಷದ ನಾಯಕರ ವಿರುದ್ದವೇ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಉಡುಪಿಯ ರಘುಪತಿ ಭಟ್ ಅವರಿಗೆ ಟಿಕೆಟ್ ನಿರಾಕರಿಸಿರುವುದನ್ನು ಉಲ್ಲೇಖ ಮಾಡಿ ಟ್ವೀಟ್ ಮಾಡಿರುವ ಪ್ರತಾಪಸಿಂಹ, ಬುರ್ಖ ಧರಿಸಿ ಕ್ಲಾಸಿಗೆ ಬಂದಿದ್ದ್ದ ಜಿಹಾದಿ ಮನಸ್ಥಿತಿಯ ವಿರುದ್ದ ಹೋರಾಟ ಮಾಡಿದ್ದ ರಘುಪತಿಭಟ್ ಅವರಿಗೆ ಎಂಎಲ್‌ಎ ಟಿಕೆಟ್ ಸಿಗಲಿಲ್ಲ, ಎಂಎಲ್‌ಸಿ ಟಿಕೆಟ್ಟನ್ನೂ ಕೊಡಲಿಲ್ಲ. ಸಾಲದೆಂಬಂತೆ ಪಕ್ಷದಿಂದ ಉಚ್ಛಾಟನೆಯನ್ನು ಮಾಡಲಾಗಿದೆ. ಅಂದು ಬುರ್ಖ ಧರಿಸಿ ಬಂದಿದ್ದ ವಿದ್ಯಾರ್ಥಿ ಅಲಿಯಾ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ ಎಂದು ಕುಟುಕಿರುವುದು ಪಕ್ಷದ ನಾಯಕರಿಗೆ ಇರುಸು ಮುರುಸು ತಂದಿದೆ. ಮೇಲ್ಮನೆ ಪ್ರವೇಶಕ್ಕೆ ಸಿಗದ ಅವಕಾಶ
ಬಿಜೆಪಿಯಲ್ಲಿ ಮಡುಗಟ್ಟಿದ ಅಸಮಾಧಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net